ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಡಿಶಾದಲ್ಲಿ 24 ವರ್ಷಗಳ ಬಳಿಕ ಬಿಜೆಡಿ ಸರ್ಕಾರ ಪತನ: ಆತ್ಮಾವಲೋಕನ ಸಮಿತಿ ರಚನೆ

Published 6 ಜೂನ್ 2024, 5:13 IST
Last Updated 6 ಜೂನ್ 2024, 5:13 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಎದುರಾದ ಸೋಲಿನ ಕಾರಣಗಳ ಪರಾಮರ್ಶೆ ನಡೆಸಲು ಬಿಜು ಜನತಾದಳ (ಬಿಜೆಡಿ) ಪಕ್ಷವು ಸಮಿತಿ ರಚಿಸಿದೆ.

147 ಸದಸ್ಯ ಬಲದ ಒಡಿಶಾ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ಸರಳ ಬಹುಮತ ಗಳಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದರೊಂದಿಗೆ ನಿರಂತರ 24 ವರ್ಷಗಳಿಂದ ಅಧಿಕಾರಲ್ಲಿದ್ದ ಬಿಜೆಡಿ ಸರ್ಕಾರ ಪತನಗೊಂಡಿದೆ.

ಪಕ್ಷದ ಅಧ್ಯಕ್ಷ ನವೀನ್‌ ಪಟ್ನಾಯಕ್‌ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಸಮಿತಿ ರಚನೆ ತೀರ್ಮಾನ ಕೈಗೊಳ್ಳಲಾಗಿದೆ. ಸೋಲಿನ ಕಾರಣಗಳ ಕುರಿತು ಸಮಿತಿಯು ಅಧ್ಯಕ್ಷರಿಗೆ ವರದಿ ನೀಡಲಿದೆ ಎಂದು ಕೇಂದ್ರಪರ ಕ್ಷೇತ್ರದ ಬಿಜೆಡಿ ಶಾಸಕ ಗಣೇಶ್ವರ್‌ ಬೆಹೆರಾ ತಿಳಿಸಿದ್ದಾರೆ.

ಸತತ ಐದು ಅವಧಿಗೆ ಮುಖ್ಯಮಂತ್ರಿಯಾಗಿದ್ದ ನವೀನ್‌ ಪಟ್ನಾಯಕ್ ಅವರು, ವಿಧಾನಸಭೆ ಸೋಲಿನ ಬೆನ್ನಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 78 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಡಿ ಕೇವಲ 51 ಕಡೆ ಜಯ ಸಾಧಿಸಿದೆ. ಕಾಂಗ್ರೆಸ್‌ 14, ಸಿಪಿಐ (ಎಂ) 1 ಹಾಗೂ ಪಕ್ಷೇತರ ಅಭ್ಯರ್ಥಿಗಳು 3 ಸ್ಥಾನ ಗೆದ್ದಿದ್ದಾರೆ.

ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಪ್ರಾಬಲ್ಯ

ಒಡಿಶಾದಲ್ಲಿ ಒಟ್ಟು 22 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ 21ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಉಳಿದ ಒಂದು ಕ್ಷೇತ್ರ ಕಾಂಗ್ರೆಸ್ ಪಾಲಾಗಿವೆ.

2019ರಲ್ಲಿ 12 ಸ್ಥಾನ ಹೊಂದಿದ್ದ ಬಿಜೆಡಿಯದ್ದು ಈ ಬಾರಿ ಶೂನ್ಯ ಸಾಧನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT