ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ರಾಜ್ಯಗಳ 6 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ: ಕಾಂಗ್ರೆಸ್‌ಗೆ 3, ಬಿಜೆಪಿಗೆ 2

Last Updated 2 ಮಾರ್ಚ್ 2023, 16:13 IST
ಅಕ್ಷರ ಗಾತ್ರ

ಸಾಗರ್‌ದಿಘಿ/ಚೆನ್ನೈ/ಪುಣೆ/ರಾಮಗಢ (ಪಿಟಿಐ): ಐದು ರಾಜ್ಯಗಳ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಐದು ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್‌ ಜಯಗಳಿಸಿದೆ.

ಅರುಣಾಚಲ ಪ್ರದೇಶದ ಲುಮ್ಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೆರಿಂಗ್‌ ಲಾಮು ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಬಿಜೆಪಿ ಬೆಂಬಲಿತ ಎಜೆಎಸ್‌ಯು ಪಕ್ಷದ ಸುನಿತಾ ಚೌಧರಿ ಅವರು ಜಾರ್ಖಂಡ್‌ನ ರಾಮಗಢ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕಸಬಾ ಪೇಠ್‌ ಹಾಗೂ ಚಿಂಚ್‌ವಡ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಇದರಲ್ಲಿ ಕಸಬಾ ಪೇಠ್‌ನಲ್ಲಿ ಕಾಂಗ್ರೆಸ್‌ ಹಾಗೂ ಚಿಂಚ್‌ವಡ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದೆ.‌

ಪಶ್ಚಿಮ ಬಂಗಾಳದ ವಿಧಾನಸಭೆಗೆ 2021ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಎಡಪಕ್ಷಗಳು ಒಂದು ಕ್ಷೇತ್ರವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ, ಸಾಗರ್‌ದಿಘಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬೈರೋನ್‌ ಬಿಸ್ವಾಸ್‌ ಅವರು ಟಿಎಂಸಿ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದಾರೆ.

ಸಾಗರ್‌ದಿಘಿ ವಿಧಾನಸಭಾ ಕ್ಷೇತ್ರವು ಟಿಎಂಸಿಯ ಭದ್ರಕೋಟೆಯಾಗಿತ್ತು. ಜೊತೆಗೆ, ಈ ಉಪಚುನಾವಣೆಯು ಪಶ್ಚಿಮ ಬಂಗಾಳದ ಕಾಂಗ್ರೆಸ್‌ ಅಧ್ಯಕ್ಷ ಅಧೀರ್‌ ರಂಜನ್‌ ಚೌಧರಿ ಅವರಿಗೂ ಪ್ರತಿಷ್ಠೆಯದ್ದಾಗಿತ್ತು.

ಈರೋಡ್‌ (ಪೂರ್ವ) ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಇ.ವಿ.ಕೆ.ಎಸ್‌. ಇಳಂಗೋವನ್‌ ಅವರು ಭಾರಿ ಅಂತರದಿಂದ ಜಯಗಳಿಸಿದ್ದಾರೆ. ‘ದ್ರಾವಿಡ ಮಾದರಿ ಆಡಳಿತ’ಕ್ಕೆ ಸಂದ ಜಯ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ಉಪಚುನಾವಣಾ ಫಲಿತಾಂಶವನ್ನು ಬಣ್ಣಿಸಿದ್ದಾರೆ. ಡಿಎಂಕೆ ಹಾಗೂ ನಟ ಕಮಲ ಹಾಸನ್‌ ನೇತೃತ್ವದ ಮಕ್ಕಳ ನೀದಿ ಮೈಯ್ಯಮ್‌ (ಎಂಎಎಂ) ಪಕ್ಷವು ಇಳಂಗೋವನ್‌ ಅವರಿಗೆ ಬೆಂಬಲ ನೀಡಿದ್ದವು.

ಪ್ರಬಲ ನೆಲೆ ಕಳೆದುಕೊಂಡ ಬಿಜೆಪಿ

ಶಿವಸೇನಾ (ಶಿಂದೆ ಬಣ) ಹಾಗೂ ಬಿಜೆಪಿ ಮೈತ್ರಿಯ ಏಕನಾಥ ಶಿಂದೆ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ಮಹಾರಾಷ್ಟ್ರದಲ್ಲಿ ನಡೆದ ಮೊದಲ ನೇರ ಹಣಾಹಣಿ ಇದು. ಈ ಕಾರಣಕ್ಕಾಗಿ ಈ ಉಪಚುನಾವಣೆಗೆ ಮಹತ್ವ ಬಂದಿತ್ತು.

ಬಿಜೆಪಿಯ ಪ್ರಬಲ ನೆಲೆಯಾಗಿದ್ದು, ಕಳೆದ 28 ವರ್ಷಗಳಿಂದ ಸತತವಾಗಿ ಜಯಗಳಿಸಿದ್ದ ಮಹಾರಾಷ್ಟ್ರದ ಕಸಬಾ ಪೇಠ್‌ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಪಕ್ಷ ವಿಫಲವಾಗಿದೆ. ಕಾಂಗ್ರೆಸ್‌ನ ರವೀಂದ್ರ ದಂಗೇಕರ್‌ ಅವರು ಉಪಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಎನ್‌ಸಿಪಿ, ಶಿವಸೇನಾ (ಉದ್ಧವ್‌ ಬಣ) ರವೀಂದ್ರ ಅವರಿಗೆ ಬೆಂಬಲ ನೀಡಿದ್ದವು.

ಚಿಂಚ್‌ವಡ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಅಶ್ವಿನಿ ಜಗಪತ್‌ ಅವರು ಜಯಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT