ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ | AAP ಶಾಸಕ ಕರ್ತಾರ್ ಸಿಂಗ್, ಮಾಜಿ ಸಚಿವ ರಾಜ್‌ ಕುಮಾರ್ BJP ಸೇರ್ಪಡೆ

Published 10 ಜುಲೈ 2024, 11:21 IST
Last Updated 10 ಜುಲೈ 2024, 11:21 IST
ಅಕ್ಷರ ಗಾತ್ರ

ನವದೆಹಲಿ: ಎಎಪಿ (ಆಮ್‌ ಆದ್ಮಿ ಪಕ್ಷ) ಶಾಸಕ ಕರ್ತಾರ್‌ ಸಿಂಗ್‌ ತನ್ವರ್‌ ಹಾಗೂ ಮಾಜಿ ಸಚಿವ ರಾಜ್‌ ಕುಮಾರ್‌ ಆನಂದ್‌ ಅವರು ಬಿಜೆಪಿ ಸೇರಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಜೈಲು ಸೇರಿದ್ದರೆ, ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಆರೋಪಿಸಿ ಎಎಪಿ ನಾಯಕರು ಪಕ್ಷವನ್ನು ತೊರೆದಿದ್ದಾರೆ. 

ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಅವರ ನೇತೃತ್ವದಲ್ಲಿ ಆನಂದ್‌ ಹಾಗೂ ತನ್ವರ್‌ ಬಿಜೆ‍ಪಿ ಸೇರಿದರು. 

ಇಬ್ಬರೂ ನಾಯಕರನ್ನು ಪಕ್ಷಕ್ಕೆ ಸ್ವಾಗತಿಸಿದ ಸಚ್‌ದೇವ, ಜನರು ಎಎಪಿಯ ಹಗರಣಗಳು ಮತ್ತು ಭ್ರಷ್ಟಾಚಾರದಿಂದ ಬೇಸತ್ತಿದ್ದಾರೆ. ದೆಹಲಿಯಲ್ಲಿ ಅದರ ಆಡಳಿತವು ಕೊನೆಗೊಳ್ಳುತ್ತಿದೆ ಎಂದು ಕಿಡಿಕಾರಿದರು.

ಇಬ್ಬರೂ ಎಎಪಿ ನಾಯಕರು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಮತ್ತು ನಾಯಕತ್ವವನ್ನು ಶ್ಲಾಘಿಸಿದರು. 

ಅಭಿವೃದ್ಧಿ ಕಾಮಗಾರಿಗಳ ಕುಂಠಿತ, ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ದೆಹಲಿಯು ‘ನರಕ’ವಾಗಿ ಮಾರ್ಪಟ್ಟಿದೆ ಎಂದು ತನ್ವರ್‌ ಕಿಡಿಕಾರಿದರು. 

‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ದಲಿತರ ಸಮಸ್ಯೆಗಳನ್ನು ನಿರ್ಲಕ್ಷಿಸಿದ್ದಾರೆ’ ಎಂದು ಆನಂದ್ ಆರೋಪಿಸಿದರು. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಟಿಕೆಟ್‌ನಿಂದ ಸ್ಪರ್ಧಿಸಿದ್ದ ಇವರು ಪರಾಭವಗೊಂಡಿದ್ದರು. ಅವರ ಪತ್ನಿ, ಮಾಜಿ ಶಾಸಕಿ ವೀಣಾ ಆನಂದ್‌ ಹಾಗೂ ಎಎಪಿಯ ಇತರ ನಾಯಕರು ಬಿಜೆಪಿ ಸೇರಿದರು. 

ದೆಹಲಿಯು ಕೆಟ್ಟ ಸ್ಥಿತಿಯಲ್ಲಿದೆ. ಭ್ರಷ್ಟಾಚಾರವನ್ನು ಕೊನೆಗೊಳಿಸುವ ಉದ್ದೇಶದಿಂದ ಹುಟ್ಟಿಕೊಂಡ ಎಎಪಿ ಪಕ್ಷವು ಭ್ರಷ್ಟಾಚಾರದಲ್ಲೇ ಮುಳುಗಿ ಹೋಗಿದೆ.
-– ಕರ್ತರ್‌ ಸಿಂಗ್‌ ತನ್ವರ್‌, ಬಿಜೆಪಿ ಸೇರಿದ ಎಎಪಿಯ ಮಾಜಿ ಶಾಸಕ 
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ದಲಿತರ ಸಮಸ್ಯೆಗಳನ್ನು ನಿರ್ಲಕ್ಷಿಸಿದ್ದಾರೆ.
– ರಾಜ್‌ ಕುಮಾರ್‌ ಆನಂದ್‌, ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT