ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳದಲ್ಲಿ ಇ.ಡಿ ತಂಡದ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Published 12 ಜನವರಿ 2024, 12:33 IST
Last Updated 12 ಜನವರಿ 2024, 12:33 IST
ಅಕ್ಷರ ಗಾತ್ರ

ಕೋಲ್ಕತ್ತ: ಕಳೆದ ವಾರ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲೀ ಎಂಬಲ್ಲಿರುವ ಟಿಎಂಸಿ ನಾಯಕ ಶೇಖ್‌ ಶಾಜಹಾನ್‌ ಅವರ ಮನೆಯಲ್ಲಿ ಶೋಧಕ್ಕೆ ಮುಂದಾಗಿದ್ದ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಮೆಹಬೂಬ್ ಮುಲ್ಲಾ ಮತ್ತು ಸುಕೋಮಲ್ ಸರ್ದಾರ್ ಎಂದು ಗುರುತಿಸಲಾಗಿದೆ.

ಹಲವು ವಿಡಿಯೊ ದೃಶ್ಯಾವಳಿಗಳನ್ನು ಆಧರಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಬಸಿರ್ಹತ್‌ ಎಸ್‌ಪಿ ಜೋಬಿ ಥಾಮಸ್ ಪಿಟಿಐಗೆ ತಿಳಿಸಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಮೂರು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಥಾಮಸ್ ವಿವರಿಸಿದ್ದಾರೆ.

ಏನಿದು ಘಟನೆ?:

ಪಡಿತರ ವಿತರಣೆಯಲ್ಲಿ ನಡೆದಿರುವ ಹಗರಣ ಸಂಬಂಧ ಇ.ಡಿ ಅಧಿಕಾರಿಗಳು ಜನವರಿ 5ರಂದು ಏಕಕಾಲದಲ್ಲಿ ಪಶ್ಚಿಮ ಬಂಗಾಳದ 15 ಕಡೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳ ತಂಡವೊಂದು ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲೀ ಎಂಬಲ್ಲಿರುವ ಟಿಎಂಸಿ ನಾಯಕ ಶೇಖ್‌ ಶಾಜಹಾನ್‌ ಅವರ ಮನೆಯಲ್ಲಿ ಶೋಧಕ್ಕೆ ಮುಂದಾಗಿದ್ದರು.

ಶಾಜಹಾನ್‌ ಅವರು ಇದೇ ಹಗರಣದಲ್ಲಿ ಬಂಧಿತರಾಗಿರುವ ಸಚಿವ ಜ್ಯೋತಿಪ್ರಿಯೊ ಮಲಿಕ್‌ ಅವರ ಆಪ್ತರಾಗಿದ್ದಾರೆ. ಹಗರಣದ ತನಿಖೆಯ ಭಾಗವಾಗಿ ಇ.ಡಿ ದಾಳಿ ನಡೆಸಿತ್ತು. ಇ.ಡಿ ಅಧಿಕಾರಿಗಳು ಶಾಜಹಾನ್‌ ಮನೆಗೆ ಬಂದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದರು.

‘ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಟಿಎಂಸಿ ಬೆಂಬಲಿಗರು ಮೊದಲು ಇ.ಡಿ ಅಧಿಕಾರಿಗಳು ಮತ್ತು ಅವರ ಭದ್ರತೆಗೆ ಬಂದಿದ್ದ ಸಿಆರ್‌ಪಿಎಫ್‌ ಸಿಬ್ಬಂದಿಗೆ ಘೇರಾವ್‌ ಹಾಕಿದ್ದರು. ಆ ಬಳಿಕ ಏಕಾಏಕಿ ಹಲ್ಲೆ ನಡೆಸಿದರು’ ಎಂದು ಅಧಿಕಾರಿಯೊಬ್ಬರು ಹೇಳಿದ್ದರು.

‘ದಾಳಿಕೋರರು ವಾಹನಗಳನ್ನೂ ಜಖಂಗೊಳಿಸಿದರು. ಇದರಿಂದ ಅಧಿಕಾರಿಗಳು ತಮ್ಮ ವಾಹನಗಳನ್ನು ಅಲ್ಲೇ ಬಿಟ್ಟು, ಆಟೊ ರಿಕ್ಷಾ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಂದೇಶ್‌ಖಾಲೀ ಪ್ರದೇಶದಿಂದ ಹೊರಗೆ ಸುರಕ್ಷಿತ ತಾಣಕ್ಕೆ ತೆರಳಬೇಕಾಯಿತು’ ಎಂದು ಘಟನೆಯನ್ನು ವಿವರಿಸಿದ್ದರು. ‘ಹಿಂದೆಂದೂ ಈ ರೀತಿಯ ದಾಳಿ ನಡೆದ ಉದಾಹರಣೆಗಳಿಲ್ಲ. ದಾಳಿಯಿಂದ ತಪ್ಪಿಸಿಕೊಳ್ಳಲು ನಮ್ಮ ಅಧಿಕಾರಿಗಳು ಸ್ಥಳದಿಂದ ಓಡಿಹೋಗಬೇಕಾಯಿತು’ ಎಂದಿದ್ದರು.

ಇ.ಡಿ ದಾಳಿಯ ವರದಿ ಮಾಡಲು ಸ್ಥಳಕ್ಕೆ ಬಂದಿದ್ದ ಪತ್ರಕರ್ತರ ಮೇಲೂ ಹಲ್ಲೆ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 10ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT