ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀದಿಗೆ ಪ್ರಧಾನಿ ಅರ್ಹತೆಗಳಿವೆ ಎಂದ ಸೇನ್: ಟೀಕೆಗೆ ಒಂದಾದ ಬಿಜೆಪಿ, ಕಾಂಗ್ರೆಸ್‌

Last Updated 16 ಜನವರಿ 2023, 10:38 IST
ಅಕ್ಷರ ಗಾತ್ರ

ಕೋಲ್ಕತ್ತ: ದೇಶದ ಪ್ರಧಾನಿ ಹುದ್ದೆಯನ್ನು ನಿರ್ವಹಿಸುವಂಥ ಗುಣಗಳು ಮಮತಾ ಬ್ಯಾನರ್ಜಿ ಅವರಲ್ಲಿರುವುದು ಪ್ರಶ್ನಾತೀತ ಎಂಬ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಇತ್ತೀಚಿನ ಹೇಳಿಕೆಗೆ ಪಶ್ಚಿಮ ಬಂಗಾಳದ ವಿರೋಧ ಪಕ್ಷಗಳ ನಾಯಕರು ಕೆರಳಿದ್ದಾರೆ.

ಸೇನ್‌ರ ಸಾಮಾಜಿಕ ಅರ್ಥಶಾಸ್ತ್ರದ ಸಿದ್ಧಾಂತಗಳನ್ನು ಒಪ್ಪುವ ಸಿಪಿಐಎಂ ಸೇರಿದಂತೆ ಬಿಜೆಪಿ ಮತ್ತು ಕಾಂಗ್ರೆಸ್‌ನ ನಾಯಕರೂ ಸೇನ್‌ ಅವರ ಅಭಿಪ್ರಾಯವನ್ನು ವಿರೋಧಿಸಿದ್ದಾರೆ. ಆದರೆ, ಇತರ ಪಕ್ಷಗಳ ಟೀಕೆಗೆ ಹೋಲಿಸಿದರೆ ಸಿಪಿಐಎಂ ಟೀಕೆ ಗಟ್ಟಿಯಾಗೇನೂ ಇಲ್ಲ.

ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಎಷ್ಟರಮಟ್ಟಿಗೆ ಒಗ್ಗೂಡಿಸಬಲ್ಲರು ಎಂಬ ಅನುಮಾನವನ್ನೂ ಸೇನ್ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಸಿಪಿಐಎಂನ ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ನೆನಪಿಸಿದ್ದಾರೆ. ಅಲ್ಲದೇ, ಸೇನ್‌ ಅವರ ಅಭಿಪ್ರಾಯವು ಬಾಹ್ಯ ಅವಲೋಕನವಷ್ಟೇ ಎಂದು ಹೇಳಿದ್ದಾರೆ.

‘ಬಿಜೆಪಿ ವಿರುದ್ಧ ದೇಶದ ವಿರೋಧ ಪಕ್ಷಗಳು ಒಂದಾಗಬೇಕಾಗಿರುವುದು ನಿಜ. ಆದರೆ, ವಿರೋಧ ಪಕ್ಷಗಳ ಒಗ್ಗಟ್ಟನ್ನು ಒಡೆಯಲು ಮಮತಾ ಬ್ಯಾನರ್ಜಿವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಸಾಧನವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಸೇನ್‌ ಅವರ ಅವಲೋಕನದಲ್ಲಿ ಕಣ್ಮರೆಯಾಗಿದೆ’ ಎಂದು ಚಕ್ರವರ್ತಿ ಅವರು ಹೇಳಿದರು.

‘ಕಾಂಗ್ರೆಸ್ ಇಲ್ಲದೆ ಬಿಜೆಪಿಯ ವಿರುದ್ಧ ಒಗ್ಗಟ್ಟು ಸಾಧಿಸಲು ಎಂದಿಗೂ ಸಾಧ್ಯವಿಲ್ಲ. ಮಮತಾ ಬ್ಯಾನರ್ಜಿ ಅವರು ಭಾರತದ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಆದರೆ ಕಾಂಗ್ರೆಸ್ ಹೊರತಾಗಿ ಅದನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ’ ಎಂದು ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಪ್ರದೀಪ್ ಭಟ್ಟಾಚಾರ್ಯ ಹೇಳಿದ್ದಾರೆ.

‘ಅಮರ್ತ್ಯ ಸೇನ್ ಹಗಲುಗನಸು ಕಾಣುತ್ತಿದ್ದಾರೆ. ಮಮತಾ ಬ್ಯಾನರ್ಜಿ ಅವರು ಮತದಾರರನ್ನು ಸೆಳೆಯಲು ಹಣದ ಚೀಲಗಳೊಂದಿಗೆ ಪಶ್ಚಿಮ ಬಂಗಾಳದ ಹೊರಗಿನ ಇತರ ರಾಜ್ಯಗಳಿಗೆ ಹೋಗಿದ್ದರು. ಆದರೆ ಅವರು ಎಲ್ಲೆಡೆ ವಿಫಲರಾದರು. ಸೇನ್‌ ಒಂದು ಅಂಶವನ್ನು ಗಮನಿಸಿದಂತೆ ಇಲ್ಲ. ಪ್ರಧಾನಿ ಹುದ್ದೆಗೆ ಪ್ರಯತ್ನಿಸಬೇಕಿದ್ದರೆ, ಅದಕ್ಕೆ ಬೇಕಾದ ಸ್ಥಾನಗಳನ್ನು ಗಳಿಸಬೇಕಾಗುತ್ತದೆ. ತೃಣಮೂಲ ಕಾಂಗ್ರೆಸ್ ಈ ಸ್ಥಾನಗಳನ್ನು ಎಲ್ಲಿಂದ ಹೊಂದಿಸುತ್ತದೆ’ ಎಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಪಕ್ಷದ ಲೋಕಸಭಾ ಸದಸ್ಯ ದಿಲೀಪ್ ಘೋಷ್ ತೀವ್ರ ವಾಗ್ದಾಳಿ ನಡೆಸಿದರು.

ಅದರೆ, ವಿರೋಧ ಪಕ್ಷಗಳ ವಿಮರ್ಶೆ, ಟೀಕೆಗೆ ತೃಣಮೂಲ ಕಾಂಗ್ರೆಸ್ ತಲೆಕಡಿಸಿಕೊಂಡಿಲ್ಲ. ಟಿಎಂಸಿ ರಾಜ್ಯಸಭಾ ಸದಸ್ಯ ಸುಖೇಂದು ಶೇಖರ್ ರಾಯ್ ಮಾತನಾಡಿ, ‘ದೇಶದ ಪ್ರಧಾನಿಯಾಗುವ ಅರ್ಹತೆಗಳನ್ನು ಮಮತಾ ಬ್ಯಾನರ್ಜಿ ಅವರು ಹಲವಾರು ಬಾರಿ ಸಾಬೀತುಪಡಿಸಿದ್ದಾರೆ. ಆ ಗುಣಮಟ್ಟವನ್ನು ಅಮರ್ತ್ಯ ಸೇನ್ ಅವರು ಮೆಚ್ಚಿದ್ದಾರೆ ಮತ್ತು ದೃಢಪಡಿಸಿದ್ದಾರೆ’ ಎಂದು ಹೇಳಿದರು.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಪ್ರಧಾನಿಯಾಗುವ ಸಾಮರ್ಥ್ಯವಿದೆ. ಆದರೆ, ಬಿಜೆಪಿ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಲು ಅವರಿಗೆ ಸಾಧ್ಯವೇ? ಎಂದು ನೊಬೆಲ್‌ ಪುರಸ್ಕೃತ ಅಮರ್ತ್ಯ ಸೇನ್ ಅವರು ಭಾನುವಾರ ಕೋಲ್ಕತ್ತದಲ್ಲಿ ನಡೆದಿದ್ದ ಸಂವಾದ ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯಟ್ಟಿದ್ದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT