ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಎಡಿಎಂಕೆಯಲ್ಲಿ ಮತ್ತೆ ಬಿರುಕು: ಪಳನಿಗೆ ಮಣೆ, ಪನ್ನೀರ ಉಚ್ಚಾಟನೆ

Last Updated 11 ಜುಲೈ 2022, 19:31 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ವಿರೋಧ ಪಕ್ಷ ಎಐಎಡಿಎಂಕೆಯಲ್ಲಿ ಮತ್ತೊಂದು ಸುತ್ತಿನ ಕ್ಷೋಭೆ ಆರಂಭಗೊಂಡಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಅತ್ಯಂತ ಪ್ರಭಾವಿ ಸಮಿತಿಯಾದ ‘ಜನರಲ್‌ ಕೌನ್ಸಿಲ್‌’ (ಜಿ.ಸಿ) ಸೋಮವಾರ ನೇಮಿಸಿದೆ. ಅವರ ಪ್ರಮುಖ ಪ್ರತಿಸ್ಪರ್ಧಿ ಒ.ಪನ್ನೀರಸೆಲ್ವಂ ಅವರನ್ನು ಪಕ್ಷದ ಖಜಾಂಚಿ ಹುದ್ದೆ ಮತ್ತು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ.

ಜನರಲ್‌ ಕೌನ್ಸಿಲ್‌ ಸಭೆಗೆ ಮುನ್ನ ಮತ್ತು ನಂತರ ಹಲವು ವಿದ್ಯಮಾನಗಳು ನಡೆದಿವೆ. ಸಭೆ ನಡೆಸಬಾರದು ಎಂದು ಕೋರಿ ಪನ್ನೀರಸೆಲ್ವಂ ಅವರು ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ವಜಾ ಮಾಡಿದ ಕೆಲವೇ ನಿಮಿಷಗಳಲ್ಲಿ ಸಭೆ ನಡೆಯಿತು. ಪನ್ನೀರಸೆಲ್ವಂ ಅವರ ಉಚ್ಚಾಟನೆಯಿಂದ ಆಕ್ರೋಶಗೊಂಡ ಅವರ ಬೆಂಬಲಿಗರು, ಎಐಎಡಿಎಂಕೆ ಕೇಂದ್ರ ಕಚೇರಿಗೆ ಬಲವಂತವಾಗಿ ನುಗ್ಗಲು ಯತ್ನಿಸಿದರು. ಇದರಿಂದಾಗಿ ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಬೆಂಬಲಿಗರ ನಡುವೆ ಘರ್ಷಣೆ ನಡೆಯಿತು.

ಹಾಗಾಗಿ, ಕಂದಾಯ ಅಧಿಕಾರಿಗಳು ಅಪರಾಧ ಪ್ರಕ್ರಿಯಾ ಸಂಹಿತೆಯ 145ನೇ ಸೆಕ್ಷನ್‌ ಅಡಿಯಲ್ಲಿ (ವಿವಾದಾತ್ಮಕ ಆಸ್ತಿ) ಕಚೇರಿಗೆ ಬೀಗ ಜಡಿದಿದ್ದಾರೆ. ಎರಡೂ ಬಣಗಳಿಗೂ ಕಚೇರಿ ಸದ್ಯಕ್ಕೆ ಕೈಗೆ ಸಿಗದಂತಾಗಿದೆ.

ಸಭೆಯಲ್ಲಿ ಮಾತನಾಡಿದ ಎಲ್ಲರೂ ಪಳನಿಸ್ವಾಮಿ ಅವರನ್ನು ಹೊಗಳಿದರು. ಜಯಲಲಿತಾ ಅವರ ಸಹಜ ಉತ್ತರಾಧಿಕಾರಿ ಇವರೇ ಎಂದರು. ಪನ್ನೀರಸೆಲ್ವಂ ಅವರು ಡಿಎಂಕೆ ಜತೆ ಸೇರಿ ಎಐಎಡಿಎಂಕೆಯನ್ನು ದುರ್ಬಲಗೊಳಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಯಿತು. ಪನ್ನೀರಸೆಲ್ವಂ ಜತೆಗೆ ಅವರ ಮೂವರು ಬೆಂಬಲಿಗರನ್ನೂ ಉಚ್ಚಾಟಿಸಲಾಗಿದೆ. ಅವರಲ್ಲಿ ಇಬ್ಬರು ಶಾಸಕರು. ಆದರೆ, ಪನ್ನೀರಸೆಲ್ವಂ ಅವರ ಮಗ, ಸಂಸದ ಒ.ಪಿ.ರವೀಂದ್ರನಾಥ್ ಅವರು ಎಐಎಡಿಎಂಕೆ ಪಕ್ಷದಲ್ಲಿಯೇ ಉಳಿದಿದ್ದಾರೆ.

ಪಕ್ಷದಿಂದ ತಮ್ಮನ್ನು ಯಾರೂ ಉಚ್ಚಾಟಿಸಲಾಗದು ಎಂದು ಪನ್ನೀರ ಸೆಲ್ವಂ ಹೇಳಿದ್ದಾರೆ. ಪಳನಿಸ್ವಾಮಿ, ಕೆ.ಪಿ.ಮುನುಸ್ವಾಮಿ ಅವರನ್ನು ತಾವು
ಪಕ್ಷದಿಂದ ಉಚ್ಚಾಟಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈ ಬೆಳವಣಿಗೆಗಳಿಂದಾಗಿ ಎಐಎಡಿಎಂಕೆ ತಮ್ಮದು ಎಂದು ಹೇಳಿಕೊಳ್ಳುತ್ತಿರುವ ವಿ.ಕೆ. ಶಶಿಕಲಾ, ಟಿ.ಟಿ.ವಿ.ದಿನಕರನ್ ಸಾಲಿಗೆ ಪನ್ನೀರಸೆಲ್ವಂ ಅವರೂ ಸೇರಿದಂತಾಗಿದೆ.

ತಮ್ಮ ಉಚ್ಚಾಟನೆಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಲಾಗುವುದು ಎಂದು ಪನ್ನೀರಸೆಲ್ವಂ ಹೇಳಿದ್ದಾರೆ. ಆದರೆ, ಇದು ತಕ್ಷಣಕ್ಕೆ ಇತ್ಯರ್ಥವಾಗುವ ಸಾಧ್ಯತೆ ಇಲ್ಲ. ಪಳನಿಸ್ವಾಮಿ ಬಣವು ತ್ವರಿತವಾಗಿ ಕ್ರಮಗಳನ್ನು ಕೈಗೊಂಡಿದೆ. ದಿಂಡಿಗಲ್‌ ಸಿ. ಶ್ರೀನಿವಾಸನ್‌ ಅವರನ್ನು ಪಕ್ಷದ ಖಜಾಂಚಿಯಾಗಿ ನೇಮಿಸಲಾಗಿದೆ. ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಇದಕ್ಕೆ ಸಂಬಂಧಿಸಿದ ಪತ್ರಗಳನ್ನು ಚುನಾವಣಾ ಆಯೋಗಕ್ಕೂ ಸಲ್ಲಿಸಲಾಗಿದೆ.

2017ರಲ್ಲಿ ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಬಣಗಳ ನಡುವೆ ಸಂಧಾನ ಏರ್ಪಡಿಸಲಾಗಿತ್ತು. ಅದರ ಪ್ರಕಾರ, ಪಳನಿಸ್ವಾಮಿ ಅವರನ್ನು ಸಂಯೋಜಕ ಮತ್ತು ಪನ್ನೀರಸೆಲ್ವಂ ಅವರನ್ನು ಜಂಟಿ ಸಂಯೋಜಕ ಎಂದು ನೇಮಿಸಿ, ದ್ವಿನಾಯಕತ್ವ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಈಗ, ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಮರಳಿ ತರಲಾಗಿದೆ.

ಅದಕ್ಕೆ ಜನರಲ್‌ ಕೌನ್ಸಿಲ್‌ ಸಭೆಯು ಒಪ್ಪಿಗೆ ಕೊಟ್ಟಿದೆ. ಪಳನಿಸ್ವಾಮಿ ಅವರು ಈ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಬಿಜೆಪಿ ತಟಸ್ಥ ನಿಲುವು?

ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಪಳನಿಸ್ವಾಮಿ ಅವರಿಗೆ ಕರೆ ಮಾಡಿ ಶುಭಾಶಯ ಹೇಳಿದ್ದಾರೆ. ಬಿಜೆಪಿ ಸದ್ಯಕ್ಕೆ ತಟಸ್ಥವಾಗಿ ಉಳಿಯಬಹುದು ಎಂಬುದರ ಸುಳಿವು ಇದು ವಿಶ್ಲೇಷಿಸಲಾಗಿದೆ.

ಪಳನಿಸ್ವಾಮಿ ಬಣವನ್ನು ತಕ್ಷಣಕ್ಕೆ ಎದುರು ಹಾಕಿಕೊಳ್ಳುವ ಇಚ್ಛೆ ಬಿಜೆಪಿಗೆ ಇಲ್ಲ. ಏಕೆಂದರೆ, ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎಐಎಡಿಎಂಕೆ ಬೆಂಬಲ ಬಿಜೆಪಿಗೆ ಬೇಕಾಗಿದೆ. ಅದಲ್ಲದೆ, ಲೋಕಸಭಾ ಚುನಾವಣೆಯಲ್ಲಿ, ತಮಿಳುನಾಡಿನಲ್ಲಿ ಡಿಎಂಕೆ–ಕಾಂಗ್ರೆಸ್ ಮೈತ್ರಿಕೂಟಕ್ಕೆ ಸ್ಪರ್ಧೆ ಒಡ್ಡಬೇಕಾದರೆ ಎಐಎಡಿಎಂಕೆ ಬೆಂಬಲ ಅನಿವಾರ್ಯ.

ಪಳನಿಸ್ವಾಮಿ ಅವರು ಜನರಲ್‌ ಕೌನ್ಸಿಲ್‌ ಸಭೆಯಲ್ಲಿ ಮಾತನಾಡಿ ಡಿಎಂಕೆ ಮತ್ತು ಪನ್ನೀರಸೆಲ್ವಂ ವಿರುದ್ಧ ಹರಿಹಾಯ್ದಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆಯ ಪ್ರತಿಸ್ಪರ್ಧಿ ಎಐಎಡಿಎಂಕೆ ಮಾತ್ರ ಎಂಬ ಸಂದೇಶವನ್ನು ಬಿಜೆಪಿಗೆ ರವಾನಿಸುವ ಉದ್ದೇಶವೂ ಈ ಭಾಷಣದಲ್ಲಿ ಇತ್ತು. ಎಐಎಡಿಎಂಕೆ ಏಕ ನಾಯಕತ್ವಕ್ಕೆ ಹೊರಳಿಕೊಂಡಿರುವುದು ಬಿಜೆಪಿಗೆ ಅನುಕೂಲಕರ ಅಲ್ಲ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT