ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ | ನ್ಯಾಯ ಯಾತ್ರೆಯಲ್ಲಿ ಭಾಗವಹಿಸದಂತೆ ಜನರಿಗೆ ಬಿಜೆಪಿ ಬೆದರಿಕೆ: ರಾಹುಲ್

Published 21 ಜನವರಿ 2024, 10:09 IST
Last Updated 21 ಜನವರಿ 2024, 10:09 IST
ಅಕ್ಷರ ಗಾತ್ರ

ಬಿಸ್ವನಾಥ್‌ ಚರಿಯಾಲಿ: ಕಾಂಗ್ರೆಸ್‌ ನಡೆಸುತ್ತಿರುವ ಭಾರತ್‌ ಜೋಡೊ ನ್ಯಾಯ ಯಾತ್ರೆಯಲ್ಲಿ ಅಸ್ಸಾಂ ಜನರು ಪಾಲ್ಗೊಳ್ಳದಂತೆ ಮಾಡಲು ಇಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ಬೆದರಿಕೆ ಹಾಕುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಭಾನುವಾರ ಆರೋಪಿಸಿದರು.

ಈ ಸರ್ಕಾರವು, ಕಾಂಗ್ರೆಸ್‌ ಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸುತ್ತಿದೆ ಎಂದು ಅವರು ಕಿಡಿಕಾರಿದರು. ಅಲ್ಲದೆ, ವಿವಿಧೆಡೆ ಕಾಂಗ್ರೆಸ್‌ನ ಧ್ವಜ ಮತ್ತು ಬ್ಯಾನರ್‌ಗಳನ್ನು ಹಾನಿ ಮಾಡಲಾಗುತ್ತಿದೆ ಎಂದು ದೂರಿದರು.

ಯಾತ್ರೆಯು ಅರುಣಾಚಲ ಪ್ರದೇಶದ ಗಡಿ ದಾಟಿ ಭಾನುವಾರ ಅಸ್ಸಾಂ ಪ್ರವೇಶಿಸಿತು. ಬಿಸ್ವನಾಥ್‌ ಜಿಲ್ಲೆಯ ಬಿಸ್ವನಾಥ್‌ ಚರಿಯಾಲಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ‘ಸರ್ಕಾರದ ಈ ಬೆದರಿಕೆಗೆಲ್ಲ ಜನರು ಹೆದರುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿ ವಿರುದ್ಧ ಭಾರಿ ಅಂತರದಲ್ಲಿ ಗೆಲ್ಲಲಿದೆ’ ಎಂದರು.

ಯಾತ್ರೆಯು ನಿತ್ಯ 7ರಿಂದ 8 ಗಂಟೆಗಳ ಕಾಲ ನಡೆಯುತ್ತಿದೆ. ಈ ಅವಧಿಯಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ, ಅದರ ಪರವಾಗಿ ಧ್ವನಿ ಎತ್ತಲಾಗುವುದು. ಅಲ್ಲದೆ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದು ಅವರು ಹೇಳಿದರು.

‘ಇದು ರಾಹುಲ್‌ ಗಾಂಧಿ ನಡೆಸುತ್ತಿರುವ ಯಾತ್ರೆಯಲ್ಲ. ಬದಲಿಗೆ ಜನರ ಧ್ವನಿಗಾಗಿ ನಡೆಯುತ್ತಿರುವ ಯಾತ್ರೆ ಎಂಬುದು’ ಇಲ್ಲಿನ ಸರ್ಕಾರಕ್ಕೆ ಇನ್ನೂ ಅರ್ಥವಾಗಿಲ್ಲ ಎಂದರು.

‘ನೀವು (ಸರ್ಕಾರ) ಏನು ಬೇಕಾದ್ದನ್ನು ಮಾಡಿ. ನಾನಾಗಲಿ, ಅಸ್ಸಾಂ ಜನರಾಗಲಿ ಹೆದರುವುದಿಲ್ಲ. ಚುನಾವಣೆ ಎದುರಾದಾಗ ಬಿಜೆಪಿಯನ್ನು ಕಾಂಗ್ರೆಸ್‌ ದೊಡ್ಡ ಅಂತರದಲ್ಲಿ ಸೋಲಿಸಲಿದೆ’ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮ ವಿರುದ್ಧ ವಾಗ್ದಾಳಿ ಮುಂದುವರಿಸಿದ ರಾಹುಲ್, ‘ಅವರು ದೇಶದ ಅತಿ ಭ್ರಷ್ಟ ಮುಖ್ಯಮಂತ್ರಿ’ ಎಂದು ಜರಿದರು.

ಮಾವನನ್ನು ಪತ್ತೆ ಹಚ್ಚಿಕೊಡಿ: ಮನವಿ

ಇಟಾನಗರ: ‘ನನ್ನ ಮಾವ 2015ರಿಂದ ನಾಪತ್ತೆಯಾಗಿದ್ದು ಚೀನಾದ ಪೀಪಲ್ಸ್ ಲಿಬರೇಷನ್‌ ಆರ್ಮಿಯಿಂದ ಅಪರಹರಣಕ್ಕೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅವರನ್ನು ಹುಡುಕಿಸಿಕೊಡಲು ನೆರವಾಗಿ’ ಎಂದು ಅಮೊನಿ ದಿರು ಪುಲ್ಲೋಮ್‌ ಎಂಬ ಮಹಿಳೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರಲ್ಲಿ ಮನವಿ ಮಾಡಿಕೊಂಡರು. ಭಾರತ್‌ ಜೋಡೊ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ರಾಹುಲ್‌ ಅವರು ಅರುಣಾಚಲದ ರಾಜಧಾನಿ ಇಟಾನಗರದ ಶಿಬಿರದಲ್ಲಿ ಶನಿವಾರ ರಾತ್ರಿ ತಂಗಿದ್ದರು. ಅಲ್ಲಿ ಅವರನ್ನು ಭಾನುವಾರ ಬೆಳಿಗ್ಗೆ ಭೇಟಿಯಾದ ಮಹಿಳೆ ತನ್ನ ಅಳಲು ತೋಡಿಕೊಂಡರು. ‘ನನ್ನ ಮಾವನವರು ವಕೀಲರಾಗಿದ್ದು 2015ರಲ್ಲಿ ಪೀಪಲ್ಸ್‌ ಲಿಬರೇಷನ್‌ ಆರ್ಮಿಯಿಂದ ಅಪಹರಣಕ್ಕೆ ಒಳಗಾಗಿದ್ದಾರೆ. ಆದಷ್ಟು ಬೇಗ ಅವರ ಪತ್ತೆಗೆ ನೆರವಾಗುವಂತೆ’ ಅವರು ಕೋರಿದರು. ಮಹಿಳೆಯ ಮನವಿಯನ್ನು ಆಲಿಸಿದ ರಾಹುಲ್‌ ಈ ವಿಷಯವನ್ನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪ್ರಸ್ತಾಪಿಸಿ ಚರ್ಚಿಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT