ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿಶ್ವಾಸ ನಿರ್ಣಯ: ಲೋಕಸಭೆಯಲ್ಲಿ ಕಾಂಗ್ರೆಸ್‌–ಬಿಜೆಪಿ ವಾಗ್ಯುದ್ಧ

ಅವಿಶ್ವಾಸ: ಚರ್ಚೆ ಆರಂಭಿಸದ ರಾಹುಲ್– ಕೆಣಕಿದ ಜೋಶಿ
Published 8 ಆಗಸ್ಟ್ 2023, 15:32 IST
Last Updated 8 ಆಗಸ್ಟ್ 2023, 15:32 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆ ವೇಳೆ ರಾಹುಲ್‌ ಗಾಂಧಿ ಅವರು ಮೊದಲು ಮಾತು ಆರಂಭಿಸದ ಕುರಿತು ಸಚಿವ ಪ್ರಲ್ಹಾದ ಜೋಶಿ ಅವರು ಕಾಂಗ್ರೆಸ್‌ ಪಕ್ಷವನ್ನು ಮಂಗಳವಾರ ಕೆಣಕಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಗ್ಯುದ್ಧಕ್ಕೆ ಕಾರಣವಾಯಿತು.

ಕಾಂಗ್ರೆಸ್‌ ಸಂಸದ ಗೌರವ್‌ ಗೊಗೋಯಿ ಅವರು ಅವಿಶ್ವಾಸ ನಿರ್ಣಯ ಕುರಿತು ಚರ್ಚೆ ಆರಂಭಿಸಲು ಎದ್ದು ನಿಂತರು.

ಆಗ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಜೋಶಿ, ‘ಐದು ನಿಮಿಷಗಳಲ್ಲಿ ಏನಾಯಿತು ಸರ್? ಸಮಸ್ಯೆ ಏನು? ರಾಹುಲ್‌ ಗಾಂಧಿ ಅವರ ಮಾತುಗಳನ್ನು ಕೇಳಲು ನಾವು ಉತ್ಸುಕರಾಗಿದ್ದೇವೆ’ ಎಂದು ಗೊಗೋಯಿ ಅವರ ಕಾಲೆಳೆದರು.

‘ಗೊಗೋಯಿ ಬದಲಾಗಿ ರಾಹುಲ್‌ ಗಾಂಧಿ ಅವರೇ ಚರ್ಚೆಯನ್ನು ಆರಂಭಿಸುವರು ಎಂಬುದಾಗಿ ಸ್ಪೀಕರ್‌ ಕಚೇರಿಗೆ ಮಾಹಿತಿ ನೀಡಲಾಗಿತ್ತು. ಹೀಗಾಗಿ ಈ ಪ್ರಶ್ನೆ ಮುಂದಿಡುತ್ತಿದ್ದೇನೆ’ ಎಂದೂ ಜೋಶಿ ಹೇಳಿದರು. ಈ ಮಾತಿಗೆ ಕಾಂಗ್ರೆಸ್‌ ಸಂಸದರು ಆಕ್ಷೇಪಿಸಿದರು.

‘ಸ್ಪೀಕರ್‌ ಅವರೆ, ನಿಮ್ಮ ಕಚೇರಿಯಲ್ಲಿ ಏನು ನಡೆಯುತ್ತದೆ ಹಾಗೂ ಯಾವ ರೀತಿಯ ಮನವಿಗಳನ್ನು ಸ್ವೀಕರಿಸಲಾಗುತ್ತದೆ ಎಂಬುದನ್ನು ನಾವು ಬಹಿರಂಗಪಡಿಸಬೇಕೆ’ ಎಂದ ಗೊಗೋಯಿ, ‘ನಿಮ್ಮ ಕಚೇರಿಯಲ್ಲಿ ಪ್ರಧಾನಿ ಏನು ಹೇಳಿದರು ಎಂಬುದನ್ನೂ ಹೇಳಬೇಕೆ?’ ಎಂದರು.

ಆಗ, ಗೊಗೋಯಿ ಅವರ ಮಾತಿಗೆ ತಡೆ ಹಾಕಿದ ಗೃಹ ಸಚಿವ ಅಮಿತ್‌ ಶಾ, ‘ಖಚಿತವಲ್ಲದ ಹೇಳಿಕೆಗಳನ್ನು ನೀಡಬಾರದು’ ಎಂದರು.

ಸ್ಪೀಕರ್‌ ಓಂ ಬಿರ್ಲಾ ಮಾತನಾಡಿ, ‘ನನ್ನ ಕಚೇರಿ ಕೂಡ ಸದನದ ಭಾಗವೇ ಆಗಿದೆ. ಹೀಗಾಗಿ, ನೀವು ಆಧಾರವಿಲ್ಲದ ಹೇಳಿಕೆಗಳನ್ನು ನೀಡಬಾರದು’ ಎಂದು ಗೊಗೋಯಿ ಅವರಿಗೆ ಸೂಚಿಸಿದರು. ನಂತರ, ಗೊಗೋಯಿ ಅವಿಶ್ವಾಸ ನಿರ್ಣಯ ಮಂಡಿಸಿ, ಮಾತು ಮುಂದುವರಿಸಿದರು.

ಬುಧವಾರದ ಕಲಾಪದಲ್ಲಿಯೂ ಒಂದು ವೇಳೆ ರಾಹುಲ್‌ ಗಾಂಧಿ ಮಾತನಾಡದಿದ್ದಲ್ಲಿ, ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಕೊನೆಯ ದಿನವಾದ ಗುರುವಾರ ರಾಹುಲ್‌ ಹಾಗೂ ಪ್ರಧಾನಿ ಮೋದಿ ಮುಖಾಮುಖಿಯಾಗಲಿದ್ದಾರೆ. 2018ರ ಜುಲೈ 20ರಂದು ಅವಿಶ್ವಾಸ ನಿರ್ಣಯ ಕುರಿತ ಚರ್ಚೆ ಸಂದರ್ಭದಲ್ಲಿ, ಮೋದಿ ಅವರು ಉತ್ತರ ನೀಡುವುದಕ್ಕೂ ಮುನ್ನವೇ ರಾಹುಲ್‌ ಗಾಂಧಿ ಮಾತನಾಡಿದ್ದರು. 

ರಾಹುಲ್‌ ಅವರು ಬುಧವಾರ ಪಕ್ಷದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ‘ಅವಿಶ್ವಾಸ ನಿರ್ಣಯ ಕುರಿತು ರಾಹುಲ್‌ ಗಾಂಧಿ ಮಾತನಾಡುವ ಬಗ್ಗೆ ಪಕ್ಷದ ನಿರ್ಧರಿಸಿದಲ್ಲಿ, ಅವರು ದೆಹಲಿಗೆ ಕೂಡಲೇ ವಾಪಸಾಗುವರು’ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT