ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Punjab Elections: ಎಎಪಿ ಹೊರಹೊಮ್ಮಿರುವುದು ಆರ್‌ಎಸ್‌ಎಸ್‌ನಿಂದ–ಪ್ರಿಯಾಂಕಾ ಟೀಕೆ

Last Updated 13 ಫೆಬ್ರುವರಿ 2022, 10:39 IST
ಅಕ್ಷರ ಗಾತ್ರ

ಚಂಡೀಗಡ: ಆಮ್‌ ಆದ್ಮಿ ಪಕ್ಷವು (ಎಎಪಿ) ಬಲಪಂಥೀಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ (ಆರ್‌ಎಸ್‌ಎಸ್‌) ಹೊರಹೊಮ್ಮಿರುವುದಾಗಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.

ಪಂಜಾಬ್‌ನ ಕೋಟ್‌ ಕಪುರಾದಲ್ಲಿ ಭಾನುವಾರ ನಡೆದ 'ನವಿ ಸೋಚ್‌ ನವಾ ಪಂಜಾಬ್‌' ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

'ಆಮ್‌ ಆದ್ಮಿ ಪಕ್ಷವು ಆರ್‌ಎಸ್‌ಎಸ್‌ನಿಂದ ಹೊರಹೊಮ್ಮಿದೆ. ಎಎಪಿ ಸರ್ಕಾರವಿರುವ ದೆಹಲಿಯಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಆರೋಗ್ಯ ಸಂಸ್ಥೆಗಳ ಹೆಸರಿನಲ್ಲಿ ಯಾವುದೇ ಕಾರ್ಯವೂ ಆಗಿಲ್ಲ. ರಾಜಕೀಯ ಪಕ್ಷಗಳು ಮತ್ತು ಅವುಗಳ ಮುಖಂಡರ ಕುರಿತ ಸತ್ಯವನ್ನು ತಿಳಿಯುವುದು ಬಹಳ ಮುಖ್ಯ' ಎಂದು ಪ್ರಿಯಾಂಕಾ ಹೇಳಿದರು.

'ಅವರು ತಮ್ಮ ದೆಹಲಿ ಮಾದರಿಯನ್ನು ಇಲ್ಲಿ ತರುವುದಾಗಿ ಹೇಳುತ್ತಿದ್ದಾರೆ. 2014ರಲ್ಲಿ ಬಿಜೆಪಿಯು ಗುಜರಾತ್‌ ಮಾದರಿಯ ಅಭಿವೃದ್ಧಿ ತರುವುದಾಗಿ ಹೇಳಿ ಜನರನ್ನು ಮೂರ್ಖರನ್ನಾಗಿ ಮಾಡಿದ್ದನ್ನು ಮರೆಯಬೇಡಿ. ಈ ಬಾರಿ ಎಎಪಿಯಿಂದ ಮೂರ್ಖರಾಗದಿರಿ' ಎಂದರು.

ಕೋಟ್‌ ಕಪುರಾದ ಕಾಂಗ್ರೆಸ್‌ ಅಭ್ಯರ್ಥಿ ಅಜಯ್‌ಪಾಲ್‌ ಸಿಂಗ್‌ ಸಂಧು ಅವರ ಪರವಾಗಿ ಪ್ರಿಯಾಂಕಾ ಪ್ರಚಾರ ನಡೆಸಿದ್ದು, 'ಪಂಜಾಬ್‌ ಸರ್ಕಾರವನ್ನು ಪಂಜಾಬ್‌ನಿಂದಲೇ ಆಡಳಿತ ನಡೆಸಬೇಕು, ದೆಹಲಿಯಿಂದ ಅಲ್ಲ. ಎಎಪಿ ಅಥವಾ ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿಯಿಂದ ಆಡಳಿತ ನಡೆಯಲಿದೆ' ಎಂದು ಜನರನ್ನು ಎಚ್ಚರಿಸಿದರು.

ಹಾಲಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು 'ನಿಮ್ಮ ಜೊತೆಗೆ ಒಬ್ಬ ಸಾಮಾನ್ಯನಂತೆ ಇರುವ ವ್ಯಕ್ತಿ' ಎಂದು ಪ್ರಿಯಾಂಕಾ ಬಣ್ಣಿಸಿದರು.

ಕ್ಯಾಪ್ಟರ್‌ ಅಮರಿಂದರ್‌ ಮೂಲಕ ಪಂಜಾಬ್‌ ಸರ್ಕಾರದಲ್ಲಿ ಬಿಜೆಪಿ ಹಸ್ತಕ್ಷೇಪ

ಕಾಂಗ್ರೆಸ್‌ ನೇತೃತ್ವದ ಪಂಜಾಬ್‌ ಸರ್ಕಾರವನ್ನು ಅಂದಿನ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರ ಮುಖೇನ ಕೇಂದ್ರದಿಂದ ಬಿಜೆಪಿಯು ನಡೆಸುತ್ತಿತ್ತು.

'ಕಳೆದ ಐದು ವರ್ಷಗಳಿಂದ ಪಂಜಾಬ್‌ನಲ್ಲಿ ಕಾಂಗ್ರೆಸ್‌ ಸರ್ಕಾರವಿತ್ತು. ಆ ಸರ್ಕಾರವು ಪಂಜಾಬ್‌ನಿಂದ ಕಾರ್ಯಾಚರಿಸುವುದನ್ನು ನಿಲ್ಲಿಸಿತ್ತು ಹಾಗೂ ಅದನ್ನು ಕಾಂಗ್ರೆಸ್‌ ಬದಲು ಬಿಜೆಪಿಯು ಕೇಂದ್ರದಿಂದ ನಡೆಸುತ್ತಿತ್ತು. ಆ ಗುಪ್ತ ಹೊಂದಾಣಿಕೆಯು ಈಗ ಬಹಿರಂಗವಾಗಿದೆ. ಆ ಕಾರಣದಿಂದಾಗಿಯೇ ಚನ್ನಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದು..' ಎಂದು ಪ್ರಿಯಾಂಕಾ ಅಮರಿಂದರ್‌ ಅವರನ್ನು ಟೀಕಿಸಿದರು.

ಮುಖ್ಯಮಂತ್ರಿ ಸ್ಥಾನ ತೊರೆದ ಕಾಂಗ್ರೆಸ್‌ನ ಅಮರಿಂದರ್‌ ಸಿಂಗ್‌, ಹೊಸ ಪಕ್ಷ 'ಪಂಜಾಬ್‌ ಲೋಕ ಕಾಂಗ್ರೆಸ್‌' (ಪಿಎಲ್‌ಸಿ) ಆರಂಭಿಸಿದರು. ಈಗ ಪಿಎಲ್‌ಸಿ ಮತ್ತು ಬಿಜೆಪಿಯು ಮೈತ್ರಿ ಮಾಡಿಕೊಂಡು ಪಂಜಾಬ್‌ ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ.

ಫೆಬ್ರುವರಿ 20ರಂದು ಪಂಜಾಬ್‌ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮಾರ್ಚ್‌ 10ರಂದು ಫಲಿತಾಂಶ ಹೊರ ಬರಲಿದೆ.

ಬಿಜೆಪಿ ವಿರುದ್ಧ ಹರಿಹಾಯ್ದ ಪ್ರಿಯಾಂಕಾ

ರೈತರ ವಿಚಾರಗಳಿಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಪ್ರಿಯಾಂಕಾ, 'ರೈತರ ಪ್ರತಿಭಟನೆಯ ವೇಳೆ ಹಲವು ಮಂದಿ ತಮ್ಮ ಪ್ರಾಣ ಕಳೆದುಕೊಂಡರು, ಆದರೆ ಧೃತಿಗೆಟ್ಟು ತಲೆ ಬಾಗಲಿಲ್ಲ. ಅದುವೇ ಪಂಜಾಬಿತನ. ನನಗೆ ಪಂಜಾಬಿತನದ ಪರಿಚಯವಿದೆ. ನಿಮಗೆಲ್ಲ ತಿಳಿದಿದೆ, ನಾನು ಮದುವೆಯಾಗಿರುವುದು ಪಂಜಾಬ್‌ನ ವ್ಯಕ್ತಿಯನ್ನು. ನನ್ನ ಮಕ್ಕಳಲ್ಲಿ ಪಂಜಾಬಿ ರಕ್ತ ಹರಿಯುತ್ತಿದೆ. ಪಂಜಾಬಿ ಜನರು ಧೈರ್ಯ ಶಾಲಿಗಳು... ' ಎಂದರು.

ಕಳೆದ ವರ್ಷ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರ ಘಟನೆಯ ಕುರಿತು ಪ್ರಸ್ತಾಪಿಸಿ, ಬಿಜೆಪಿ ಸಚಿವರ ಮಗನೇ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ ಎಂದರು. ಆ ಘಟನೆಯಲ್ಲಿ ನಾಲ್ವರು ರೈತರು ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT