ಲಾತೂರ್(ಮಹಾರಾಷ್ಟ್ರ): ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದುಬಿದ್ದ ಘಟನೆ ಸಂಬಂಧ ರಾಜ್ಯದ ಜನರಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕ್ಷಮೆಯಾಚಿಸಿದ್ದಾರೆ.
ಲಾತೂರ್ ಜಿಲ್ಲೆಯಲ್ಲಿ ನಡೆದ ಜನ ಸಮ್ಮಾನ್ ಯಾತ್ರೆ ವೇಳೆ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಪವಾರ್, ‘ಅಧಿಕಾರಿಗಳೇ ಆಗಲಿ ಅಥವಾ ಗುತ್ತಿಗೆದಾರರೇ ಆಗಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಶಿವಾಜಿ ಮಹಾರಾಜನರು ನಮ್ಮ ಆರಾಧ್ಯ ದೈವ. ಅವರ ಪ್ರತಿಮೆ ಕುಸಿದು ಬಿದ್ದಿರುವುದಕ್ಕೆ ಮಹಾರಾಷ್ಟ್ರದ 13 ಕೋಟಿ ಜನರಲ್ಲಿ ಕ್ಷಮೆಯಾಚಿಸುತ್ತೇನೆ.’ ಎಂದರು.
‘ನಿರ್ಮಾಣ ಮಾಡಿ ಕೇವಲ ಒಂದು ವರ್ಷದೊಳಗೆ ಪ್ರತಿಮೆ ಕುಸಿದು ಬಿದ್ದಿರುವುದು ಆಘಾತಕಾರಿಯಾಗಿದೆ’ ಎಂದು ಹೇಳಿದರು.
ಶಿವಾಜಿ ಮಹಾರಾಜರ 35 ಅಡಿ ಎತ್ತರದ ಈ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2023ರ ಡಿಸೆಂಬರ್ 4ರಂದು(ನೌಕಾ ದಿನ) ಅನಾವರಣಗೊಳಿಸಿದ್ದರು. ಸೋಮವಾರ(ಆಗಸ್ಟ್ 26) ಪ್ರತಿಮೆ ಕುಸಿದು ಬಿದ್ದಿತ್ತು.
ಘಟನೆ ಸಂಬಂಧ ಗುತ್ತಿಗೆದಾರ ಜಯದೀಪ್ ಆಪ್ಟೆ ಹಾಗೂ ಪ್ರತಿಮೆಯ ವಿನ್ಯಾಸಗಾರ ಚೇತನ್ ಪಾಟೀಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.