ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಿಂದಲೇ ಕೇಜ್ರಿವಾಲ್ ಸರ್ಕಾರ: ಜನರಿಗೆ ಅವಮಾನ ಮಾಡಿದ ಎಎಪಿ; ಠಾಕೂರ್ ಟೀಕೆ

Published 22 ಮಾರ್ಚ್ 2024, 10:00 IST
Last Updated 22 ಮಾರ್ಚ್ 2024, 10:00 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜೈಲಿನಿಂದಲೇ ಸರ್ಕಾರ ನಡೆಸಲಿದ್ದಾರೆ ಎಂದು ದೆಹಲಿ ಸಚಿವೆ ಅತಿಶಿ ಹೇಳಿಕೆ ನೀಡಿರುವುದಕ್ಕೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಕೇಜ್ರಿವಾಲ್ ಅವರು ಜೈಲಿನಿಂದಲೇ ಸರ್ಕಾರ ನಡೆಸುತ್ತಾರೆ’ ಎಂದು ಎಎಪಿ ನಾಯಕರು ಹೇಳಿರುವುದು ದೆಹಲಿಯ ಜನತೆ, ಕಾನೂನು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನವಾಗಿದೆ ಎಂದು ಠಾಕೂರ್ ವಾಗ್ದಾಳಿ ನಡೆಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಹಾಗೂ ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರನ್ನು ದೆಹಲಿ ಅಬಕಾರಿ ನೀತಿ ಹಗರಣದ ಜೊತೆ ನಂಟಿರುವ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ರಾತ್ರಿ ಬಂಧಿಸಿದ್ದಾರೆ.

ಕೇಜ್ರಿವಾಲ್‌ ಅವರು, ಸ್ವಾತಂತ್ರ್ಯಾ ನಂತರದಲ್ಲಿ ಬಂಧನಕ್ಕೆ ಒಳಗಾದ ಮೊದಲ ಹಾಲಿ ಮುಖ್ಯಮಂತ್ರಿ ಎನಿಸಿದ್ದಾರೆ. ಈ ಪ್ರಕರಣದಲ್ಲಿ, ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಬೇಕು ಎಂದು ಕೋರಿ ಕೇಜ್ರಿವಾಲ್‌ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್‌, ಈ ಹಂತದಲ್ಲಿ ಬಲವಂತದ ಕ್ರಮದಿಂದ ರಕ್ಷಣೆ ನೀಡಲು ಗುರುವಾರ ನಿರಾಕರಿಸಿತ್ತು. ಇದರ ಬೆನ್ನಲ್ಲೇ ಅವರನ್ನು ಇ.ಡಿ ಬಂಧಿಸಿತ್ತು.

ಸದ್ಯ ಕೇಜ್ರಿವಾಲ್ ಅವರನ್ನು ಇಂದು (ಶುಕ್ರವಾರ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಸುವುದಕ್ಕಾಗಿ ಅವರನ್ನು 10 ದಿನಗಳ ಕಾಲ ವಶಕ್ಕೆ ನೀಡುವಂತೆ ಇ.ಡಿ ಅಧಿಕಾರಿಗಳು ಕೋರಿದ್ದಾರೆ.

ಇಂದು ದೇಶದಾದ್ಯಂತ ಪ್ರತಿಭಟನೆ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ವಿರೋಧಿಸಿ ದೇಶದಾದ್ಯಂತ ಇಂದು (ಶುಕ್ರವಾರ) ಬಂದ್‌ಗೆ ಆಮ್‌ ಆದ್ಮಿ ಪಕ್ಷ (ಎಎಪಿ) ಕರೆ ನೀಡಿದ್ದು, ದೇಶದ ವಿವಿಧ ನಗರದಲ್ಲಿ ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಸಿಡಿಸುತ್ತಿರುವ ದೃಶ್ಯಗಳು ಕಂಡು ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT