ನವದೆಹಲಿ: ದೇಶದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ ಕೆಲವು ಉದ್ಯೋಗಿಗಳಿಗೆ ಐದು ವರ್ಷಗಳ ಕಡ್ಡಾಯ ರಜೆ ನೀಡಿದೆ. ಇದು ವೇತನ ರಹಿತ ರಜೆಯಾಗಿದೆ (ಎಲ್‌ಡಬ್ಲುಪಿ) ಎಂಬುದು ಅಧಿಕೃತ ಆದೇಶದಿಂದ ತಿಳಿದು ಬಂದಿದೆ.
ಕಾರ್ಯಕ್ಷಮತೆ, ಆರೋಗ್ಯ ಹಾಗೂ ಅವಶ್ಯಕತೆಗಳಿಗೆ ಅನುಗುಣವಾಗಿ ನೌಕರರನ್ನು ಗುರುತಿಸುವ ಪ್ರಕ್ರಿಯೆಗೆ ಏರ್ ಇಂಡಿಯಾ ಚಾಲನೆ ನೀಡಿದೆ. ಈ ಪ್ರಕ್ರಿಯೆಗೆ ಏರ್ ಇಂಡಿಯಾದ ನಿರ್ದೇಶಕರ ಮಂಡಳಿ ಅನುಮೋದಿಸಿದೆ.
ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜಿವ್ ಬನ್ಸಾಲ್ ಅವರು ವೇತನ ರಹಿತ ರಜೆಯ ಮೇಲೆ 'ಆರು ತಿಂಗಳು ಅಥವಾ ಎರಡು ವರ್ಷದಿಂದ 5 ವರ್ಷಗಳ ವರೆಗೂ ಸಿಬ್ಬಂದಿಯನ್ನು ಕಳುಹಿಸಬಹುದಾಗಿದೆ. ಕಾರ್ಯಾನಿರ್ವಹಣೆಯ ಗುಣಮಟ್ಟ, ಉದ್ಯೋಗಿಯ ಆರೋಗ್ಯ, ಕಾರ್ಯಕ್ಷಮತೆ, ಅನಾರೋಗ್ಯ ಅಥವಾ ಇತರೆ ಕಾರಣಗಳಿಂದಾಗಿ ಅಗತ್ಯ ಸಮಯದಲ್ಲಿ ಕಾರ್ಯ ನಿರ್ವಹಣೆಗೆ ಉದ್ಯೋಗಿಯ ಗೈರು ಹಾಜರಿ, ಕಾರ್ಯ ನಿರ್ವಹಣೆ ಸಾಮರ್ಥ್ಯ, ಸುಸ್ಥಿರತೆ ಆಧಾರಗಳ ಮೇಲೆ ಕ್ರಮಕೈಗೊಳ್ಳಬಹುದಾಗಿದೆ' ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಿಮಾನಯಾನ ಸಂಸ್ಥೆಯ ಮುಖ್ಯ ಕಚೇರಿಯಲ್ಲಿನ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾದೇಶಿಕ ನಿರ್ದೇಶಕರು ಪ್ರತಿ ಉದ್ಯೋಗಿಯ ಕುರಿತು ಗಮನಿಸಿ, ತಿಳಿಸಲಾದ ಅಂಶಗಳ ಆಧಾರದ ಮೇಲೆ ಕಡ್ಡಾಯ ವೇತನ ರಹಿತ ರಜೆಗೆ ಕಳುಹಿಸಬಹುದಾದ ಪ್ರಕರಣಗಳನ್ನು ಗುರುತಿಸಬೇಕಾಗಿದೆ.
'ಈ ಪ್ರಕ್ರಿಯೆಯ ಕುರಿತು ಏನನ್ನೂ ಹೇಳಲು ಬಯಸುವುದಿಲ್ಲ' ಎಂದು ಏರ್ ಇಂಡಿಯಾದ ವಕ್ತಾರ ಪ್ರತಿಕ್ರಿಯಿಸಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಭಾರತ ಹಾಗೂ ಇತರೆ ರಾಷ್ಟ್ರಗಳಲ್ಲಿ ಎದುರಾದ ಸಂಚಾರ ನಿರ್ಬಂಧಗಳಿಂದ ವಿಮಾನಯಾನ ವಲಯ ಸಂಕಷ್ಟದಲ್ಲಿದೆ. ಭಾರತದ ಎಲ್ಲ ವಿಮಾನಯಾನ ಸಂಸ್ಥೆಗಳು ವೇತನ ಕಡಿತ, ವೇತನ ರಹಿತ ರಜೆ, ಉದ್ಯೋಗದಿಂದ ವಜಾಗೊಳಿಸುವುದು ಸೇರಿದಂತೆ ವೆಚ್ಚ ಕಡಿತಗೊಳಿಸುವ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.
ಗೋಏರ್ ಏಪ್ರಿಲ್‌ನಿಂದಲೇ ತನ್ನ ಬಹುತೇಕ ಸಿಬ್ಬಂದಿಗೆ ಕಡ್ಡಾಯ ವೇತನ ರಹಿತ ರಜೆ ನೀಡಿದೆ. ಭಾರತದಲ್ಲಿ ಎರಡು ತಿಂಗಳ ಬಿಡುವಿನ ಬಳಿಕ ಮೇ 25ರಿಂದ ಪ್ರಾದೇಶಿಕ ವಿಮಾನಯಾನ ಕಾರ್ಯಾರಂಭವಾಗಿದೆ. ಆದರೆ, ಹಿಂದಿಗಿಂತ ಶೇ 45ರಷ್ಟು ವಿಮಾನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ನಿರ್ಬಂಧ ಇನ್ನೂ ತೆರೆವುಗೊಂಡಿಲ್ಲ.
2019ಕ್ಕೆ ಹೋಲಿಸಿದರೆ 2020ರಲ್ಲಿ ಪ್ರಯಾಣಿಕರ ವಿಮಾನಯಾನ ಬೇಡಿಕೆ ಶೇ 49ರಷ್ಟು ಕುಸಿಯಲಿದೆ ಎಂದು ಜಾಗತಿಕ ವಿಮಾನಯಾನ ಸಂಸ್ಥೆ ಐಎಟಿಎ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.