ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ತಕ್ಕ ಉತ್ತರ ಕೊಡುವ ಕಾಲ: ಸಂಜಯ್‌ ಸಿಂಗ್‌

Published 4 ಏಪ್ರಿಲ್ 2024, 14:32 IST
Last Updated 4 ಏಪ್ರಿಲ್ 2024, 14:32 IST
ಅಕ್ಷರ ಗಾತ್ರ

ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಎಎಪಿ ಸಂಸದ ಸಂಜಯ್‌ ಸಿಂಗ್‌ ಅವರು ಜಾಮೀನಿನ ಮೇಲೆ ಬುಧವಾರ ಬಿಡುಗಡೆಯಾದ ಬೆನ್ನಲ್ಲೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ತಡರಾತ್ರಿ ಎಎಪಿ ಕೇಂದ್ರ ಕಚೇರಿಗೆ ತೆರಳಿ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ‘ದೇಶದಾದ್ಯಂತ ಬಿಜೆಪಿ ನಿರಂಕುಶ ಪ್ರಭುತ್ವ ವ್ಯಾಪಿಸಿದೆ. ರಾಷ್ಟ್ರದ ವಿವಿಧ ಭಾಗಗಳಲ್ಲಿರುವ ಭ್ರಷ್ಟ ನಾಯಕರನ್ನು ಸೇರಿಸಿಕೊಂಡಿದೆ. ಈಗ ಆ ಪಕ್ಷಕ್ಕೆ ತಕ್ಕ ಉತ್ತರ ಕೊಡುವ ಕಾಲ ಬಂದಿದೆ’ ಎಂದು ಹೇಳಿದ್ದಾರೆ.

‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾ, ಸತ್ಯೇಂದರ್ ಜೈನ್‌ ಅವರು ಜೈಲಿನಲ್ಲಿದ್ದಾರೆ. ಏಕೆಂದರೆ ಇವರೆಲ್ಲರೂ ದೆಹಲಿಯ 2 ಕೋಟಿ ಜನರಿಗೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಬಯಸಿದ್ದರು. ಆದರೆ, ಎಎಪಿ ಇದಕ್ಕೆ ಹೆದರುವುದಿಲ್ಲ’ ಎಂದಿದ್ದಾರೆ.

‘ಯಾವುದೇ ಕಾರಣಕ್ಕೂ ಅರವಿಂದ ಕೇಜ್ರಿವಾಲ್‌ ಅವರು ರಾಜೀನಾಮೆ ನೀಡುವುದಿಲ್ಲ. ದೆಹಲಿ ಜನರಿಗಾಗಿ ಅವರು ಸೇವೆ ಮಾಡುತ್ತಲೇ ಇರುತ್ತಾರೆ’ ಎಂದೂ ಅವರು ಪ‍್ರತಿಪಾದಿಸಿದರು.

ಜೈಲಿನಿಂದ ಬಿಡುಗಡೆಯಾದ ಬಳಿಕ ಸಂಜಯ್‌ ಸಿಂಗ್‌ ಅವರು ಕೇಜ್ರಿವಾಲ್‌ ಅವರ ಪತ್ನಿ ಸುನೀತಾ ಅವರನ್ನು ಭೇಟಿಯಾಗಿ ಅವರ ಕಾಲಿಗೆ ನಮಸ್ಕರಿಸಿದರು. ಈ ಕುರಿತ ವಿಡಿಯೊವನ್ನು ಎಎಪಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಮನೀಶ್‌ ಸಿಸೋಡಿಯಾ ಮತ್ತು ಸತ್ಯೇಂದರ್‌ ಜೈನ್‌ ಅವರ ಕುಟುಂಬದ ಸದಸ್ಯರನ್ನು ಭೇಟಿಯಾಗವುದಾಗಿಯೂ ಸಂಜಯ್‌ ಅವರು ತಿಳಿಸಿದ್ದಾರೆ.

‘ಸರ್ವಾಧಿಕಾರಿಗಳ ಬಗ್ಗೆ ದೇಶದ ಜನ ಎಚ್ಚರಿಕೆಯಿಂದಿರಬೇಕು. ಏಕೆಂದರೆ ಅವರು ಜನರ ಕಣ್ಣಲ್ಲಿ ನೀರು ತರಿಸುತ್ತಾರೆ. ಆದರೆ ಕೇಜ್ರಿವಾಲ್‌ ಅವರು ನಿಮ್ಮ ಮುಖದಲ್ಲಿ ನಗು ತರಿಸುತ್ತಾರೆ. ಅಲ್ಲದೇ ಜನರಿಗೆ ಉಚಿತ ಆರೋಗ್ಯ ಸೇವೆ ಮತ್ತು ಉಚಿತ ಶಿಕ್ಷಣ ಸೌಲಭ್ಯವನ್ನು ಕಲ್ಪಿಸುತ್ತಾರೆ’ ಎಂದೂ ಸಂಜಯ್‌ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

‘ಉಚಿತ ಸೌಲಭ್ಯ ನಿಲ್ಲಿಸಲು ಕೇಜ್ರಿವಾಲ್‌ ರಾಜೀನಾಮೆಗೆ ಆಗ್ರಹ’: ‘ದೆಹಲಿಯ ಜನರಿಗೆ ಕಲ್ಪಿಸಲಾಗಿರುವ ಉಚಿತ ನೀರು ವಿದ್ಯುತ್‌ ಮತ್ತು ಮೊಹಲ್ಲಾ ಕ್ಲಿನಿಕ್‌ ಸೌಲಭ್ಯಗಳನ್ನು ಸ್ಥಗಿತಗೊಳಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸುತ್ತಿದೆ’ ಎಂದು ಸಂಜಯ್‌ ಸಿಂಗ್ ಅವರು ಪ್ರತಿಪಾದಿಸಿದ್ದಾರೆ.  ‘ಒಂದು ವೇಳೆ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಪೊಲೀಸರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ತನಿಖೆ ನಡೆಸಲು ಪ್ರಾರಂಭಿಸಿದರೆ ಮೋದಿ ಅವರು ಅಂತಹ ತನಿಖೆಯನ್ನು ಎದುರಿಸುತ್ತಾರೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ. ಇದೇ ವೇಳೆ ‘ದೆಹಲಿ ಸಚಿವರಾದ ಆತಿಶಿ ಮತ್ತು ಸೌರಭ್‌ ಭಾರದ್ವಾಜ್ ರಾಜ್ಯಸಭಾ ಸದಸ್ಯರಾದ ಸಂಸದ ರಾಘವ್‌ ಛಡ್ಡಾ ಹಾಗೂ ಶಾಸಕ ದುರ್ಗೇಶ್‌ ಪಾಠಕ್‌ ಅವರನ್ನೂ ಜೈಲಿಗೆ ಕಳುಹಿಸಲು ಬಿಜೆಪಿ ಯತ್ನಿಸುತ್ತಿದೆ’ ಎಂದು ಸಂಜಯ್‌ ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT