ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಧನದ ಬಗ್ಗೆ ಹೇಳಿಕೆ: ಎಸ್‌ಪಿ ಸಂಸದ ನದ್ವಿಗೆ ತಿರುಗೇಟು ನೀಡಿದ ಆಜಂ ಖಾನ್ ಪತ್ನಿ

Published 7 ಜೂನ್ 2024, 3:32 IST
Last Updated 7 ಜೂನ್ 2024, 3:32 IST
ಅಕ್ಷರ ಗಾತ್ರ

ಲಖನೌ: ರಾಮಪುರ ಲೋಕಸಭಾ ಕ್ಷೇತ್ರದ ನೂತನ ಸಂಸದ ಮೊಹಿಬುಲ್ಲಾ ನದ್ವಿ ಅವರಿಗೆ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಹಾಗೂ ಜೈಲಿನಲ್ಲಿರುವ ಆಜಂ ಖಾನ್ ಪತ್ನಿ ತಜೀನ್‌ ಫಾತಿಮಾ ತಿರುಗೇಟು ನೀಡಿದ್ದಾರೆ.

ರಾಮಪುರ ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನದ್ವಿ, 'ದೋಷ ತಿದ್ದಿಕೊಳ್ಳುವುದಕ್ಕಾಗಿ ತಪ್ಪು ಮಾಡಿದವರನ್ನು ಜೈಲಿಗೆ ಹಾಕಲಾಗುತ್ತದೆ. ಜೈಲು, ಸುಧಾರಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ನಾನು ಆಜಂ ಖಾನ್‌ ಅವರಿಗಾಗಿ ಪ್ರಾರ್ಥಿಸುತ್ತೇನೆ' ಎಂದು ಚುನಾವಣಾ ಫಲಿತಾಂಶದ ದಿನ (ಮಂಗಳವಾರ) ಹೇಳಿದ್ದರು. ನದ್ವಿ ಅವರು ತಮ್ಮ ಸಮೀಪದ ಸ್ಪರ್ಧಿ ಬಿಜೆಪಿಯ ಘನಶ್ಯಾಮ್‌ ಸಿಂಗ್ ಲೋಧಿ ಎದುರು 87,434  ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಸಂಸದರ ಹೇಳಿಕೆಗೆ ಗುರುವಾರ ಪ್ರತಿಕ್ರಿಯಿಸಿರುವ ಫಾತಿಮಾ, 'ಅವರು ಇಂತಹ ಹೇಳಿಕೆಗಳನ್ನು ನೀಡಬಾರದಿತ್ತು. ಜೈಲಿನ ಬಗ್ಗೆ ಅವರಿಗೆ ಸಾಕಷ್ಟು ಅನುಭವವಿದ್ದಂತೆ ಕಾಣುತ್ತಿದೆ' ಎಂದು ತಿರುಗೇಟು ನೀಡಿದ್ದಾರೆ.

ಹಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಆಜಂ ಖಾನ್‌, ಸದ್ಯ ಸೀತಾಪುರ ಜೈಲಿನಲ್ಲಿದ್ದಾರೆ. ರಾಮಪುರ ವಿಧಾನಸಭಾ ಕ್ಷೇತ್ರದಿಂದ ಹತ್ತು ಬಾರಿ ಗೆದ್ದಿದ್ದ ಆಜಂ ಖಾನ್‌ ಎಸ್‌ಪಿಯ ಪ್ರಭಾವಿ ನಾಯಕ ಎನಿಸಿದ್ದರು. ಆದರೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅವರ ಆಪ್ತ ಅಸಿಮ್‌ ರಾಜಾ ಬದಲು, ದೆಹಲಿ ಮೂಲದ ಧರ್ಮಗುರು ನದ್ವಿಗೆ ಎಸ್‌ಪಿ ಟಿಕೆಟ್‌ ನೀಡಿತ್ತು.

ಜನನ ಪ್ರಮಾಣಪತ್ರ ನಕಲು ಪ್ರಕರಣದಲ್ಲಿ ಫಾತಿಮಾ ಅವರೂ ಜೈಲು ಸೇರಿದ್ದರು. ಕಳೆದ ತಿಂಗಳಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದಾರೆ.

ಮೊರಾದ್‌ಬಾದ್‌ ಸಂಸದರಾಗಿ ಚುನಾಯಿತರಾಗಿರುವ ರುಚಿ ವಿರಾ ಅವರೂ ನದ್ವಿ ಹೇಳಿಕೆಯನ್ನು ಖಂಡಿಸಿದ್ದಾರೆ. ಅವರು, ಆಜಂ ಖಾನ್‌ ಮನೆಗೆ ಬುಧವಾರ ಭೇಟಿ ನೀಡಿ ಫಾತಿಮಾ ಅವರನ್ನು ಭೇಟಿಯಾಗಿದ್ದಾರೆ.

ಬಳಿಕ ಮಾತನಾಡಿದ ರುಚಿ, 'ಆಜಂ ಖಾನ್ ತಮ್ಮ ಬೆವರು ಮತ್ತು ನೆತ್ತರನ್ನು ಸಮಾಜವಾದಿ ಪಕ್ಷಕ್ಕಾಗಿ ಹರಿಸಿದ್ದಾರೆ ಎಂಬುದನ್ನು ನದ್ವಿ ಅರ್ಥ ಮಾಡಿಕೊಳ್ಳಬೇಕು' ಎಂದು ಗುಡುಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT