ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ: ಮುಸ್ಲಿಂ ವಿವಾಹ ನೋಂದಣಿ ಕಾಯ್ದೆ ರದ್ದತಿಗೆ ತೀರ್ಮಾನ

ಸರ್ಕಾರದ್ದು ಮುಸ್ಲಿಂ ವಿರೋಧ ನೀತಿ– ವಿರೋಧ ಪಕ್ಷಗಳ ಆರೋಪ
Published 24 ಫೆಬ್ರುವರಿ 2024, 16:11 IST
Last Updated 24 ಫೆಬ್ರುವರಿ 2024, 16:11 IST
ಅಕ್ಷರ ಗಾತ್ರ

ಗುವಾಹಟಿ: ಬಾಲ್ಯ ವಿವಾಹವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ, ‘ಅಸ್ಸಾಂ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳ ನೋಂದಣಿ ಕಾಯ್ದೆ–1935’ ಅನ್ನು ರದ್ದುಗೊಳಿಸಲು ಅಸ್ಸಾಂ ಸಂಪುಟ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಈ ಮೂಲಕ ಅಸ್ಸಾಂ ಸರ್ಕಾರವು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ತರುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ ಎನ್ನಲಾಗುತ್ತಿದೆ. 

ಸರ್ಕಾರದ ಈ ನಿರ್ಧಾರವನ್ನು ವಿರೋಧ ಪಕ್ಷಗಳು ಟೀಕಿಸಿದ್ದು, ‘ಮುಸ್ಲಿಂ ವಿರೋಧಿ ನೀತಿ’ ಎಂದು ಆಕ್ರೋಶ ವ್ಯಕ್ತಪಡಿಸಿವೆ.

ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್‌ ಮಾಡಿರುವ ಮುಖ್ಯಮಂತ್ರಿ ಶರ್ಮಾ, ‘ಕಾನೂನಿನ ಪ್ರಕಾರ ವಿವಾಹವಾಗುವ ವಧು ಮತ್ತು ವರನಿಗೆ ಕ್ರಮವಾಗಿ 18 ಮತ್ತು 21 ವರ್ಷಗಳಾಗಿರಬೇಕು. ಆದರೆ ಇಷ್ಟು ವಯಸ್ಸು ಆಗಿಲ್ಲದಿದ್ದರೂ ವಿವಾಹ ನೋಂದಣಿಗೆ ಅವಕಾಶ ನೀಡುವ ನಿಬಂಧನೆಗಳನ್ನು ಈ ಕಾಯ್ದೆ ಒಳಗೊಂಡಿದೆ. ಹೀಗಾಗಿ ಅಸ್ಸಾಂನಲ್ಲಿ ಬಾಲ್ಯ ವಿವಾಹಗಳನ್ನು ನಿಷೇಧಿಸುವ ಮತ್ತೊಂದು ಮಹತ್ವದ ಹೆಜ್ಜೆಯನ್ನು ಸರ್ಕಾರ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಪೂರ್ವದ ಈ ಹಳೆಯ ಕಾಯ್ದೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಶುಕ್ರವಾರ ತಡರಾತ್ರಿ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಯಿತು ಎಂದು ಅವರು ತಿಳಿಸಿದ್ದಾರೆ.

ಸಂಪುಟ ನಿರ್ಧಾರಗಳ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವ ಜಯಂತ್‌ ಮಲ್ಬರುವಾ ಅವರು, ‘ವಸಾಹತುಶಾಹಿ ಯುಗದ ಕಾಯ್ದೆಯನ್ನು ರದ್ದುಗೊಳಿಸುವ ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಇದು ಮುಖ್ಯಮಂತ್ರಿ ಶರ್ಮಾ ಅವರ ಮಹತ್ವದ ಹೆಜ್ಜೆಯಾಗಿದೆ. ಎಲ್ಲ ವಿವಾಹಗಳು ವಿಶೇಷ ವಿವಾಹ ಕಾಯ್ದೆಯಡಿ ನೋಂದಣಿಯಾಗಬೇಕು ಎಂದು ನಾವು ಬಯಸುತ್ತೇವೆ’ ಎಂದು ಹೇಳಿದರು. 

‘ಪ್ರಸ್ತುತ 94 ಮುಸ್ಲಿಂ ವಿವಾಹ ನೋಂದಣಿದಾರರ ಬಳಿ ನೋಂದಣಿ ಕುರಿತ ದಾಖಲೆಗಳಿವೆ. ಇನ್ನು ಆ ದಾಖಲೆಗಳನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ನೋಂದಣಾಧಿಕಾರಿಗಳ ಸುಪರ್ದಿಗೆ ನೀಡಲಾಗುತ್ತದೆ. ಮುಸ್ಲಿಂ ವಿವಾಹ ನೋಂದಣಿದಾರರ ಪುನರ್ವಸತಿಗಾಗಿ ಒಂದು ಬಾರಿಗೆ ಎರಡು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ’ ಎಂದು ಅವರು ವಿವರಿಸಿದರು.

ಬಹುಪತ್ನಿತ್ವ ನಿಷೇಧಕ್ಕೂ ಚಿಂತನೆ

ಉತ್ತರಾಖಂಡ ಸರ್ಕಾರವು ಇತ್ತೀಚೆಗೆ ಯುಸಿಸಿ ಮಸೂದೆಯನ್ನು ಅಂಗೀಕರಿಸಿದ ಬಳಿಕ, ಬಹುಪತ್ನಿತ್ವವನ್ನು ಕೊನೆಗೊಳಿಸಲು ರಾಜ್ಯ ಸರ್ಕಾರ ಬಲಿಷ್ಠ ಮಸೂದೆ ತರಲು ಯೋಜಿಸುತ್ತಿದೆ ಎಂದು ಶರ್ಮಾ ಈ ಹಿಂದೆ ಘೋಷಿಸಿದ್ದರು. ತಮ್ಮ ಸರ್ಕಾರವು ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸುತ್ತದೆ. ಆದರೆ ರಾಜ್ಯದಲ್ಲಿ ತಕ್ಷಣವೇ ಬಹುಪತ್ನಿತ್ವವನ್ನು ನಿಷೇಧಿಸಲು ಬಯಸುತ್ತದೆ ಎಂದು ಅವರು ತಿಳಿಸಿದ್ದರು. 

ಮುಸ್ಲಿಂ ವಿರೋಧಿ ನಡೆ– ಆರೋಪ

ಅಸ್ಸಾಂ ಸರ್ಕಾರದ ಈ ನಡೆಯನ್ನು ಬದ್ರುದ್ದೀನ್‌ ಅಜ್ಮಲ್‌ ನೇತೃತ್ವದ ಎಐಯುಡಿಎಫ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಶನಿವಾರ ಟೀಕಿಸಿವೆ. ಇದು ಸರ್ಕಾರದ ಮುಸ್ಲಿಂ ವಿರೋಧಿ ನೀತಿಯಾಗಿದ್ದು ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಕೋಮು ಕಾರ್ಯಸೂಚಿ ಬಳಸಿ ಲಾಭ ಮಾಡಿಕೊಳ್ಳಲು ಸರ್ಕಾರ ಯತ್ನಿಸುತ್ತಿದೆ ಎಂದು ಅವು ದೂರಿವೆ.

‘ಸರ್ಕಾರದ ಕ್ರಮ ನನಗೆ ಆಶ್ಚರ್ಯ ತಂದಿಲ್ಲ. ಏಕೆಂದರೆ ಈಗಾಗಲೇ ಆಜಾನ್‌ ವಿಷಯದಲ್ಲಿ ಬಿಜೆಪಿ ಹಸ್ತಕ್ಷೇಪಕ ಮಾಡಿದೆ. ಅಲ್ಲದೆ ಮದರಾಸಗಳನ್ನು ಮುಚ್ಚುವುದು ಮುಸ್ಲಿಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಿಲ್ಲಿಸುವುದೂ ಸೇರಿದಂತೆ ಹಲವು ಮುಸ್ಲಿಂ ವಿರೋಧಿ ನಿರ್ಧಾರಗಳನ್ನು ತೆಗೆದುಕೊಂಡಿದೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಇಂತಹ ಹಲವು ನಿರ್ಧಾರಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ’ ಎಂದು ಅಜ್ಮಲ್‌ ಬೇಸರದಿಂದ ಹೇಳಿದರು.

ಒಟ್ಟು 14 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಅಸ್ಸಾಂನಲ್ಲಿ ಬಿಜೆಪಿ ಕನಿಷ್ಠ 11 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. 2019ರ ಚುನಾವಣೆಯಲ್ಲಿ ಬಿಜೆಪಿ ಒಂಬತ್ತರಲ್ಲಿ ಕಾಂಗ್ರೆಸ್‌ ಮೂರರಲ್ಲಿ ಗೆದ್ದಿತ್ತು. ಅಸ್ಸಾಂ ಜನಸಂಖ್ಯೆಯಲ್ಲಿ ಶೇ 34ರಷ್ಟು ಮುಸ್ಲಿಮರಿದ್ದಾರೆ. ಬಂಗಾಳಿ ಮಾತನಾಡುವ ವಲಸಿಗ ಮುಸ್ಲಿಮರನ್ನು ಅಕ್ರಮ ವಲಸಿಗರು ಎಂದು ಕರೆಯುವ ಬಿಜೆಪಿ ಇವರಿಂದ ಸ್ಥಳೀಯ ಸಮುದಾಯಕ್ಕೆ ಬೆದರಿಕೆ ಇದೆ ಎಂದು ಪ್ರತಿಪಾದಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT