ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Rajasthan Elections 2023: ನಾವು ಒಗ್ಗೂಡಿದ್ದೇವೆ ಎಂದ ರಾಹುಲ್‌ ಗಾಂಧಿ

Published 16 ನವೆಂಬರ್ 2023, 13:55 IST
Last Updated 16 ನವೆಂಬರ್ 2023, 13:55 IST
ಅಕ್ಷರ ಗಾತ್ರ

ಜೈಪುರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ರಾಜಸ್ಥಾನದಲ್ಲಿ ಗುರುವಾರ ಪ್ರಚಾರವನ್ನು ಚುರುವಿನಿಂದ ಆರಂಭಿಸಿದರು.

ರಾಜಸ್ಥಾನದಲ್ಲಿ ನಾಲ್ಕು ದಿನಗಳು ಪ್ರಚಾರ ಕೈಗೊಳ್ಳುವ ಅವರು ಇದೇ 19, 21 ಮತ್ತು 22ರಂದು ರ್‍ಯಾಲಿಗಳನ್ನು ಹಮ್ಮಿಕೊಂಡಿದ್ದಾರೆ. ಹನುಮಗಢ ಮತ್ತು ಶ್ರೀಗಂಗಾನಗರದಲ್ಲಿ ಕೂಡ ಪ್ರಚಾರ ನಡೆಸಲಿದ್ದಾರೆ. 

ಮುಖ್ಯಮಂತ್ರಿ ಅಶೋಕ್‌ ಗೆಹಲೋತ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರ ನಡುವಣ ಭಿನ್ನಾಭಿಪ್ರಾಯ ಮತ್ತು ಗುಂಪುಗಾರಿಕೆಯಿಂದಾಗಿ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ತೀವ್ರ ಧಕ್ಕೆ ಆಗಿದೆ.

2020ರಲ್ಲಿ ಪೈಲಟ್‌ ಅವರು ತಮಗೆ ಆಪ್ತರಾದ 18 ಮಂದಿ ಶಾಸಕರೊಂದಿಗೆ ಬಂಡೆದ್ದು ಉನ್ನತ ಸ್ಥಾನ ತಮಗೇ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಪ್ರಯತ್ನ ವಿಫಲಗೊಂಡು ಪೈಲಟ್ ಮತ್ತು ಪಕ್ಷದ ವರ್ಚಸ್ಸಿಗೆ ತೀವ್ರ ಧಕ್ಕೆಯಾಗಿತ್ತು. 

2022ರಲ್ಲಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ಗೆಹಲೋತ್‌ ಅವರಿಗೆ ನೀಡಲು ಹೈಕಮಾಂಡ್‌ ಬಯಸಿತ್ತು. ಆಗ ಗೆಹಲೋತ್‌ ಅವರು ತಮ್ಮ ಬೆಂಬಲಿಗರೊಂದಿಗೆ ಸೇರಿ ಇದನ್ನು ತಡೆದರು. ಇದು ರಾಹುಲ್‌ ಅವರಿಗೆ ತೀವ್ರ ಸಿಟ್ಟು ತಂದಿತ್ತು. 

ಗೆಹಲೋತ್‌ ಪರ ಪ್ರಚಾರ ಕೈಗೊಳ್ಳದಿರಲು ರಾಹುಲ್‌ ಅವರು ಆರಂಭದಲ್ಲಿ ನಿರ್ಧರಿಸಿದ್ದರು ಎಂದು ಮೂಲಗಳು ಹೇಳಿವೆ. 

ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್‌  ಅವರು, ‘ಈಗಿನ ಪ್ರಕಾರ  ನಾವು ತೆಲಂಗಾಣದಲ್ಲಿ ಪ್ರಾಯಶಃ ಗೆಲ್ಲುತ್ತೇವೆ. ಮಧ್ಯಪ್ರದೇಶದಲ್ಲಿ ಖಂಡಿತಾ ಅಧಿಕಾರಕ್ಕೆ ಬರುತ್ತೇವೆ. ಛತ್ತೀಸಗಢದಲ್ಲಿ ಕೂಡ ಖಚಿತವಾಗಿ ಗೆಲುವು ಪಡೆಯುತ್ತೇವೆ. ರಾಜಸ್ಥಾನದಲ್ಲಿ ಗೆಲುವಿನ ಸನಿಹದಲ್ಲಿದ್ದೇವೆ, ಅಲ್ಲೂ ನಾವು ಜಯಿಸಲು ಸಾಧ್ಯವಾಗಲಿದೆ ಎಂದು ಭಾವಿಸಿದ್ದೇವೆ’ ಎಂದಿದ್ದರು. ಇದರಿಂದ ಕಾಂಗ್ರೆಸ್‌ ಕಾರ್ಯಕರ್ತರು ಆಸಕ್ತಿ ಕಳೆದುಕೊಂಡಿದ್ದರು.

ಗೆಹಲೋತ್‌ ಅವರು ತಾವು ಜಾರಿಗೆ ತಂದ ಕಲ್ಯಾಣ ಯೋಜನೆಗಳನ್ನು ಮತದಾರರ ಮುಂದಿಟ್ಟು ಮತ ಯಾಚಿಸಿದರೂ ಮತ್ತು ಪೈಲಟ್‌ ಅವರು ಒಗ್ಗೂಡಿ ಕಾರ್ಯ ನಿರ್ವಹಿಸುವುದನ್ನು ತಾವು ಎದುರುನೋಡುತ್ತಿರುವುದಾಗಿ ಹೇಳಿದ್ದರೂ ಪಕ್ಷದ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರು ಇವರಿಬ್ಬರು ನಡುವಣ ಸ್ನೇಹಪರತೆಯನ್ನು ವಾಸ್ತವವಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲ.

ಗೆಹಲೋತ್‌, ಪೈಲಟ್‌ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಗೋವಿಂದ್‌ ಸಿಂಗ್‌ ಧೊಟಾಸರಾ ಅವರು ಗುರುವಾರ ವಿಮಾನನಿಲ್ದಾಣದಲ್ಲಿ ಒಗ್ಗೂಡಿ ನಿಂತು ನಗುಮೊಗದಿಂದ ರಾಹುಲ್‌ ಅವರನ್ನು ಬರಮಾಡಿಕೊಂಡಿದ್ದಾರೆ. ಇದು ಕೇವಲ ಫೋಟೊಗೆ ಪೋಸು ನೀಡಲಷ್ಟೇ ಅಲ್ಲ. ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ ಎಂಬುದನ್ನು ಸಾಬೀತುಪಡಿಸಲು ಕೂಡ ಆಗಿತ್ತು. 

‘ನಾವು ನೋಡಲಷ್ಟೇ ಒಟ್ಟಾಗಿ ಇಲ್ಲ. ನಾವು ಒಗ್ಗೂಡಿದ್ದೇವೆ ಕೂಡ. ರಾಜಸ್ಥಾನದಲ್ಲಿ ಪಕ್ಷವು ಗೆಲ್ಲುತ್ತದೆ’ ಎಂದು ವರದಿಗಾರರಿಗೆ ರಾಹುಲ್‌ ಹೇಳಿದ್ದಾರೆ.

ವಾಸ್ತವವಾಗಿ ರಾಹುಲ್‌ ಅವರನ್ನು ಬರಮಾಡಿಕೊಳ್ಳುವ ಮೊದಲು ಗೆಹಲೋತ್‌ ಮತ್ತು ಪೈಲಟ್‌ ಅವರು  ‘ಮೊದಲು ನೀವು, ಮೊದಲು ನೀವು’ ಎಂದು ಚರ್ಚಿಸುತ್ತಿದ್ದರು. ರಾಹುಲ್‌ ಅವರು ಮೊದಲು ಸಚಿನ್‌ ಪೈಲಟ್‌ ಅವರ ಕೈಕುಲುಕಿ ನಂತರ ಗೆಹಲೋತ್‌ ಅವರತ್ತ ತೆರಳಿದರು.

ಇದಕ್ಕೂ ಮೊದಲು ಗೆಹಲೋತ್‌ ಅವರು, ಪೈಲಟ್‌ ಅವರೊಂದಿಗೆ ಸಭೆಯಲ್ಲಿದ್ದ ಚಿತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ‘ಒಗ್ಗೂಡಿ ಮತ್ತೆ ನಾವು ಗೆಲ್ಲುತ್ತೇವೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT