ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರ ರಕ್ಷಣೆ ಬದ್ಧ: ತಪ್ಪಿತಸ್ಥರ ಕೈ–ಕಾಲು ಕತ್ತರಿಸುತ್ತೇವೆ: ಯೋಗಿ ಆದಿತ್ಯನಾಥ

Published 4 ಸೆಪ್ಟೆಂಬರ್ 2024, 13:46 IST
Last Updated 4 ಸೆಪ್ಟೆಂಬರ್ 2024, 13:46 IST
ಅಕ್ಷರ ಗಾತ್ರ

ಲಖನೌ: ಮಹಿಳೆಯರಿಗೆ ರಕ್ಷಣೆ ನೀಡಲು ಮತ್ತು ಮಹಿಳೆಯರ ವಿರುದ್ಧದ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರವು ಬದ್ಧವಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.

ಪ್ರಯಾಗ್‌ರಾಜ್‌ನಲ್ಲಿ ಬುಧವಾರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ಹೆಣ್ಣು ಮಕ್ಕಳ ರಕ್ಷಣೆಗೆ ನಾವು ಬದ್ಧ. ಮಹಿಳೆಯರ ವಿರುದ್ಧ ಕೃತ್ಯ ಎಸಗುವ ತಪ್ಪಿತಸ್ಥರ ಕೈ ಮತ್ತು ಕಾಲುಗಳನ್ನು ಕತ್ತರಿಸುತ್ತೇವೆ’ ಎಂದು  ಎಚ್ಚರಿಸಿದರು.

ಅತೀಕ್‌ ಅಹ್ಮದ್, ಮುಖ್ತಾರ್‌ ಅನ್ಸಾರಿ ಮತ್ತಿತರರನ್ನು ಪರೋಕ್ಷವಾಗಿ ಉಲ್ಲೇಖಿಸಿ, ನಮ್ಮ ಸರ್ಕಾರವು ‘ಮಾಫಿಯಾ’ವನ್ನು ನಿರ್ನಾಮ ಮಾಡಲಿದೆ’ ಎಂದರು.

ಇದೇ ಸಂದರ್ಭದಲ್ಲಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಮತ್ತು ಶಿವಪಾಲ್‌ ಯಾದವ್‌ ಅವರನ್ನು ‘ನರಭಕ್ಷಕ ತೋಳ’ಗಳಿಗೆ ಹೋಲಿಕೆ ಮಾಡಿದರು. ‘ಮಾಫಿಯಾ ಎದುರು ತಲೆಬಾಗುವವರು ಬುಲ್ಡೋಜರ್‌ಗಳನ್ನು ಬಳಸುವುದಿಲ್ಲ’ ಎಂದು ಅಖಿಲೇಶ್‌ ಅವರ ಟೀಕೆಗೆ ತಿರುಗೇಟು ನೀಡಿದರು.

 ‘ಬುಲ್ಡೋಜರ್‌ ಕಾರ್ಯಾಚರಣೆ; ರಾಜ್ಯ ಸರ್ಕಾರ ಕ್ಷಮೆಯಾಚಿಸುವುದೇ?’

ಲಖನೌ ಬುಲ್ಡೋಜರ್‌ಗಳನ್ನು ಬಳಸಿ ಆರೋಪಿಗಳ ಮನೆಗಳನ್ನು ಧ್ವಂಸ ಮಾಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ರಾಜ್ಯ ಸರ್ಕಾವು ಈಗ ಕ್ಷಮೆಯಾಚಿಸುವುದೇ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌ ಬುಧವಾರ ಪ್ರಶ್ನಿಸಿದರು.

‘ವ್ಯಕ್ತಿಯೊಬ್ಬ ಆರೋಪಿ ಎಂಬ ಕಾರಣಕ್ಕೇ ಆತನ ಮನೆಯನ್ನು ಧ್ವಂಸಗೊಳಿಸುವುದು ಎಷ್ಟು ಸರಿ’ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಪ್ರಶ್ನಿಸಿತ್ತು. ಈ ಬೆನ್ನಲ್ಲೇ ಅಖಿಲೇಶ್ ಅವರು ಮುಖ್ಯಮಂತ್ರಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮನೆಗಳನ್ನು ನೆಲಸಮ ಮಾಡುವ ಮೂಲಕ ಜನರನ್ನು ಭಯಗೊಳಿಸುತ್ತಿದ್ದರು...ಅಧಿಕಾರದ ಮದದಿಂದ ಪ್ರತೀಕಾರಕ್ಕಾಗಿ ‘ಬುಲ್ಡೋಜರ್‌ ಕಾರ್ಯಾಚರಣೆ’ ನಡೆಸುತ್ತಿದ್ದರು. ಈಗ ಸುಪ್ರೀಂ ಕೋರ್ಟ್‌ ‘ಬುಲ್ಡೋಜರ್‌ ನ್ಯಾಯ’ವು ಅಸಾಂವಿಧಾನಿಕ ಎಂದು ಹೇಳಿದೆ. ಹಾಗಿದ್ದಲ್ಲಿ ಈವರೆಗೆ ಮನೆಗಳನ್ನು ಧ್ವಂಸ ಮಾಡಿದ್ದಕ್ಕೆ ರಾಜ್ಯ ಸರ್ಕಾರವು ಕ್ಷಮೆಯಾಚಿಸುವುದೇ’ ಎಂದು ಪ್ರಶ್ನಿಸಿದರು. ‘ಬುಲ್ಡೋಜರ್‌ಗಳಿಗೆ ಸ್ಟೇರಿಂಗ್‌ ಇರುತ್ತದೆ ವಿನಾ ಮಿದುಳು ಇರುವುದಿಲ್ಲ. ರಾಜ್ಯದ ಜನರು ಶೀಘ್ರವೇ ಸ್ಟೇರಿಂಗ್‌ ಬದಲಾಯಿಸುತ್ತಾರೆ. ಸಮಾಜವಾದಿ ಪಕ್ಷದ ಸರ್ಕಾರ ರಚಿಸಿದ ಬಳಿಕ ಬುಲ್ಡೋಜರ್‌ಗಳನ್ನು ಗೋರಖ್‌ಪುರಕ್ಕೆ (ಆದಿತ್ಯನಾಥ ಅವರ ತವರು) ಕಳುಹಿಸಲಾಗುವುದು’ ಎಂದರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT