ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ವರ್ಷಗಳಿಂದ ಮರು ಆಯ್ಕೆಯಾದ 23 ಸಂಸದರ ಆಸ್ತಿ ಪ್ರಮಾಣ ಶೇ 1,045 ರಷ್ಟು ಏರಿಕೆ

Published 22 ಫೆಬ್ರುವರಿ 2024, 14:54 IST
Last Updated 22 ಫೆಬ್ರುವರಿ 2024, 14:54 IST
ಅಕ್ಷರ ಗಾತ್ರ

ನವದೆಹಲಿ: ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಮತ್ತು ಮೆನಕಾ ಗಾಂಧಿ ಸೇರಿದಂತೆ 2004ರಿಂದ ಲೋಕಸಭೆಗೆ ಆಯ್ಕೆಯಾದ 23 ಸಂಸದರ ಒಟ್ಟು ಆಸ್ತಿ ಪ್ರಮಾಣ ₹ 35.18 ಕೋಟಿಯಿಂದ ₹ 402.79 ಕೋಟಿಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಸರ್ಕಾರೇತರ ಸಂಸ್ಥೆ  'ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್‌' (ಎಡಿಆರ್‌) ಗುರುವಾರ ಬಿಡುಗಡೆ ಮಾಡಿರುವ ಈ ವರದಿ ಪ್ರಕಾರ, ಕರ್ನಾಟಕದ ಬಿಜೆಪಿ ಸಂಸದ ರಮೇಶ್‌ ಜಿಗಜಿಣಗಿ (ವಿಜಯಪುರ) ಅವರ ಆಸ್ತಿಯಲ್ಲಿ ಗರಿಷ್ಠ ಅಂದರೆ ಶೇ 9,098 ರಷ್ಟು ಏರಿಕೆಯಾಗಿದೆ. ಅವರೇ ಘೋಷಿಸಿರುವ ಮಾಹಿತಿ ಪ್ರಕಾರ, 2004ರಲ್ಲಿ ₹ 54.8 ಲಕ್ಷದಷ್ಟಿದ್ದ ಆಸ್ತಿ ಪ್ರಮಾಣ, 2019ರ ಹೊತ್ತಿಗೆ ₹ 50.41 ಕೋಟಿಗೆ ಹೆಚ್ಚಳಗೊಂಡಿದೆ.

ಕರ್ನಾಟಕದ ಐವರು ಸಂಸದರು 2004ರಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಬೇರಾವ ರಾಜ್ಯದಲ್ಲೂ ಇಷ್ಟು ಸಂಸದರು 2004ರಿಂದ ಮರು ಆಯ್ಕೆಯಾಗಿಲ್ಲ. ದಾವಣಗೆರೆಯ ಜಿ.ಎಂ.ಸಿದ್ದೇಶ್ವರ ಅವರ ಆಸ್ತಿ ಪ್ರಮಾಣ ₹ 5.02 ಕೋಟಿಯಿಂದ ₹ 38.01 ಕೋಟಿಗೆ (ಶೇ 656) ಏರಿಕೆಯಾಗಿದೆ. ಇದೇ ವೇಳೆ ಡಿ.ವಿ.ಸದಾನಂದ ಗೌಡ ಅವರ ಆಸ್ತಿ ₹ 46.39 ಲಕ್ಷದಿಂದ ₹ 20.93 ಕೋಟಿಗೆ (ಶೇ 4,413) ಅಧಿಕಗೊಂಡಿದೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ (ಧಾರವಾಡ) ಅವರ ಆಸ್ತಿ ₹ 77.60 ಲಕ್ಷದಿಂದ ₹ 11.13 ಕೋಟಿಗೆ (ಶೇ.1,335), ಅನಂತಕುಮಾರ್ ಹೆಗ್ಡೆ (ಉತ್ತರ ಕನ್ನಡ) ಅವರ ಆಸ್ತಿ ₹ 12.06 ಲಕ್ಷದಿಂದ ₹ 8.47 ಕೋಟಿಗೆ (ಶೇ 6,928) ಮತ್ತು ಪಿ.ಸಿ.ಗದ್ದಿಗೌಡರ (ಬಾಗಲಕೋಟೆ) ಅವರ ಆಸ್ತಿ ಮೊತ್ತ ₹ 53.75 ಲಕ್ಷದಿಂದ ₹ 4.39 ಕೋಟಿಗೆ (ಶೇ 718) ಏರಿದೆ.

2004ರಿಂದ ಮರು ಆಯ್ಕೆಯಾಗಿರುವ 23 ಸಂಸದರ ಪೈಕಿ 17 ಮಂದಿ ಬಿಜೆಪಿಯವರು. ಉಳಿದಂತೆ ಕಾಂಗ್ರೆಸ್‌ನ ಮೂವರು ಹಾಗೂ ಎಐಎಂಐಎಂ, ಶಿವಸೇನಾ ಮತ್ತು ಬಿಜೆಡಿಯ ತಲಾ ಒಬ್ಬರು ಇದ್ದಾರೆ. 2004ರಲ್ಲಿ ಈ ಸಂಸದರ ಸರಾಸರಿ ಆಸ್ತಿ ಮೊತ್ತ ₹ 1.52 ಕೋಟಿ ಇತ್ತು. ಅದು 2009ರ ವೇಳೆಗೆ ₹ 3.46 ಕೋಟಿ, 2014ರ ವೇಳೆಗೆ ₹ 9.85 ಕೋಟಿ ಮತ್ತು 2019ರ ವೇಳೆಗೆ ₹ 17.51 ಕೋಟಿಗೆ ಹೆಚ್ಚಾಗಿದೆ.

ಪ್ರತಿ ಚುನಾವಣೆ ಸಂದರ್ಭದಲ್ಲಿ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿರುವ ಮಾಹಿತಿ ಪ್ರಕಾರ, ಈ ಎಲ್ಲ ಸಂಸದರ ಒಟ್ಟು ಆಸ್ತಿ ಮೊತ್ತದಲ್ಲಿನ ಸರಾಸರಿ ಏರಿಕೆಯ ಪ್ರಮಾಣ ₹ 15.98 ಕೋಟಿ ಅಥವಾ ಶೇ 1,045 ರಷ್ಟಾಗಿದೆ.

ಜಿಗಜಿಣಗಿ ನಂತರದ ಸ್ಥಾನದಲ್ಲಿ ಮೆನಕಾ
ಆಸ್ತಿ ಗಳಿಕೆಯಲ್ಲಿ ಅಧಿಕ ಪ್ರಮಾಣದ ಏರಿಕೆ ಕಂಡಿರುವ ಸಂಸದರ ಪಟ್ಟಿಯಲ್ಲಿ ಕರ್ನಾಟಕದ ಜಿಗಜಿಣಗಿ ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶದ ಸುಲ್ತಾನ್‌ಪುರ ಸಂಸದೆ ಮೆನಕಾ ಗಾಂಧಿ ಇದ್ದಾರೆ. ಅವರ ಆಸ್ತಿ ಮೊತ್ತ ₹ 6.66 ಕೋಟಿಯಿಂದ ₹ 55.69 ಕೋಟಿಗೆ ಅಂದರೆ, ಶೇ 735 ರಷ್ಟು ಏರಿಕೆಯಾಗಿದೆ.

ಹರಿಯಾಣದ ಗುರುಗ್ರಾಮ ಸಂಸದ ರಾವ್‌ ಇಂದ್ರಜಿತ್‌ ಸಿಂಗ್‌ (ಬಿಜೆಪಿ) ಅವರ ಆಸ್ತಿ ಮೊತ್ತ ₹ 5.51 ಕೋಟಿಯಿಂದ ₹ 42.09 ಕೋಟಿಗೆ (ಶೇ 664) ಹೆಚ್ಚಾಗಿದೆ.

ಮೂವರಷ್ಟೇ ಮಹಿಳೆಯರು
ಸೋನಿಯಾ ಗಾಂಧಿ, ಮೆನಕಾ ಗಾಂಧಿ ಹಾಗೂ ಶಿವಸೇನಾ ಪಕ್ಷದ ಭಾವನಾ ಗಾವ್ಲಿ ಅವರಷ್ಟೇ ಮೇಲೆ ತಿಳಿಸಲಾದ ಸಂಸದರ ಪಟ್ಟಿಯಲ್ಲಿರುವ ಮಹಿಳೆಯರು. 23 ಸಂಸದರ ಪೈಕಿ 9 ಮಂದಿ ವಿರುದ್ಧ ಗಂಭೀರ ಅಪರಾಧ ಆರೋಪ ಪ್ರಕರಣಗಳಿವೆ ಎಂಬುದೂ ಪ್ರಮಾಣಪತ್ರಗಳಲ್ಲಿನ ಮಾಹಿತಿಯಿಂದ ತಿಳಿದುಬಂದಿದೆ.

ರಾಹುಲ್‌ ಆಸ್ತಿ ಗಳಿಕೆ ಶೇ 2,769 ರಷ್ಟು ಏರಿಕೆ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು 2004ರಲ್ಲಿ ₹ 55.38 ಕೋಟಿ ಆಸ್ತಿ ಘೋಷಣೆ ಮಾಡಿದ್ದರು. 2009ರಲ್ಲಿ ₹ 2.32 ಕೋಟಿ, 2014ರಲ್ಲಿ ₹ 9.4 ಕೋಟಿ ಮತ್ತು 2019ರಲ್ಲಿ 15.88 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಅದರಂತೆ, ಅವರ ಆಸ್ತಿಯಲ್ಲಿ ಶೇ 2,769 ರಷ್ಟು ಏರಿಕೆಯಾಗಿದೆ.

ಇದೇ ವೇಳೆ ಅವರ ತಾಯಿ ಹಾಗೂ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಸ್ತಿಯಲ್ಲಿ ಶೇ 1,280ರಷ್ಟು ಏರಿಕೆ ಕಂಡುಬಂದಿದೆ. ₹ 85.68 ಲಕ್ಷದಷ್ಟಿದ್ದ ಅವರ ಆಸ್ತಿ ₹ 11.82 ಕೋಟಿಗೆ ತಲುಪಿದೆ.

ಇವರಿಬ್ಬರಲ್ಲದೆ ಮತ್ತೊಬ್ಬ ಕಾಂಗ್ರೆಸ್‌ ಸಂಸದ ಅಧೀರ್ ರಂಜನ್‌ ಚೌಧರಿ ಅವರ ಆಸ್ತಿಯಲ್ಲಿ ಶೇ 422ರಷ್ಟು ಏರಿಕೆಯಾಗಿದೆ. ಅವರ ಆಸ್ತಿ ₹ 1.93 ಕೋಟಿಯಿಂದ ₹ 10.13 ಕೋಟಿಗೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT