ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬುಲ್ಡೋಜರ್ ಬಳಸಲು ‘ಬುದ್ಧಿ, ಗುಂಡಿಗೆ’ ಎರಡೂ ಇರಬೇಕು:ಅಖಿಲೇಶ್‌ಗೆ ಯೋಗಿ ತಿರುಗೇಟು

Published 4 ಸೆಪ್ಟೆಂಬರ್ 2024, 10:47 IST
Last Updated 4 ಸೆಪ್ಟೆಂಬರ್ 2024, 10:47 IST
ಅಕ್ಷರ ಗಾತ್ರ

ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದಲ್ಲಿರುವ ಎಲ್ಲ ಬುಲ್ಡೋಜರ್‌ಗಳನ್ನು ಸಿಎಂ ತವರು ಜಿಲ್ಲೆ ಗೋರಖಪುರಕ್ಕೆ ನುಗ್ಗಿಸಲು ಆದೇಶಿಸುತ್ತೇವೆ ಎಂಬ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಅಖಿಲೇಶ್ ಯಾದವ್ ಹೇಳಿಕೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಮಾಜವನ್ನು ತಪ್ಪುದಾರಿಗೆ ಎಳೆಯುವ ಹೊಸ ಮಾದರಿಯೊಂದಿಗೆ ಈ ಜನರು ಇಂದು ಮತ್ತೆ ಬಂದಿದ್ದಾರೆ. ಬುಲ್ಡೋಜರ್‌ ಮೇಲೆ ಎಲ್ಲರೂ ಹಿಡಿತ ಸಾಧಿಸಲು ಸಾಧ್ಯವಿಲ್ಲ. ಅದಕ್ಕೆ ಬುದ್ಧಿ ಮತ್ತು ಗುಂಡಿಗೆ ಎರಡೂ ಇರಬೇಕು’ ಎಂದು ಅಖಿಲೇಶ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಬುಲ್ಡೋಜರ್ ಬಳಕೆ ನಮ್ಮ ಆಡಳಿತ ಶೈಲಿಯ ಸಂಕೇತವಾಗಿದೆ. ಬುಲ್ಡೋಜರ್ ತರಹದ ಸಾಮರ್ಥ್ಯ ಹೊಂದಿರುವವರು ಮಾತ್ರ ಅದನ್ನು ಸರಿಯಾಗಿ ನಿರ್ವಹಿಸಬಲ್ಲರು. ಅದೇ ರೀತಿ ಗಲಭೆಕೋರರಿಗೆ ಬುಲ್ಡೋಜರ್ ಮುಂದೆ ನಿಲ್ಲಲು ಸಾಧ್ಯವಾಗುವುದಿಲ್ಲ’ ಎಂದು ಯೋಗಿ ಕುಟುಕಿದ್ದಾರೆ.

‘ಈಗ ‘ಟಿಪ್ಪು’ ಕೂಡ ‘ಸುಲ್ತಾನ್’ ಆಗಲು ಪ್ರಯತ್ನಿಸುತ್ತಿದ್ದಾನೆ’ ಎಂದು ಅಖಿಲೇಶ್‌ ವಿರುದ್ಧ ಪರೋಕ್ಷವಾಗಿ ಗುಡುಗಿದ ಯೋಗಿ, ರಾಜ್ಯದಲ್ಲಿ ಅಧಿಕಾರಕ್ಕೆ ಮರಳುವ ಯಾದವ್ ಅವರ 'ಹಗಲುಗನಸು' ನನಸಾಗುವುದಿಲ್ಲ. ಅಖಿಲೇಶ್‌ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಅವರು ಅಧಿಕಾರದಲ್ಲಿದ್ದಾಗ ಸುಲಿಗೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಅಧಿಕಾರದಲ್ಲಿದಾಗ ಹಣ ವಸೂಲಿ ಮಾಡಲು ಅಖಿಲೇಶ್–ಶಿವಪಾಲ್ ನಡುವೆ ಪೈಪೋಟಿ ನಡೆಯುತ್ತಿತ್ತು. ಅದಕ್ಕಾಗಿಯೇ ರಾಜ್ಯವನ್ನು ವಿವಿಧ ಭಾಗಗಳಾಗಿ ವಿಭಜನೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕೆಲವು ನರಭಕ್ಷಕ ತೋಳಗಳು ವಿವಿಧ ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಸಿದ್ದನ್ನು ನಾನು ನೋಡುತ್ತಿದ್ದೇನೆ. 2017ರ ಮೊದಲು ರಾಜ್ಯದಲ್ಲಿ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಇತ್ತು ಎಂದು ಯೋಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT