ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಪ್ರತಿಭಟನೆ: ಏರ್‌ ಇಂಡಿಯಾದ 90ಕ್ಕೂ ಅಧಿಕ ವಿಮಾನಗಳು ರದ್ದು

Published 8 ಮೇ 2024, 13:10 IST
Last Updated 8 ಮೇ 2024, 13:10 IST
ಅಕ್ಷರ ಗಾತ್ರ

ನವದೆಹಲಿ / ಕೊಚ್ಚಿ: ಆಡಳಿತ ಮಂಡಳಿಯ ಕೆಟ್ಟ ನಿರ್ವಹಣೆ ವಿರುದ್ಧ ಟಾಟಾ ಒಡೆತನದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನ ಹಿರಿಯ ಸಿಬ್ಬಂದಿ ಅನಾರೋಗ್ಯದ ರಜೆ (Sick Leave) ಹಾಕಿದ್ದರಿಂದ ಮಂಗಳವಾರ ಸಂಜೆಯ ಬಳಿಕ 90ಕ್ಕೂ ಅಧಿಕ ವಿಮಾನ‌ಗಳ ಸಂಚಾರ ರದ್ದಾಗಿದೆ. ಇದರಿಂದ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗಿದೆ.

ಹಲವು ವಿಮಾನಗಳ ಸಂಚಾರ ವಿಳಂಬವಾಗಿವೆ. ಕೊಲ್ಲಿ ರಾಷ್ಟ್ರಗಳಿಗೆ ತೆರಳಬೇಕಿದ್ದ ವಿಮಾನಗಳ ಸಂಚಾರ ವ್ಯತ್ಯಯವಾಗಿದೆ. ಭದ್ರತಾ ತಪಾಸಣೆ ಆದ ಬಳಿಕವಷ್ಟೇ ವಿಮಾನ ರದ್ದಾಗಿರುವ ಮಾಹಿತಿ ಪ್ರಯಾಣಿಕರಿಗೆ ತಿಳಿಸಲಾಗಿದ್ದು, ಇದರಿಂದ ಕೇರಳದ ಏರ್‌ಪೋರ್ಟ್‌ಗಳಲ್ಲಿ ಪ್ರಯಾಣಿಕರು ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸಂಸ್ಥೆಯಿಂದ ವರದಿ ಕೇಳಿದ್ದು, ಸಮಸ್ಯೆಯನ್ನು ಪ್ರಾಮಾಣಿಕವಾಗಿ ಬಗೆಹರಿಸಿ ಎಂದು ಸೂಚಿಸಿದೆ.

ಅಲ್ಲದೆ, ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ (ಡಿಜಿಸಿಎ) ಮಾರ್ಗಸೂಚಿ ಅನ್ವಯ ತೊಂದರೆಗೆ ಸಿಲುಕಿರುವ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದೆ.

ಸಂಸ್ಥೆಯ ಅವ್ಯವಸ್ಥೆಯ ಬಗ್ಗೆ ಪ್ರತಿಭಟನಾರ್ಥವಾಗಿ 200ಕ್ಕೂ ಅಧಿಕ ಸಿಬ್ಬಂದಿ ಬುಧವಾರ ಅನಾರೋಗ್ಯದ ರಜೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಬ್ಬಂದಿ ಕೊರತೆಯಿಂದಾಗಿ 90ಕ್ಕೂ ಅಧಿಕ ವಿಮಾನಗಳು ರದ್ದಾಗಿ, ಹಲವು ವಿಮಾನಗಳ ಸಂಚಾರ ವಿಳಂಬವಾಯಿತು. ಕೊಚ್ಚಿ, ಕಲ್ಲಿಕೋಟೆ, ದೆಹಲಿ, ಬೆಂಗಳೂರು ಸೇರಿದಂತೆ ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡಿದರು.

‘ನಾನು ಮೇ 9ರಂದು ಶಾರ್ಜಾದಲ್ಲಿ ಮತ್ತೆ ಕೆಲಸಕ್ಕೆ ಸೇರಬೇಕಿದೆ. ಆದರೆ, 10ರಂದು ಕೊಚ್ಚಿಯಿಂದ ಶಾರ್ಜಾಕ್ಕೆ ವಿಮಾನ ಸಂಚರಿಸಲಿದೆ ಎಂದು ಕಂಪನಿ ಹೇಳಿದೆ. ಇದರಿಂದ ನಾನು ಕೆಲಸ ಕಳೆದುಕೊಳ್ಳುವಂತಾಗಿದೆ’ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

‘ಕೊನೆಯ ಕ್ಷಣದಲ್ಲಿ ಕೆಲವು ಸಿಬ್ಬಂದಿ ಮಂಗಳವಾರ ರಾತ್ರಿಯಿಂದ ರಜೆಯ ಮೇಲೆ ತೆರಳಿದ್ದಾರೆ. ಹಾಗಾಗಿ, ವಿಮಾನ ಸೇವೆಯಲ್ಲಿ ವ್ಯತ್ಯಯವಾಗಿದೆ’ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

‘ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದ್ದು, ಪ್ರಯಾಣಿಕರಿಗೆ ಆಗಿರುವ ತೊಂದರೆ ತಪ್ಪಿಸಲು ಕಂಪನಿಯ ತಂಡವು ಕಾರ್ಯನಿರತವಾಗಿದೆ. ಪ್ರಯಾಣಿಕರಿಗೆ ಆಗಿರುವ ವಿಳಂಬಕ್ಕೆ ಕ್ಷಮೆಯಾಚಿಸುತ್ತೇವೆ. ಪ್ರಯಾಣಿಕರಿಗೆ ಟಿಕೆಟ್‌ ಹಣವನ್ನು ವಾಪಸ್‌ ನೀಡಲಾಗುವುದು ಅಥವಾ ಪರ್ಯಾಯ ದಿನಾಂಕವನ್ನು ನಿಗದಿಪಡಿಸಲಾಗುವುದು’ ಎಂದು ಹೇಳಿದ್ದಾರೆ.

ಎಐಎಕ್ಸ್ ಕೆನೆಕ್ಟ್‌ ವಿಲೀನಕ್ಕೆ ವಿರೋಧ

ಟಾಟಾ ಸಮೂಹವು ಎಐಎಕ್ಸ್ ಕೆನೆಕ್ಟ್‌ನಲ್ಲಿ (ಏರ್‌ಏಷ್ಯಾ ಇಂಡಿಯಾ ಏರ್‌ಲೈನ್ಸ್‌) ಹೆಚ್ಚಿನ ಷೇರುಗಳನ್ನು ಹೊಂದಿದೆ. ನಷ್ಟದಲ್ಲಿರುವ ಈ ಏರ್‌ಲೈನ್ಸ್‌ ಅನ್ನು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಜೊತೆಗೆ ವಿಲೀನಕ್ಕೆ ಮುಂದಾಗಿದೆ. ಇದಕ್ಕೆ ಸಿಬ್ಬಂದಿ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.

ವೇತನ ತಾರತಮ್ಯ ಖಂಡಿಸಿ ವಿಸ್ತಾರಾ ಏರ್‌ಲೈನ್ಸ್‌ನ ಪೈಲಟ್‌ಗಳು ಪ್ರತಿಭಟನೆ ನಡೆಸಿದ ಒಂದು ತಿಂಗಳ ಬಳಿಕ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಿಬ್ಬಂದಿ ಕೂಡ ಪ್ರತಿಭಟನೆಗೆ ಇಳಿದಿದ್ದಾರೆ. ‘ಆಡಳಿತ ಮಂಡಳಿಯ ಕೆಟ್ಟ ನಿರ್ವಹಣೆಯು ಸಿಬ್ಬಂದಿಯ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಲಿದೆ’ ಎಂದು ಸುಮಾರು 300 ಸಿಬ್ಬಂದಿಯನ್ನು ಒಳಗೊಂಡಿರುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ನೌಕರರ ಒಕ್ಕೂಟ ಹೇಳಿದೆ. ಬೇಸಿಗೆ ಅವಧಿಯಲ್ಲಿ ಈ ಕಂಪನಿಯ 360ಕ್ಕೂ ಹೆಚ್ಚು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT