ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Voter ID ತಿದ್ದಿದ ಪ್ರಕರಣ; ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನಿಗೆ ನೋಟಿಸ್

Published 22 ನವೆಂಬರ್ 2023, 14:26 IST
Last Updated 22 ನವೆಂಬರ್ 2023, 14:28 IST
ಅಕ್ಷರ ಗಾತ್ರ

ತಿರುವನಂತಪುರ: ಇತ್ತೀಚೆಗೆ ನಡೆದ ಯುವ ಕಾಂಗ್ರೆಸ್‌ ಘಟಕದ ಚುನಾವಣೆಯಲ್ಲಿ ಮತದಾರರ ಗುರುತಿನ ಚೀಟಿ ತಿದ್ದಿರುವುದು ಹಾಗೂ ಅಕ್ರಮಗಳಿಗೆ ಚುನಾವಣಾ ಗುರುತಿನ ಚೀಟಿಯನ್ನು ಬಳಕೆ ಮಾಡಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ ಎಂದಿರುವ ಕೇರಳ ಪೊಲೀಸರು, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಹುಲ್ ಮಮಕೂಟತ್ತಿಲ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ.

ಚುನಾವಣಾ ಅಪರಾಧಗಳ ಕುರಿತು ತಿರುವನಂತಪುರ ನಗರ ಪೊಲೀಸ್ ಆಯುಕ್ತ ನಾಗರಾಜು ಚಕಿಲಂ ಅವರು ತನಿಖೆಗೆ ಆದೇಶಿಸಿದ್ದಾರೆ. ಇದರ ಭಾಗವಾಗಿ ಕಾಂಗ್ರೆಸ್‌ನ ಯುವ ಘಟಕಕ್ಕೆ ಇತ್ತೀಚೆಗಷ್ಟೇ ಅಧ್ಯಕ್ಷರಾಗಿ ಆಯ್ಕೆಯಾದ ರಾಹುಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.

‘ಚುನಾವಣಾ ಗುರುತಿನ ಚೀಟಿಯನ್ನು ತಿದ್ದಿರುವ ಕುರಿತು ಸಾಕಷ್ಟು ದೂರುಗಳು ಸಲ್ಲಿಕೆಯಾಗಿದ್ದವು. ರಾಜ್ಯ ಚುನಾವಣಾ ಆಯೋಗ ಕಚೇರಿಯಿಂದಲೂ ದೂರು ಸಲ್ಲಿಕೆಯಾಗಿದೆ. ಇದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಕಲೆಹಾಕಲಾಗಿದೆ. ಈ ಅಕ್ರಮಕ್ಕೆ ಸಂಬಂಧಿಸಿದ ನಾಲ್ಕು ಜನರನ್ನು ಈಗಾಗಲೇ ಬಂಧಿಸಲಾಗಿದೆ’ ಎಂದು ನಾಗರಾಜು ತಿಳಿಸಿದ್ದಾರೆ.

‘ನಗರದ ಮ್ಯೂಸಿಯಂ ರಸ್ತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೆಲ ಆ್ಯಪ್‌ ಹಾಗೂ ಫೋಟೊಶಾಪ್‌ ಬಳಸಿ ಚುನಾವಣಾ ಗುರುತಿನ ಚೀಟಿಯನ್ನು ತಿದ್ದಲಾಗಿದೆ. ಅದನ್ನು ರಾಜಕೀಯ ಪಕ್ಷದ ಚುನಾವಣೆಯಲ್ಲಿ ಬಳಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ಮೊಬೈಲ್ ಫೋನ್‌ ಹಾಗೂ ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ತಿದ್ದಿರುವ ಗುರುತಿನ ಚೀಟಿಗಳ ಪ್ರತಿಗಳನ್ನು ಸ್ಟೋರ್ ಮಾಡಿರುವುದು ಪತ್ತೆಯಾಗಿದೆ’ ಎಂದು ತಿಳಿಸಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿಂತೆ ಕೆಲ ಸಂಸ್ಥೆಗಳಿಗೆ ಕೆಲ ಕೋರಿಕೆಗಳನ್ನು ಸಲ್ಲಿಸಲಾಗಿದೆ. ಅವು ದೊರೆತ ನಂತರ ತನಿಖೆಯ ವೇಗ ಇನ್ನಷ್ಟು ಚುರುಕುಗೊಳ್ಳಲಿದೆ. ಇಂಥ ಪ್ರಕರಣಗಳು ಮತ್ತಷ್ಟು ಇರುವ ಸಾಧ್ಯತೆಗಳಿವೆ. ಅವುಗಳನ್ನು ತನಿಖೆಯಿಂದ ಪತ್ತೆ ಮಾಡಬೇಕಿದೆ. ಇಂಥ ಕೃತ್ಯ ಎಸಗುವ ದೊಡ್ಡ ಗುಂಪುಗಳಿಗೆ ಕೆಲ ಸಣ್ಣ ಗುಂಪುಗಳು ನೆರವಾಗಿರುವ ಸಾಧ್ಯತೆಯೂ ಇದೆ’ ಎಂದು ನಾಗರಾಜು ಹೇಳಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ಮಮಕೂಟತ್ತಿಲ್ ಅವರು, ‘ಇದೊಂದು ರಾಜಕೀಯ ಪ್ರೇರಿತ ಪ್ರಕರಣ. ಕಾಂಗ್ರೆಸ್ ಪಕ್ಷವು ಇದನ್ನು ಕಾನೂನಾತ್ಮಕವಾಗಿಯೇ ಎದುರಿಸಲಿದೆ’ ಎಂದಿದ್ದಾರೆ.

‘ಕಾಂಗ್ರೆಸ್ ಪಕ್ಷವು ಕೇಂದ್ರ ಮತ್ತು ರಾಜ್ಯದಲ್ಲಿನ ಸರ್ಕಾರಗಳ ವಿರುದ್ಧ ಹೋರಾಟ ನಡೆಸುತ್ತಿದೆ. ಈ ಎರಡೂ ಸರ್ಕಾರಗಳು ತಮ್ಮದೇ ಸಂಸ್ಥೆಗಳ ಮೂಲಕ ಕಾಂಗ್ರೆಸ್ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿವೆ’ ಎಂದು ಆರೋಪಿಸಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್‌ನ ಹಿರಿಯ ನಾಯಕ ರಮೇಶ್ ಚೆನ್ನಿತ್ತಾಲ ಅವರು ಪ್ರಕರಣ ಕುರಿತು ಪ್ರತಿಕ್ರಿಯಿಸಿ, ‘ಯಾರೋ ಮಾಡಿದ ತಪ್ಪಿನ ಹೋಣೆಯನ್ನು ಕಾಂಗ್ರೆಸ್ ಹೊತ್ತುಕೊಳ್ಳುವುದಿಲ್ಲ. ಪಕ್ಷದ ಕೆಲ ಯುವ ಕಾರ್ಯಕರ್ತರು ಇಂಥ ಅಕ್ರಮಗಳಲ್ಲಿ ತೊಡಗಿದ್ದರೆ, ಅದರ ಪರಿಣಾಮವನ್ನೂ ಅವರೇ ಎದುರಿಸಬೇಕಾಗುತ್ತದೆ’ ಎಂದಿದ್ದಾರೆ.

ನಕಲಿ ಚುನಾವಣಾ ಗುರುತಿನ ಚೀಟಿ ಬಳಕೆ ಕುರಿತು ಸಲ್ಲಿಕೆಯಾದ ದೂರಿನ ಕುರಿತು ತನಿಖೆ ನಡೆಸುವಂತೆ ಕೇರಳ ಪೊಲೀಸರಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜಯ್ ಎಂ. ಕೌಲ್‌ ಶುಕ್ರವಾರ ಸೂಚಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಸಿಪಿಐಎಂ ಹಾಗೂ ಬಿಜೆಪಿ ಕೇರಳ ಘಟಕ ಆಕ್ರೋಶ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT