ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸು: ಅಂಗನವಾಡಿ ಕಾರ್ಯಕರ್ತೆಗೆ ಶಿಕ್ಷಕಿ ಸ್ಥಾನ

ಈಗಾಗಲೇ ಉತ್ತರಾಖಂಡದಲ್ಲಿ ಜಾರಿ
Last Updated 16 ಜುಲೈ 2022, 4:22 IST
ಅಕ್ಷರ ಗಾತ್ರ

ಬೆಂಗಳೂರು: ಅಂಗನವಾಡಿಗಳ ಜತೆಗೆ ಒಂದು ಮತ್ತು ಎರಡನೇ ತರಗತಿಗಳನ್ನು ಸಂಯೋಜಿಸಿ ಶಾಲಾ ಸಾಂಸ್ಥಿಕ ಸ್ವರೂಪ ನೀಡಲು,ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರೆಂದು ಪರಿಗಣಿಸಲುರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸು ಮಾಡಿದೆ. ಉತ್ತರಾಖಂಡ ರಾಜ್ಯವು ಇದನ್ನು ಜಾರಿ ಮಾಡಿದ್ದು, ಕರ್ನಾಟಕವೂ ಅನುಷ್ಠಾನಕ್ಕೆ ಮುಂದಾಗಿದೆ.

ಎನ್‌ಇಪಿ ಆಶಯವನ್ನು ದೇಶದ ಎಲ್ಲ ರಾಜ್ಯಗಳೂ ಅನುಷ್ಠಾನಕ್ಕೆ ತಂದರೆ 13,13,935 ಅಂಗನವಾಡಿ ಕಾರ್ಯಕರ್ತೆಯರು ಶಿಕ್ಷಕಿಯರ ಗೌರವಕ್ಕೆ ಪಾತ್ರರಾಗಲಿದ್ದಾರೆ. ಅವರು ಪಡೆಯುತ್ತಿರುವ ₹10 ಸಾವಿರ ಗೌರವಧನ ವೇತನವಾಗಿ ಪರಿವರ್ತನೆಯಾಗಲಿದೆ. ಜತೆಗೆ ಸೇವಾ ಭದ್ರತೆಯೂ ದೊರಕಲಿದೆ.ಈಗಾಗಲೇ ಉತ್ತರಾಖಂಡ ರಾಜ್ಯ ಎನ್‌ಇಪಿಯ 1ನೇ ಅಧ್ಯಾಯವನ್ನು ಜಾರಿಗೊಳಿಸಿದ್ದು, ಅಲ್ಲಿನ 4,457 ಅಂಗನವಾಡಿಗಳಿಗೆ ಶಾಲಾ ಸಾಂಸ್ಥಿಕ ಸ್ವರೂಪ ನೀಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

3 ವರ್ಷದಿಂದ 6 ವರ್ಷದ ಒಳಗಿನ ಮಕ್ಕಳ ಕಲಿಕೆಗೆಂದು ಕಾರ್ಯಕರ್ತೆಯರನ್ನು ನೇಮಿಸಿಕೊಂಡಿದ್ದರೂ, ಅವರನ್ನು ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿ ಮಕ್ಕಳು, ಬಾಣಂತಿಯರು, ಕಿಶೋರಿಯರು, ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ಇರಿಸಲು, ಪೌಷ್ಟಿಕ ಆಹಾರ ವಿತರಣೆ ಸೇರಿದಂತೆ ಸರ್ಕಾರದ ಹಲವು ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. 2021–22ನೇ ಸಾಲಿನಲ್ಲಿ ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಕಲಿಸುವ ಜತೆಗೆ, 56.50 ಲಕ್ಷ ಫಲಾನುಭವಿಗಳಿಗೆ ಸೇವೆ ಒದಗಿಸಿದ್ದಾರೆ.

ದೇಶದ ಇತಿಹಾಸದಲ್ಲಿ ಇದುವರೆಗೂ ಅಂಗನವಾಡಿ, ಬಾಲವಾಡಿ ಹಾಗೂ ಪೂರ್ವ ಪ್ರಾಥಮಿಕ ತರಗತಿಗಳನ್ನು ಶಾಲಾ (ಸ್ಕೂಲಿಂಗ್) ಹಂತವೆಂದು ಪರಿಗಣಿಸಿರಲಿಲ್ಲ. ಶಾಲಾ ತರಗತಿಗಳ ಕೆಳಹಂತದ ವಿಸ್ತರಣೆಯ ಚಟುವಟಿಕೆಗಳೆಂದು ನೋಡಲಾಗುತ್ತಿತ್ತು.ಪ್ರಸ್ತುತ ಮಗುವಿನ ಬೌದ್ಧಿಕ, ಮಿದುಳಿನ ವಿಕಾಸದ ಆಧಾರದ ಮೇಲೆ ಶಿಕ್ಷಣವನ್ನು ನಾಲ್ಕು ಹಂತಗಳಾಗಿ ವಿಭಾಗಿಸಲಾಗಿದೆ. ಮೂರು ವರ್ಷಗಳ ಅಂಗನವಾಡಿ ಸೇರಿ 2ನೇ ತರಗತಿಯವರೆಗೆ ಪ್ರಾಥಮಿಕ, 3ರಿಂದ 5ರವರೆಗೆ ಮಾಧ್ಯಮಿಕ, 6ರಿಂದ 8ರವರೆಗೆ ಪೂರ್ವಪ್ರೌಢ, 9ರಿಂದ 12ರವರೆಗೆ ಪ್ರೌಢಶಾಲಾ ಹಂತಗಳೆಂದು ಗುರುತಿಸಲಾಗಿದೆ.

ಮೂಲ ಸೌಕರ್ಯಗಳ ನಿರೀಕ್ಷೆ: ರಾಜ್ಯ ಸರ್ಕಾರವಿದ್ಯಾಪ್ರವೇಶ ಯೋಜನೆಯ ಹೆಸರಲ್ಲಿ ಅಂಗನವಾಡಿಗಳನ್ನು ಶಾಲಾ ವ್ಯಾಪ್ತಿಗೆ ತರಲು ನಿರ್ಧರಿಸಿದ್ದು, ಮೂಲಸೌಕರ್ಯಗಳಿಗೆ ಹೆಚ್ಚಿನ ನೆರವು ದೊರಕಲಿದೆ. ರಾಜ್ಯದಲ್ಲಿ 24,403 ಅಂಗನವಾಡಿಗಳು ಸ್ವಂತ ಕಟ್ಟಡವಿಲ್ಲದೇ ಬಾಡಿಗೆ ಕೊಠಡಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕುವ ನಿರೀಕ್ಷೆ ಇದೆ ಎನ್ನುವುದು ಅಂಗನವಾಡಿ ಸಿಬ್ಬಂದಿ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT