ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಸೋಲು: CM ಸ್ಥಾನಕ್ಕೆ ನವೀನ್ ಪಟ್ನಾಯಕ್ ರಾಜೀನಾಮೆ

Published 5 ಜೂನ್ 2024, 7:09 IST
Last Updated 5 ಜೂನ್ 2024, 7:09 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಬಿಜು ಜನತಾದಳ (ಬಿಜೆಡಿ) ನಾಯಕ ನವೀನ್ ಪಟ್ನಾಯಕ್ ಅವರು ಇಂದು (ಬುಧವಾರ) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ನವೀನ್ ಪಟ್ನಾಯಕ್ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲ ರಘುಬರ್ ದಾಸ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ 24 ವರ್ಷಗಳ ಪಟ್ನಾಯಕ್ ಅವರ ಸುದೀರ್ಘ ಆಳ್ವಿಕೆ ಕೊನೆಗೊಂಡಿದೆ.

ಒಡಿಶಾದಲ್ಲಿ ಆಡಳಿತವಿರೋಧಿ ಅಲೆಗೆ ಸಿಕ್ಕ ಆಡಳಿತರೂಢ ಬಿಜೆಡಿ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಸರಳ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

147 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ 80 ಸ್ಥಾನ ಗೆದ್ದುಕೊಂಡಿದ್ದು, ಸರಳ ಬಹುಮತ ಪಡೆದಿದೆ. ಅಧಿಕಾರ ಕಳೆದುಕೊಂಡರೂ ಬಿಜೆಡಿ 49 ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಗೌರವವನ್ನು ಉಳಿಸಿಕೊಂಡಿದೆ. ಆದರೆ, ಬಿಜೆಡಿ ಸರ್ಕಾರದ ಕನಿಷ್ಠ ಎಂಟು ಸಚಿವರು ಆಡಳಿತ ವಿರೋಧಿ ಅಲೆಗೆ ಸಿಕ್ಕು ಪರಾಭವಗೊಂಡಿದ್ದಾರೆ.

ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರೇ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದರು. ಈ ಪೈಕಿ ಬೊಲಾಂಗೀರ್‌ ಜಿಲ್ಲೆಯ ಕಾಂತಾಬಂಜಿ ಕ್ಷೇತ್ರದಲ್ಲಿ ಬಿಜೆಪಿಯ ಲಕ್ಷ್ಮಣ್‌ ಬಾಗ್ ಅವರ ವಿರುದ್ಧ ಸೋತಿದ್ದಾರೆ. ಆದರೆ, ಕಣಕ್ಕಿಳಿದಿದ್ದ ಮತ್ತೊಂದು ಕ್ಷೇತ್ರ ಗಂಜಾಂ ಜಿಲ್ಲೆಯ ಹಿಂಜಿಲಿಯಲ್ಲಿ ಬಿಜೆಪಿ ಅಭ್ಯರ್ಥಿ ಸಿಸಿರ್ ಕುಮಾರ್ ಮಿಶ್ರಾ ವಿರುದ್ಧ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನವೀನ್‌ ಪಟ್ನಾಯಕ್‌ ಸಚಿವ ಸಂಪುಟದ ಹಲವು ಸಚಿವರು, ಬಿಜೆಡಿಯ ಹಲವು ಹಿರಿಯ ಮುಖಂಡರು ಗೆಲುವಿನ ದಡ ಮುಟ್ಟುವಲ್ಲಿ ವಿಫಲರಾಗಿದ್ದಾರೆ. ಉಳಿದಂತೆ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿ ಗೆದ್ದುಕೊಂಡಿದ್ದು, ತನ್ನ ಬಲ ವೃದ್ಧಿಸಿಕೊಂಡಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು 9 ಸ್ಥಾನವನ್ನು ಗೆದ್ದುಕೊಂಡಿತ್ತು. ಸಿಪಿಎಂ ‍ಪಕ್ಷವು 1 ಕ್ಷೇತ್ರದಲ್ಲಿ ಗೆದ್ದಿದ್ದರೆ, ಮೂರು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಯಶಸ್ಸು ಕಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT