ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಹಾರ | ಜಾತಿ ಕಲಹ; 21 ಮನೆಗಳಿಗೆ ಬೆಂಕಿ

Published : 19 ಸೆಪ್ಟೆಂಬರ್ 2024, 4:35 IST
Last Updated : 19 ಸೆಪ್ಟೆಂಬರ್ 2024, 4:35 IST
ಫಾಲೋ ಮಾಡಿ
Comments

ಪಟ್ನಾ: ಬಿಹಾರದಲ್ಲಿ ಜಾತಿ ಕಲಹ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದ ನವಾದಾ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಮಹಾದಲಿತ್ ಜಾತಿಗೆ ಸೇರಿದ 21 ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿದೆ. ಮಹಾದಲಿತ್ ಜಾತಿಯವರೇ ಸರ್ಕಾರಿ ಭೂಮಿಯ ದೊಡ್ಡ ಭಾಗದ ‘ಮಾಲೀಕತ್ವ’ ಹೊಂದಿದ್ದಾರೆ ಎಂಬ ಆಕ್ಷೇಪ ಇದಕ್ಕೆ ಕಾರಣವಾಗಿದೆ.

ವಸತಿ ಮತ್ತು ವಾಣಿಜ್ಯ ಭೂಮಿಗಳ ಮಾಲೀಕತ್ವ ಯಾರದು ಎಂದು ಗುರುತಿಸಲು ಬಿಹಾರ ಸರ್ಕಾರವು ಇತ್ತೀಚೆಗೆ ರಾಜ್ಯವ್ಯಾಪಿ ಸರ್ವೆ ನಡೆಸುವ ಕಾರ್ಯಾಚರಣೆಗೆ ಚಾಲನೆ ನೀಡಿದೆ.

ನವಾದಾ ಜಿಲ್ಲೆಯ ಕೃಷ್ಣಾನಗರ ಹಾಡಿ ಪ್ರದೇಶದಲ್ಲಿ ಸರ್ವೆ ನಡೆಯುವ ವೇಳೆಯೇ ಬಹುತೇಕ ದಲಿತರೇ ಇದ್ದ ಗುಂಪು, ಮಹಾದಲಿತ್‌ ಜಾತಿಯವರು ವಾಸವಿದ್ದ ಹಾಡಿ ಮೆಲೆ ದಾಳಿ ನಡೆಸಿದ್ದು, ಬೆಂಕಿ ಹಚ್ಚಿದೆ.

ಮಾಧ್ಯಮ ವರದಿಗಳ ಪ್ರಕಾರ, ಒಟ್ಟು 80 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಆದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್‌ ಧಿಮನ್, ‘21 ಗುಡಿಸಲುಗಳಿಗೆ ಬೆಂಕಿಹಚ್ಚಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಬೆಂಕಿ ಅವಘಡದಲ್ಲಿ ಯಾರಿಗೂ ಗಾಯವಾಗಿಲ್ಲ. ಮುಖ್ಯ ಆರೋಪಿ ನಂದು ಪಾಸ್ವಾನ್ ಮತ್ತು ಇತರೆ ಒಂಬತ್ತು ಜನರನ್ನು ಬಂಧಿಸಲಾಗಿದೆ’ ಎಂದು ಎಸ್‌ಪಿ ಗುರುವಾರ ತಿಳಿಸಿದರು.

ಬಿಹಾರದಲ್ಲಿ ಪಾಸ್ವಾನ್‌ ಸಮುದಾಯದವರನ್ನು ದಲಿತರಾಗಿ, ಮಾಂಝಿಗಳನ್ನು ಮಹಾದಲಿತ್ ಎಂದು ವರ್ಗೀಕರಿಸಲಾಗಿದೆ. ಇವು, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅತಿ ಹಿಂದುಳಿದ ವರ್ಗಗಳಾಗಿವೆ.

ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ ಅವರು ಪಾಸ್ವಾನ್‌ ಸಮುದಾಯದವರು ಇವರ ತಂದೆ ರಾಮ್‌ವಿಲಾಸ್‌ ಪಾಸ್ವಾನ್‌ ಈ ಸಮುದಾಯದ ಅಗ್ರಗಣ್ಯ ನಾಯಕರಾಗಿದ್ದರು. ಮತ್ತೊಬ್ಬ ಮಾಜಿ ಸಚಿವ ಜಿತನ್ ರಾಮ್‌ ಮಾಂಝಿ ಅವರು ಮಹಾದಲಿತ್ ಸಮುದಾಯದವರು. 

ಬುಧವಾರದ ಘಟನೆಗೆ ಪ್ರತಿಕ್ರಿಯಿಸಿರುವ ಸಚಿವ ಮಾಂಝಿ, ‘ಈ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣಕ್ರಮವನ್ನು ಕೈಗೊಳ್ಳಬೇಕು’ ಎಂದು ನಿತೀಶ್‌ ಕುಮಾರ್‌ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಚಿರಾಗ್ ಪಾಸ್ವಾನ್‌ ಅವರು, ‘ತಪ್ಪು ಮಾಡಿದವರನ್ನು ಶೀಘ್ರ ಬಂಧಿಸಿ ಕ್ರಮಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ. 

ವಿರೋಧಪಕ್ಷದ ನಾಯಕ ತೇಜಸ್ವಿ ಯಾದವ್ ಅವರು, ಕೃತ್ಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

‘ಬಿಹಾರದಲ್ಲೀಗ ಮಹಾಜಂಗಲ್‌ ರಾಜ್‌ ಇದೆ. ನವಾದಾದಲ್ಲಿ ನೂರಾರು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಡಬ್ಬಲ್‌ ಎಂಜಿನ್‌ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ. ಬಡವರ ಮಕ್ಕಳು ಬೆಂಕಿಗೆ ಬಲಿಯಾದರೂ ಗಮನಿಸುವುದಿಲ್ಲ. ದುರ್ಬಲ ವರ್ಗದವರ ಮೇಲೆ ಆಗುತ್ತಿರುವ ದೌರ್ಜನ್ಯ ಕುರಿತು ಸಿ.ಎಂ ಅವರೇ ಯಾವಾಗ ಮಾತನಾಡುತ್ತೀರಿ?’ ಎಂದು ‘ಎಕ್ಸ್‌’ ಮೂಲಕ ಪ್ರಶ್ನಿಸಿದ್ದಾರೆ. 

ಈ ಮಧ್ಯೆ, ಕೃತ್ಯದ ಬಗ್ಗೆ ಮೊಕದ್ದಮೆ ದಾಖಲಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಜರುಗಿಸಬೇಕು ಎಂದು ಸಿ.ಎಂ ನಿತೀಶ್‌ ಕುಮಾರ್ ಆದೇಶಿಸಿದ್ದರು. ಸ್ಥಳಕ್ಕೆ ಎಸ್‌.ಪಿ, ಇತರೆ ಅಧಿಕಾರಿಗಳು ಧಾವಿಸಿದ್ದಾರೆ.

ಈ ಕೃತ್ಯ ಖಂಡನೀಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ಮುಖ್ಯಮಂತ್ರಿ ನಿತೀಶ್‌ ಕುಮಾರ್ ವಿಫಲರಾಗಿದ್ದಾರೆ. ನಿರ್ದಿಷ್ಟ ಸಮುದಾಯದ ಆರ್‌ಜೆಡಿ ಬೆಂಬಲಿಗರನ್ನೇ ಗುರಿಯಾಗಿಸಿ ಬಂಧಿಸಲಾಗಿದೆ.
–ಲಾಲು ಪ್ರಸಾದ್, ಆರ್‌ಜೆಡಿ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT