ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಜ್ರಿವಾಲ್ ಬಂಧನ: ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣ ಬಹಿಷ್ಕರಿಸಲು ಎಎಪಿ ನಿರ್ಧಾರ

Published 27 ಜೂನ್ 2024, 5:27 IST
Last Updated 27 ಜೂನ್ 2024, 5:27 IST
ಅಕ್ಷರ ಗಾತ್ರ

ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಸಿಬಿಐ ಬುಧವಾರ ಬಂಧಿಸಿದ್ದು, ದೆಹಲಿ ನ್ಯಾಯಾಲಯವು ಅವರನ್ನು ಮೂರು ದಿನಗಳವರೆಗೆ ಸಿಬಿಐ ಕಸ್ಟಡಿಗೆ ನೀಡಿದೆ. ಇದನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ಸಂಸದರು ಸಂಸತ್ತಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನ ಉದ್ದೇಶಿಸಿ ಇಂದು(ಗುರುವಾರ) ಭಾಷಣ ಮಾಡಲಿದ್ದು, ನರೇಂದ್ರ ಮೋದಿ ಅವರ ಹೊಸ ಸರ್ಕಾರದ ಆದ್ಯತೆಗಳ ಬಗ್ಗೆ ಮಾತನಾಡುವ ಸಂಭವವಿದೆ. ರಾಷ್ಟ್ರಪತಿಯವರು 18ನೇ ಲೋಕಸಭೆ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುತ್ತಿದ್ದಾರೆ. 18ನೇ ಲೋಕಸಭೆಯ ಮೊದಲ ಅಧಿವೇಶನ ಸೋಮವಾರ ಆರಂಭವಾಗಿದ್ದು, ರಾಜ್ಯಸಭೆಯ 264ನೇ ಅಧಿವೇಶನವು ಜೂನ್ 27ರಂದು ಆರಂಭವಾಗಲಿದೆ.

ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐನೊಂದಿಗೆ ಮಾತನಾಡಿದ ಎಎಪಿ ನಾಯಕ ಸಂದೀಪ್ ಪಾಠಕ್, 'ರಾಷ್ಟ್ರಪತಿ ಮತ್ತು ಸಂವಿಧಾನವೇ ಸರ್ವೋಚ್ಚ. ನ್ಯಾಯದ ಹೆಸರಿನಲ್ಲಿ ಸರ್ವಾಧಿಕಾರ ನಡೆದಾಗ ಧ್ವನಿ ಎತ್ತುವುದು ಮುಖ್ಯ. ಇಂದು ನಾವು ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ಪ್ರತಿಭಟಿಸುತ್ತೇವೆ ಮತ್ತು ರಾಷ್ಟ್ರಪತಿ ಅವರ ಭಾಷಣವನ್ನು ಬಹಿಷ್ಕರಿಸುತ್ತೇವೆ' ಎಂದು ಹೇಳಿದರು.

'ಇಂಡಿಯಾ' ಕೂಟದ ಇತರ ಪಕ್ಷಗಳು ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸುತ್ತವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪಾಠಕ್, ನಾವು ಈ ಬಗ್ಗೆ ಮೈತ್ರಿಕೂಟದ ಉಳಿದ ಪಕ್ಷಗಳೊಂದಿಗೆ ಚರ್ಚೆ ನಡೆಸಿಲ್ಲ. ಆದರೆ ನಮ್ಮ ಪಕ್ಷ ರಾಷ್ಟ್ರಪತಿ ಅವರ ಭಾಷಣವನ್ನು ಬಹಿಷ್ಕರಿಸಲಿದೆ ಎಂದು ತಿಳಿಸಿದರು.

ಕೇಜ್ರಿವಾಲ್‌ 3 ದಿನ ಸಿಬಿಐ ಕಸ್ಟಡಿಗೆ

ತಿಹಾರ್‌ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಬುಧವಾರ ಬಂಧಿಸಿದ್ದು, ದೆಹಲಿ ನ್ಯಾಯಾಲಯವು ಅವರನ್ನು ಮೂರು ದಿನಗಳವರೆಗೆ ಸಿಬಿಐ ಕಸ್ಟಡಿಗೆ ನೀಡಿದೆ. ವಿಶೇಷ ನ್ಯಾಯಾಧೀಶರಿಂದ ಅನುಮತಿ ಪಡೆದ ಬಳಿಕ ಸಿಬಿಐ ಅಧಿಕಾರಿಗಳು ಕೇಜ್ರಿವಾಲ್‌ ಅವರನ್ನು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT