ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಪರೀಕ್ಷೆ ರದ್ದು: ಯುವ ಶಕ್ತಿಗೆ ಜಯ ಎಂದ ರಾಹುಲ್

Published 24 ಫೆಬ್ರುವರಿ 2024, 13:15 IST
Last Updated 24 ಫೆಬ್ರುವರಿ 2024, 13:15 IST
ಅಕ್ಷರ ಗಾತ್ರ

ನವದೆಹಲಿ: ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯನ್ನು ಉತ್ತರ ಪ್ರದೇಶ ಸರ್ಕಾರ ರದ್ದುಗೊಳಿಸಿರುವುದು, ಯುವಕರ ಒಗ್ಗಟ್ಟು ಮತ್ತು ವಿದ್ಯಾರ್ಥಿ ಶಕ್ತಿಗೆ ದೊರೆತ ಬಹುದೊಡ್ಡ ಗೆಲುವು ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪರೀಕ್ಷೆ ರದ್ದುಪಡಿಸಿರುವ ಸರ್ಕಾರ, ಆರು ತಿಂಗಳೊಳಗೆ ಮರುಪರೀಕ್ಷೆ ನಡೆಸುವಂತೆ ಆದೇಶಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌/ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ರಾಹುಲ್‌, 'ಉತ್ತರ ಪ್ರದೇಶ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ವಿದ್ಯಾರ್ಥಿ ಶಕ್ತಿ ಹಾಗೂ ಯುವಕರ ಒಗ್ಗಟ್ಟಿಗೆ ದೊರೆತ ಬಹುದೊಡ್ಡ ಜಯ ಇದಾಗಿದೆ. ಸತ್ಯವನ್ನು ಹತ್ತಿಕ್ಕಲು ಸರ್ಕಾರ ಎಷ್ಟೇ ಪ್ರಯತ್ನ ಮಾಡಿದರೂ, ಒಗ್ಗಟ್ಟಾಗಿ ಹೋರಾಡುವ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದು ಎಂಬುದು ಇದರಿಂದ ಸ್ಪಷ್ಟವಾಗಿದೆ' ಎಂದು ಬರೆದುಕೊಂಡಿದ್ದಾರೆ.

ತಮ್ಮ ಟ್ವೀಟ್‌ನೊಂದಿಗೆ #YuvaNYAY ಹಾಗೂ #UPP_REEXAM ಟ್ಯಾಗ್‌ಗಳನ್ನು ಬಳಸಿರುವ ರಾಹುಲ್‌, 'ಎಲ್ಲರನ್ನು ಒಂದುಗೂಡಿಸುವವರು ಗೆಲ್ಲುತ್ತಾರೆ. ವಿಭಜಿಸುವವರು ತತ್ತರಿಸಿಹೋಗಲಿದ್ದಾರೆ' ಎಂದೂ ಹೇಳಿದ್ದಾರೆ.

ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, 'ಸರ್ಕಾರ ಯುವಕರೆದುರು ತಲೆಬಾಗಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಸರ್ಕಾರದಲ್ಲಿರುವ ವ್ಯಕ್ತಿಗಳು ಪ್ರಶ್ನೆಪತ್ರಿಕೆ ಸೋರಿಕೆ ಆರೋಪವನ್ನು ಅಲ್ಲಗಳೆಯುವಂತಹ ಹೇಳಿಕೆಗಳನ್ನು ನಿನ್ನೆವರೆಗೂ ನೀಡಿದ್ದರು. ಯುವ ಶಕ್ತಿಯ ಮುಂದೆ ಅವರ ಸುಳ್ಳುಗಳು ನಿಲ್ಲಲು ಸಾಧ್ಯವಾಗದ ಕಾರಣ ಇಂದು ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.

'ಉತ್ತರ ಪ್ರದೇಶದಲ್ಲಿ ನಡೆಯುವ ಪ್ರತಿಯೊಂದು ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿರುವುದು ಬಿಜೆಪಿ ಸರ್ಕಾರದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರಕ್ಕೆ ಸಾಕ್ಷಿಯಷ್ಟೇ ಅಲ್ಲ. ಅದಕ್ಕಿಂತಲೂ ಮಿಗಿಲಾಗಿ ಸರ್ಕಾರದ ಬೇಜವಾಬ್ದಾರಿ ಮತ್ತು ಜನರ ದಿಕ್ಕುತಪ್ಪಿಸುವ ನಡವಳಿಕೆಯು ಅತ್ಯಂತ ಗಂಭೀರ ವಿಚಾರವಾಗಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

'ಸರ್ಕಾರ ಹೊಸ ದಿನಾಂಕ ಘೋಷಿಸಬೇಕು ಮತ್ತು ಮತ್ತೊಮ್ಮೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ನೋಡಿಕೊಳ್ಳಬೇಕು' ಎಂದೂ ಒತ್ತಾಯಿಸಿದ್ದಾರೆ.

ಫೆಬ್ರುವರಿ 17 ಹಾಗೂ 18ರಂದು ನಡೆದ ಪರೀಕ್ಷೆಗೆ 43 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ಸರ್ಕಾರವು, ಪರೀಕ್ಷೆ ರದ್ದುಗೊಳಿಸಿರುವುದಷ್ಟೇ ಅಲ್ಲದೆ, ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಮೂಲಕ ಪ್ರಕರಣದ ತನಿಖೆಗೆ ಆದೇಶಿಸಿದೆ.

ಅರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಈವರೆಗೆ 240ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT