ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ವರ್ಷದಲ್ಲಿ 140 ಖಾಸಗಿ ವಿ.ವಿ ಸ್ಥಾಪನೆ: ಕರ್ನಾಟಕ ಸೇರಿ 4 ರಾಜ್ಯಗಳು ಮುಂಚೂಣಿ

ಗುಜರಾತ್‌, ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ ಮುಂಚೂಣಿ
Published 24 ಡಿಸೆಂಬರ್ 2023, 12:54 IST
Last Updated 24 ಡಿಸೆಂಬರ್ 2023, 12:54 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಹತ್ತು ಖಾಸಗಿ ವಿಶ್ವವಿದ್ಯಾಲಯಗಳು ಸೇರಿದಂತೆ ದೇಶದಾದ್ಯಂತ ಒಟ್ಟು 140 ವಿ.ವಿಗಳು ಸ್ಥಾಪನೆಯಾಗಿವೆ. ಇದರಲ್ಲಿ ಗುಜರಾತ್‌, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಸಿಂಹಪಾಲು ಹೊಂದಿವೆ.   

‘ಪಿಟಿಐ’ ಸುದ್ದಿಸಂಸ್ಥೆಗೆ ಲಭಿಸಿರುವ ಶಿಕ್ಷಣ ಸಚಿವಾಲಯದ ಅಂಕಿ–ಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಗರಿಷ್ಠ ಸಂಖ್ಯೆಯ 40 ಖಾಸಗಿ ವಿ.ವಿಗಳನ್ನು 2018-19ರಲ್ಲಿ ಮತ್ತು 34 ವಿ.ವಿಗಳನ್ನು 2021-22ರ ಶೈಕ್ಷಣಿಕ ಅವಧಿಯಲ್ಲಿ ಸ್ಥಾಪಿಸಲಾಗಿದೆ.

‘ಖಾಸಗಿ ವಿಶ್ವವಿದ್ಯಾಲಯಗಳನ್ನು ಸಂಬಂಧಿತ ರಾಜ್ಯ ಶಾಸಕಾಂಗವು ಅಂಗೀಕರಿಸಿದ ಕಾಯ್ದೆ ಮತ್ತು ರಾಜ್ಯ ಸರ್ಕಾರದ ಅಧಿಸೂಚನೆಯಡಿ ಸ್ಥಾಪಿಸಲಾಗಿದೆ. ಖಾಸಗಿ ವಿ.ವಿಗಳ ಹೆಸರನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು  ಯುಜಿಸಿ ಕಾಯ್ದೆ, 1956ರ ಸೆಕ್ಷನ್ 2 (ಎಫ್) ಪ್ರಕಾರ ಮತ್ತು ವಿಶ್ವವಿದ್ಯಾಲಯದಿಂದ ಅಧಿಸೂಚನೆ ಸ್ವೀಕರಿಸಿದ ನಂತರ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸೇರಿಸಲಾಗಿದೆ’ ಎಂದು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಇಂತಹ ಖಾಸಗಿ ವಿಶ್ವವಿದ್ಯಾಲಯಗಳು ಯುಜಿಸಿಯ ನಿರ್ದಿಷ್ಟ ಅನುಮೋದನೆಯಿಲ್ಲದೆ ಸಾಮಾನ್ಯ ಪದವಿ ಕೋರ್ಸ್‌ಗಳ ಶಿಕ್ಷಣ ನೀಡಲು ಅಧಿಕಾರ ಹೊಂದಿವೆ’ ಎಂದು ಅಧಿಕಾರಿ ಹೇಳಿದರು.

‘ಆದಾಗ್ಯೂ ವೃತ್ತಿಪರ ಮತ್ತು ವೈದ್ಯಕೀಯ ಕೋರ್ಸ್‌ಗಳನ್ನು ಇಂತಹ ವಿ.ವಿಗಳು ನಡೆಸಲು ಆಯಾ ನಿಯಂತ್ರಕ ಅಥವಾ ಶಾಸನಬದ್ಧ ಸಂಸ್ಥೆಗಳು ಅನುಮೋದನೆಗಳನ್ನು ನೀಡುತ್ತವೆ. ಅಲ್ಲದೆ, ವೃತ್ತಿಪರ ಮತ್ತು ವೈದ್ಯಕೀಯ ಕೋರ್ಸ್‌ಗಳ ಮೇಲೆ ಆಯಾ ಸಂಸ್ಥೆಗಳಾದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ರಾಷ್ಟ್ರೀಯ ವೈದ್ಯಕೀಯ ಆಯೋಗ, ಡೆಂಟಲ್‌ ಕೌನ್ಸಿಲ್‌ ಆಫ್‌ ಇಂಡಿಯಾ ನಿಯಂತ್ರಣ ಹೊಂದಿವೆ’ ಎಂದೂ ಅವರು ತಿಳಿಸಿದರು.

‘ಈ ವಿಶ್ವವಿದ್ಯಾಲಯಗಳೊಂದಿಗೆ ಯುಜಿಸಿ ನಿರಂತರ ಸಮಾಲೋಚನೆ ನಡೆಸುತ್ತದೆ. ಇವು ಯುಜಿಸಿ ನಿಯಮಾವಳಿಗಳನ್ನು ಪಾಲಿಸುತ್ತಿವೆಯೇ ಎನ್ನುವುದನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಲಾಗುತ್ತಿದೆ. ಈ ವಿಶ್ವವಿದ್ಯಾಲಯಗಳು ಪ್ರಮುಖ ನಿಯಮಾವಳಿಯನ್ನು ಉಲ್ಲಂಘಿಸಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂಬುದನ್ನು ಯುಜಿಸಿ ಖಚಿತಪಡಿಸಿದೆ ’ ಎಂದೂ ಅವರು ಹೇಳಿದ್ದಾರೆ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT