ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲ್ಕತ್ತ ಪ್ರಕರಣದ ಬೆನ್ನಲ್ಲೇ ಉತ್ತರಾಖಂಡದಲ್ಲಿ ನರ್ಸ್ ಮೇಲೆ ಅತ್ಯಾಚಾರ, ಕೊಲೆ

Published 16 ಆಗಸ್ಟ್ 2024, 5:03 IST
Last Updated 16 ಆಗಸ್ಟ್ 2024, 5:03 IST
ಅಕ್ಷರ ಗಾತ್ರ

ಡೆಹ್ರಾಡೂನ್‌/ಲಖನೌ: ಉತ್ತರಾಖಂಡದ ಉಧಮ್‌ ಸಿಂಗ್‌ ನಗರ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ನರ್ಸ್‌ವೊಬ್ಬರನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣ ವರದಿಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಧರ್ಮೇಂದ್ರ ಕುಮಾರ್‌ ಎಂಬಾತನನ್ನು ಬಂಧಿಸಲಾಗಿದೆ.

ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿರುವ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ನಡೆದ ಒಂದು ವಾರದಲ್ಲೇ ಈ ದುಷ್ಕೃತ್ಯ ಬೆಳಕಿಗೆ ಬಂದಿರುವುದು ಆತಂಕ ಹೆಚ್ಚಿಸಿದೆ.

ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಹಳ್ಳಿಯವರಾದ ನರ್ಸ್‌, ಜುಲೈ 30ರಂದು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದರು. ಈ ವೇಳೆ ಅವರನ್ನು ಅಡ್ಡಗಟ್ಟಿದ್ದ ಧರ್ಮೇಂದ್ರ, ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನರ್ಸ್‌ ನಾಪತ್ತೆಯಾಗಿರುವ ಬಗ್ಗೆ ಅವರ ಸಹೋದರಿ ಮರುದಿನ ಪ್ರಕರಣ ದಾಖಲಿಸಿದ್ದರು. ಇದೀಗ ಅವರ ಗ್ರಾಮದಲ್ಲೇ ಶವ ಪತ್ತೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಉಧಮ್‌ ನಗರ ಎಸ್‌ಎಸ್‌ಪಿ ಮಂಜುನಾಥ್‌ ಟಿ.ಸಿ ಮಾಹಿತಿ ನೀಡಿದ್ದಾರೆ. 'ಮಹಿಳೆ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಅದರಂತೆ ತನಿಖೆ ನಡೆಸಿದಾಗ, ದಾಳಿ ನಡೆಯುವುದಕ್ಕೂ ಮೊದಲೇ ಮಹಿಳೆಯು ತಮ್ಮ ಗ್ರಾಮಕ್ಕೆ ತೆರಳಿದ್ದಾರೆ ಎಂಬುದು ತಿಳಿದುಬಂದಿತ್ತು. ನಂತರ ಆ ಪ್ರದೇಶದಲ್ಲೇ ಇರುವ ಪೊದೆಯಲ್ಲಿ ಆಗಸ್ಟ್‌ 8ರಂದು ಶವ ಪತ್ತೆಯಾಗಿತ್ತು. ಅದು ಕಾಣೆಯಾಗಿದ್ದ ಮಹಿಳೆಯ ಶವ ಎಂಬುದು ಇದೀಗ ದೃಢಪಟ್ಟಿದೆ' ಎಂದು ತಿಳಿಸಿದ್ದಾರೆ.

'ಬಂಧಿತ ಆರೋಪಿಯು ಮಾದಕ ವ್ಯಸನಿಯಾಗಿದ್ದು, ಆತನಿಗೆ ಮಹಿಳೆ ಪರಿಚಯವಿರಲಿಲ್ಲ. ಅವರು ಹೋಗುತ್ತಿರುವುದನ್ನು ನೋಡಿ ತಡೆದಿದ್ದ. ಆತನಿಂದ ತಪ್ಪಿಸಿಕೊಳ್ಳಲು ಸಂತ್ರಸ್ತೆ ಹೋರಾಟ ನಡೆಸಿದ್ದರಾದರೂ, ಯಶಸ್ವಿಯಾಗಿರಲಿಲ್ಲ. ಬಳಿಕ ಅವರ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಕೃತ್ಯದ ಬಳಿಕ ಅವರ ಬಳಿ ಇದ್ದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ' ಎಂದು ಹೇಳಿದ್ದಾರೆ.

ಮುಂದುವರಿದು, ಸಂತ್ರಸ್ತೆಯ ಮೊಬೈಲ್ ರಾಜಸ್ಥಾನದಲ್ಲಿ ಪತ್ತೆಯಾಗಿತ್ತು. ಅದರಂತೆ ನೆಟ್‌ವರ್ಕ್‌ ಹಾಗೂ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ತನಿಖೆ ಮುಂದುವರಿಸಿದ್ದೆವು. ಆರೋಪಿಯನ್ನು ರಾಜಸ್ಥಾನದಲ್ಲೇ ಬಂಧಿಸಲಾಗಿದೆ. ಬರೇಲಿಯವನಾದ ಆತ ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಆಸ್ಪತ್ರೆ ಸಮೀಪದಲ್ಲೇ ಕೂಲಿ ಮಾಡುತ್ತಿದ್ದ ಎಂದೂ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT