ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿಯ ಸುಳ್ಳುಗಳಿಗೆ ಸತ್ಯದ ಮೂಲಕ ತಿರುಗೇಟು ನೀಡಿ: ಕಾರ್ಯಕರ್ತರಿಗೆ ಎಎಪಿ ಕರೆ

Published : 26 ಆಗಸ್ಟ್ 2024, 5:30 IST
Last Updated : 26 ಆಗಸ್ಟ್ 2024, 5:30 IST
ಫಾಲೋ ಮಾಡಿ
Comments

ನವದೆಹಲಿ: ಬಿಜೆಪಿಯು ಹರಡುತ್ತಿರುವ ಸುಳ್ಳುಗಳಿಗೆ ಪ್ರತಿಯಾಗಿ ಸತ್ಯದ ಮೂಲಕ ಕರಾರುವಕ್ಕಾಗಿ ತಿರುಗೇಟು ನೀಡಿ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ತನ್ನ ಸಾಮಾಜಿಕ ಮಾಧ್ಯಮ ವಿಭಾಗಕ್ಕೆ ಕರೆ ನೀಡಿದೆ.

ಸಾಮಾಜಿಕ ಮಾಧ್ಯಮ ವಿಭಾಗದ ಕಾರ್ಯಕರ್ತರೊಂದಿಗೆ ಭಾನುವಾರ ನಡೆದ ಸಭೆಯಲ್ಲಿ, ರಾಜ್ಯಸಭೆ ಸದಸ್ಯ ಸಂಜಯ್‌ ಸಿಂಗ್‌, ದೆಹಲಿ ಸಚಿವೆ ಆತಿಶಿ, ಹಿರಿಯ ನಾಯಕ ಜಾಸ್ಮೀನ್‌ ಶಾ, ಮುಖ್ಯ ವಕ್ತಾರ ಪ್ರಿಯಾಂಕಾ ಕಕ್ಕರ್‌, ಶಾಸಕ ಸೋಮನಾಥ್ ಭಾರ್ತಿ ಪಾಲ್ಗೊಂಡಿದ್ದರು. ಚುನಾವಣಾ ಪ್ರಚಾರದಲ್ಲಿ ಕಾರ್ಯಕರ್ತರ ನಿರ್ಣಾಯಕ ಪಾತ್ರದ ಕುರಿತು ಈ ವೇಳೆ ಒತ್ತಿ ಹೇಳಿದ್ದಾರೆ.

ಬಿಜೆಪಿ ಹರಡುತ್ತಿರುವ ತಪ್ಪು ಮಾಹಿತಿಗಳಿಗೆ ಪ್ರತಿಯಾಗಿ ಸತ್ಯವನ್ನು ಪ್ರಚಾರ ಮಾಡಿ ಎಂದು ಸಂಜಯ್‌ ಸಿಂಗ್‌ ಒತ್ತಾಯಿಸಿದ್ದಾರೆ.

'ಸಾಮಾಜಿಕ ಮಾಧ್ಯಮದಲ್ಲಿ 'ಅಣ್ಣಾ ಆಂದೋಲನ ಮತ್ತು ಎಎಪಿ' ಮೂಲಕ ಪ್ರಬಲ ಚಳವಳಿಯನ್ನು ರೂಪಿಸಿದ್ದೇವೆ. ಅದನ್ನು ಕಾಪಾಡಿಕೊಂಡು, ಬಿಜೆಪಿಯ ಯೋಜನೆಗಳಿಗೆ ರಣತಂತ್ರ ಮತ್ತು ಸಂಕಲ್ಪದೊಂದಿಗೆ ತಿರುಗೇಟು ನೀಡುವುದನ್ನು ಮುಂದುವರಿಸಬೇಕು' ಎಂದಿದ್ದಾರೆ.

ಬಿಜೆಪಿಯ ವೈಫಲ್ಯ ಮತ್ತು ವಿಭಜಕ ತಂತ್ರಗಳನ್ನು ಜಗಜ್ಜಾಹೀರು ಮಾಡಲು ಸದಾ ಎಚ್ಚರದಿಂದ ಇರಬೇಕು ಎಂದು ಒತ್ತಾಯಿಸಿದ್ದಾರೆ.

'ಬಿಜೆಪಿಯು ಭೀತಿ ಸೃಷ್ಟಿಸುವಲ್ಲಿ ಪರಿಣತಿ ಹೊಂದಿದೆ. ಆದರೆ, ನಾವು ವಿಚಲಿತರಾಗಬಾರದು. ಎಚ್ಚರಿಕೆಯಿಂದ ಮುಂದುವರಿಯಬೇಕು, ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಿರಬೇಕು. ಸುಳ್ಳು ಕಥನಗಳನ್ನು ಅಲ್ಲಗಳೆಯಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳಬೇಕು. ಸತ್ಯಕ್ಕಾಗಿ ಹೋರಾಟ ಮುಂದುವರಿಸಬೇಕು. ಈ ಹೋರಾಟವು ದೇಶದ ಭವಿಷ್ಯದ ದೃಷ್ಟಿಯಿಂದಲೂ ನಿರ್ಣಾಯಕವಾಗಲಿದೆ' ಎಂದು ವಿವರಿಸಿದ್ದಾರೆ.

ಫೇಸ್‌ಬುಕ್‌, ಎಕ್ಸ್‌, ಇನ್‌ಸ್ಟಾಗ್ರಾಂ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಪ್ರತಿಕ್ರಿಯೆ ನೀಡುವುದಷ್ಟೇ ಅಲ್ಲ. ಅದನ್ನೂ ಮೀರಿ ಪಾತ್ರ ನಿಭಾಯಿಸಲು ಸಾಧ್ಯ ಎಂಬುದನ್ನು ಸಾಮಾಜಿಕ ಮಾಧ್ಯಮ ತಂಡ ನಿರೂಪಿಸಬೇಕು ಎಂದು ಆತಿಶಿ ಸಲಹೆ ನೀಡಿದ್ದಾರೆ.

ಸುಳ್ಳು ಸುದ್ದಿಗಳೇ ತುಂಬಿರುವ ಕಾಲಘಟ್ಟದಲ್ಲಿ ಖಚಿತ ಮಾಹಿತಿ ನೀಡುವಲ್ಲಿ ಕಾರ್ಯಕರ್ತರ ಪಾತ್ರ ನಿರ್ಣಾಯಕ ಎಂದು ಪ್ರತಿಪಾದಿಸಿದ್ದಾರೆ.

'ಸುಳ್ಳು ಮತ್ತು ತಪ್ಪು ಮಾಹಿತಿಗಳೇ ಹರಡುತ್ತಿದ್ದರೆ, ಜನರಿಗೆ ಸೂಕ್ತ ಆಯ್ಕೆಗಳ ಬಗ್ಗೆ ಅರಿವು ಮೂಡಿಸಲು ಪರ್ಯಾಯ ದೃಷ್ಟಿಕೋನ ನೀಡುವ ಅಗತ್ಯವಿದೆ' ಎಂದು ತಿಳಿಸಿದ್ದಾರೆ.

(ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ 2011ರಲ್ಲಿ ದೇಶದಾದ್ಯಂತ ಚಳವಳಿ ಆರಂಭವಾಗಿತ್ತು. ಅದನ್ನು 'ಅಣ್ಣಾ ಆಂದೋಲನ'ವೆಂದೂ ಕರೆಯಲಾಗುತ್ತದೆ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT