ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ: ಆಂಧ್ರಪ್ರದೇಶದ ಪುರಂದೇಶ್ವರಿ ನೂತನ ಸ್ಪೀಕರ್?

Published 10 ಜೂನ್ 2024, 23:30 IST
Last Updated 10 ಜೂನ್ 2024, 23:30 IST
ಅಕ್ಷರ ಗಾತ್ರ

ಹೈದರಾಬಾದ್: ಆಂಧ್ರಪ್ರದೇಶದ ರಾಜಮುಂಡ್ರಿ ಕ್ಷೇತ್ರದ ಸಂಸದೆ ದಗ್ಗುಬಾಟಿ ಪುರಂದೇಶ್ವರಿ ಅವರು 18ನೇ ಲೋಕಸಭೆಯ ಸ್ಫೀಕರ್ ಆಗಿ ಆಯ್ಕೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. 

ಸಚಿವ ಸಂಪುಟ ರಚನೆಯ ಸಂದರ್ಭದಲ್ಲಿ ಬಿಜೆಪಿ ಕೇಂದ್ರ ನಾಯಕತ್ವವು ಇವರ ಹೆಸರು ಪರಿಗಣಿಸದಿರುವುದು ಈ ಮಾತಿಗೆ ಪುಷ್ಟಿ ನೀಡಿದೆ. ಪುರಂದೇಶ್ವರಿ ಅವರು ಪ್ರಸ್ತುತ ಆಂಧ್ರಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷೆಯೂ ಆಗಿದ್ದಾರೆ.

ಲೋಕಸಭೆಯ ಸ್ಪೀಕರ್‌ ಸ್ಥಾನ ನಿರ್ಣಾಯಕವಾದುದಾಗಿದೆ. ಪುರಂದೇಶ್ವರಿ ಅವರು ಎನ್‌ಡಿಎಯ ಪ್ರಮುಖ ಮೈತ್ರಿಪಕ್ಷ  ತೆಲುಗುದೇಶಂ ಪಕ್ಷದ ಮುಖ್ಯಸ್ಥ ಎನ್‌.ಚಂದ್ರಬಾಬುನಾಯ್ಡು ಅವರ ಹತ್ತಿರದ ಬಂಧುವು ಆಗಿದ್ದಾರೆ.

ಆರಂಭದಲ್ಲಿ ನಾಯ್ಡು ಅವರು ಎರಡು ಸಚಿವ ಸ್ಥಾನದ ಜೊತೆಗೆ ಸ್ಪೀಕರ್‌ ಸ್ಥಾನಕ್ಕೂ ಬೇಡಿಕೆ ಇಟ್ಟಿದ್ದರು. ಅವರು ಈಗ ಬಿಜೆಪಿ ಪುರಂದೇಶ್ವರಿ ಹೆಸರನ್ನು ಪರಿಗಣಿಸಿದರೆ ಆಗಬಹುದು ಎಂಬ ನಿಲುವು ಹೊಂದಿದ್ದಾರೆ ಎನ್ನಲಾಗಿದೆ. 

ಆಂಧ್ರದಿಂದ ಆಯ್ಕೆಯಾಗಿರುವ ಸಂಸದರಲ್ಲಿ ಪುರಂದೇಶ್ವರಿ ಅವರ ಹಿರಿತನವನ್ನು ಪಕ್ಷ ಪರಿಗಣಿಸಿದೆ ಎನ್ನಲಾಗಿದೆ. ಇವರು ಮೂರನೇ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದು, ಯುಪಿಎ ಆಡಳಿತಾವಧಿಯಲ್ಲಿ ಸಚಿವೆಯೂ ಆಗಿದ್ದರು.

‘ದಕ್ಷಿಣದತ್ತ ಚಿತ್ತ’ ಕಾರ್ಯತಂತ್ರದಡಿ ಆಂಧ್ರದಿಂದ ಆಯ್ಕೆಯಾದ ಪಕ್ಷದ ಸಂಸದರನ್ನು ಸಂಪುಟಕ್ಕೆ ಸೇರ್ಪಡೆಗೆ  ಬಿಜೆಪಿ ಚಿಂತನೆ ಹೊಂದಿತ್ತು ಎನ್ನಲಾಗಿದೆ. ಆಂಧ್ರದಲ್ಲಿ ಬಿಜೆಪಿ–ತೆಲುಗುದೇಶಂ–ಜನಸೇನಾ ಮೈತ್ರಿ ಹೊಂದಿದ್ದವು. 

ಇನ್ನೊಂದೆಡೆ, ಸಂಪುಟಕ್ಕೆ ಸೇರಲು ಬಿಜೆಪಿ ಕೇಂದ್ರ ನಾಯಕತ್ವವು ನರಸಾಪುರ ಕ್ಷೇತ್ರದ ಸಂಸದ ಭೂಪತಿರಾಜು ಶ್ರೀನಿವಾಸ ವರ್ಮಾರನ್ನು ಆಯ್ಕೆ ಮಾಡಿರುವುದು ಪಕ್ಷದ ವಲಯದಲ್ಲಿ ಆಶ್ಚರ್ಯ ಮೂಡಿಸಿದೆ. ಭೂಪತಿರಾಜು ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಸಿ.ಎಂ.ರಮೇಶ್ ರಾಜ್ಯದಿಂದ ಆಯ್ಕೆಯಾದ ಮತ್ತೊಬ್ಬ ಬಿಜೆಪಿ ಸಂಸದ.

ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿಯ ಆಂಧ್ರಪ್ರದೇಶ ಘಟಕ ಹಾಗೂ ಟಿಡಿಪಿ ಮೂಲಗಳು ಪುರಂದೇಶ್ವರಿ ಅವರು ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗುವ ಸ್ಪಷ್ಟ ಸಾಧ್ಯತೆಗಳನ್ನು ದೃಢಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT