ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: ಕಾಂಗ್ರೆಸ್‌, ಬಿಜೆಪಿಯತ್ತ ಗುಳೆ ಹೊರಟ ಬಿಆರ್‌ಎಸ್‌ ನಾಯಕರು

Published 12 ಮಾರ್ಚ್ 2024, 16:07 IST
Last Updated 12 ಮಾರ್ಚ್ 2024, 16:07 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣದಲ್ಲಿನ ಪ್ರಮುಖ ವಿರೋಧ ಪಕ್ಷ ಬಿಆರ್‌ಎಸ್‌, ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಬಳಿಕ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವಂತೆ ತೋರುತ್ತಿದೆ. ಬಿಆರ್‌ಎಸ್‌ನ ಅನೇಕ ನಾಯಕರು ಲೋಕಸಭೆ ಚುನಾವಣೆಗೆ ಮುನ್ನ ಪಕ್ಷ ತೊರೆದು ಆಡಳಿತಾರೂಢ ಕಾಂಗ್ರೆಸ್ ಅಥವಾ ಬಿಜೆಪಿ ಸೇರಲಾರಂಭಿಸಿದ್ದಾರೆ. 

ಬಿಆರ್‌ಎಸ್‌ನ ಸಂಸದರು ಈಗಾಗಲೇ ಪಕ್ಷ ತೊರೆದಿರುವುದರಿಂದ, ಬಿಆರ್‌ಎಸ್‌ನ ಶಾಸಕರು ತಾವು ಸಹ ಕಾಂಗ್ರೆಸ್ ಅಥವಾ ಬಿಜೆಪಿ ಸೇರಬೇಕೆ ಎನ್ನುವ ನಿರ್ಧಾರದ ಆಯ್ಕೆಗೆ ಲೋಕಸಭೆ ಚುನಾವಣೆ ಮುಗಿಯುವುದನ್ನು ಎದುರು ನೋಡುತ್ತಿದ್ದಾರೆ. ಚುನಾವಣಾ ಫಲಿತಾಂಶ ಹಾಗೂ ಸ್ಥಳೀಯ ವಿಷಯಗಳ ಸಮೀಕರಣಗಳ ಆಧರಿಸಿ ಮುಂದಿನ ಹೆಜ್ಜೆ ಇರಿಸುವ ಚಿಂತನೆಯಲ್ಲಿದ್ದಾರೆ. 

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಆರ್‌ಎಸ್ ಟಿಕೆಟ್‌ನಿಂದ ಸ್ಪರ್ಧಿಸಲು ಹೆಚ್ಚಿನವರು ಉತ್ಸುಕರಾಗಿಲ್ಲ ಎಂಬುದು ಗಮನಾರ್ಹ. ಒಬ್ಬ ಹಾಲಿ ಸಂಸದ ಮತ್ತು ಇನ್ನೊಬ್ಬ ನಾಯಕರು ಎರಡು ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವ ಪಕ್ಷದ ಪ್ರಸ್ತಾಪವನ್ನು ಕೆಲ ದಿನಗಳ ಹಿಂದೆ ತಿರಸ್ಕರಿಸಿದ್ದಾರೆ.

ಪೆದ್ದಪಲ್ಲಿ ಕ್ಷೇತ್ರದ ಬಿಆರ್‌ಎಸ್ ಸಂಸದ ವೆಂಕಟೇಶ್ ನೇತಾ ಪಕ್ಷದ ತೊರೆದು ಕಾಂಗ್ರೆಸ್‌ ಸೇರಿದ ನಂತರ ಈ ಬೆಳವಣಿಗೆ ಪ್ರಾರಂಭವಾಯಿತು. ಜಹೀರಾಬಾದ್ ಮತ್ತು ನಾಗರ್ ಕರ್ನೂಲ್‌ ಕ್ಷೇತ್ರದ ಬಿಆರ್‌ಎಸ್‌ನ ಇಬ್ಬರು ಹಾಲಿ ಸಂಸದರಾದ ಪಿ. ರಾಮುಲು, ಬಿ.ಬಿ. ಪಾಟೀಲ್ ಬಿಜೆಪಿ ಸೇರಿದರು. ಪಾಟೀಲ್ ಅವರಿಗೆ ಜಹೀರಾಬಾದ್ ಕ್ಷೇತ್ರಕ್ಕೆ ಮತ್ತು ರಾಮುಲು ಬದಲಿಗೆ ಅವರ ಪುತ್ರ ಭರತ್ ಪ್ರಸಾದ್ ಅವರಿಗೆ ನಾಗರ್ ಕರ್ನೂಲ್ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ನೀಡಿದೆ.

ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗುವ ನಿರೀಕ್ಷೆಯಲ್ಲಿರುವ ಮಾಜಿ ಸಂಸದರಾದ ಗೋಡೆಂ ನಾಗೇಶ್ ಮತ್ತು ಸೀತಾರಾಮ್ ನಾಯ್ಕ್ ಕೂಡ ಬಿಜೆಪಿ ಸೇರಿದ್ದಾರೆ.

ಎರಡು ದಿನಗಳ ಹಿಂದೆ ಪಕ್ಷದ ವರಿಷ್ಠ ಕೆ.ಚಂದ್ರಶೇಖರ ರಾವ್ ಅವರು ಸಂಸದೀಯ ಭಾಗದಲ್ಲಿ ನಡೆಸಿದ ಪರಿಶೀಲನಾ ಸಭೆಗೆ ಬಿಆರ್‌ಎಸ್ ಹಾಲಿ ಸಂಸದ ಜಿ. ರಂಜಿತ್ ರೆಡ್ಡಿ ಗೈರುಹಾಜರಾಗಿದ್ದು ಎದ್ದುಕಾಣಿಸುತ್ತಿದೆ. ರಂಜಿತ್ ರೆಡ್ಡಿ ಇದೇ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಕೆಸಿಆರ್ ಈಗಾಗಲೇ ಘೋಷಿಸಿದ್ದರು. ಆದಾಗ್ಯೂ ಪರಿಶೀಲನಾ ಸಭೆಯಲ್ಲಿ ಅವರ ಗೈರು ಹಾಜರಿ ಚೇವೆಲ್ಲಾ ಕ್ಷೇತ್ರದಿಂದ ಬಿಆರ್‌ಎಸ್ ಟಿಕೆಟ್‌ನಲ್ಲಿ ಸ್ಪರ್ಧಿಸಲು ಅವರು ಹಿಂದೇಟು ಹಾಕುತ್ತಿರುವ ಸೂಚನೆಯಾಗಿದೆ. ಅವರು ಕಾಂಗ್ರೆಸ್ ಅಥವಾ ಬಿಜೆಪಿ ಸೇರುತ್ತಾರೆಯೇ ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ.

ಬಿಆರ್‌ಎಸ್‌ನ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಟ್ನಂ ಸುನೀತಾ ಮಹೇಂದರ್ ರೆಡ್ಡಿ ಅವರು ಚೆವೆಲ್ಲಾ ಲೋಕಸಭಾ ಸ್ಥಾನದ ಟಿಕೆಟ್‌ ನಿರೀಕ್ಷೆಯಲ್ಲಿ ಕೆಲವು ದಿನಗಳ ಹಿಂದೆಯೇ ಕಾಂಗ್ರೆಸ್‌ ಸೇರಿದ್ದರು. ತೆಲಂಗಾಣ ವಿಧಾನ ಪರಿಷತ್ತಿನ ಅಧ್ಯಕ್ಷ ಗುಟ್ಟಾ ಸುಖೇಂದರ್ ರೆಡ್ಡಿ ಅವರ ಪುತ್ರ ಅಮಿತ್ ರೆಡ್ಡಿ ಅವರನ್ನು ನಲ್ಗೊಂಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಆರ್‌ಎಸ್ ಬಯಸಿದೆ. ಆದರೆ, ಒಲ್ಲದ ಮನಸ್ಸಿನಿಂದಲೇ ಅಮಿತ್ ರೆಡ್ಡಿ ಈಗಾಗಲೇ ನಲ್ಗೊಂಡ ಕ್ಷೇತ್ರದಲ್ಲಿ ಪಕ್ಷದ ಬಣಗಳಾಗಿರುವ ಬಗ್ಗೆ ಉಲ್ಲೇಖಿಸಿ ತಾವು ಸ್ಪರ್ಧಿಸಲು ಸಿದ್ಧವಿಲ್ಲವೆಂಬುದನ್ನು ತಿಳಿಸಿದ್ದಾರೆ. ಅಮಿತ್‌ ಕೂಡ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.

ಮಂಗಳವಾರ ಅಮಿತ್ ರೆಡ್ಡಿ ಅವರು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮತ್ತು ಸರ್ಕಾರದ ಸಲಹೆಗಾರ ವೆಂ ನರೇಂದ್ರ ರೆಡ್ಡಿ ಅವರ ಆಪ್ತರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರುವ ಸಾಧ್ಯತೆಯ ಬಗ್ಗೆ ಚರ್ಚಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT