ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಶಿ, ಮಥುರಾ ಮಸೀದಿ ಕೆಡವಬೇಕಿದೆ’

Last Updated 30 ಸೆಪ್ಟೆಂಬರ್ 2020, 20:38 IST
ಅಕ್ಷರ ಗಾತ್ರ

ಲಖನೌ: ‘ರಾಮ ಜನ್ಮಭೂಮಿಯನ್ನು ಮುಕ್ತಗೊಳಿಸುವ ಕೆಲಸ ಮುಗಿದಿದೆ. ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಮತ್ತು ಕಾಶಿಯ ವಿಶ್ವನಾಥ ದೇವಾಲಯವನ್ನು ಮುಕ್ತಗೊಳಿಸುವ ಕೆಲಸ ಬಾಕಿ ಇದೆ. ಈ ಕೆಲಸಗಳು ಶೀಘ್ರವೇ ಆಗಲಿದೆ’ ಎಂದು ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳಾಗಿದ್ದವರಲ್ಲಿ ಹಲವರು ಹೇಳಿದರು.

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಖುಲಾಸೆಯಾದ ನಂತರ ಇಲ್ಲಿನ ಸಿಬಿಐ ನ್ಯಾಯಾಲಯದ ಹೊರಗೆ ಅವರು ಮಾಧ್ಯಮಪ್ರತಿನಿಧಿಗಳ ಜತೆ ಮಾತನಾಡಿದರು.

‘ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡಂತೆ ಮಸೀದಿ ಇದೆ. ಮಥುರಾದ ಶ್ರೀಕೃಷ್ಣ ಜನ್ಮಸ್ಥಾನದಲ್ಲಿ ಮಸೀದಿ ಇದೆ. ಶ್ರೀಮಂತವಾದ ಹಿಂದೂ ಸಂಸ್ಕೃತಿಗೆ ಇವೆರಡು ದೊಡ್ಡ ಕಳಂಕಗಳಾಗಿವೆ. ಬಾಬರಿ ಮಸೀದಿ ಕೇವಲ ಟ್ರೇಲರ್. ಕಾಶಿ ಮತ್ತು ಮಥುರಾ ಇನ್ನೂ ಬಾಕಿ ಇವೆ. ಇಂತಹ ಕಳಂಕಗಳು ಎಲ್ಲೇ ಇದ್ದರೂ ಅವನ್ನು ನಾವು ಬಿಡುವುದಿಲ್ಲ’ ಎಂದು ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿದ್ದ ಆಚಾರ್ಯ ಧರ್ಮೇಂದ್ರ ಘೋಷಿಸಿದ್ದಾರೆ.

‘ಈ ಕೆಲಸ ಮುಗಿದಿದೆ. ಇನ್ನು ಕಾಶಿ ಮತ್ತು ಮಥುರಾಗಳತ್ತ ಗಮನ ಹರಿಸುತ್ತೇವೆ’ ಎಂದು ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿದ್ದ ಸಂತೋಷ್ ದುಬೆ ಹೇಳಿದ್ದಾರೆ.‘ಕಾಶಿ ಮತ್ತು ಮಥುರಾದಲ್ಲಿನ ಮಸೀದಿಯನ್ನು ಕೆಡವಲು ಚಳವಳಿ ರೂಪಿಸುತ್ತೇವೆ’ ಎಂದು ಮತ್ತೊಬ್ಬರು ಘೋಷಿಸಿದ್ದಾರೆ.

ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡಂತೆ ಜ್ಞಾನವಾಪಿ ಮಸೀದಿ ಇದೆ. ಮಸೀದಿಯನ್ನು ಕೆಡವಲು ಅವಕಾಶ ನೀಡುವಂತೆ ವಾರಾಣಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಅರ್ಜಿಯ ವಿಚಾರಣೆ ಆರಂಭವಾಗಲಿದೆ.

ಮಥುರಾದಲ್ಲಿ ಶ್ರೀ ಕೃಷ್ಣ ಜನ್ಮಭೂಮಿಗೆ ಹೊಂದಿಕೊಂಡಂತೆ ಶಾಹಿ ಇಗ್ದಾದ್ ಮಸೀದಿ ಇದೆ. ಶ್ರೀ ಕೃಷ್ಣ ಜನ್ಮಸ್ಥಳದಲ್ಲೇ ಮಸೀದಿ ನಿರ್ಮಿಸಲಾಗಿದೆ, ಮಸೀದಿಯನ್ನು ತೆರವು ಮಾಡಬೇಕು ಎಂದು ಅರ್ಜಿ ಸಲ್ಲಿಕೆಯಾಗಿದೆ. ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ ನಡೆಯುತ್ತಿದೆ.

ನಿವೃತ್ತಿಯ ದಿನ ತೀರ್ಪು

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಾಧೀಶ ಎಸ್‌.ಕೆ.ಯಾದವ್ ಅವರದ್ದು ಬುಧವಾರ ನಿವೃತ್ತಿಯ ದಿನ. ಯಾದವ್ ಅವರು 2019ರ ಸೆಪ್ಟೆಂಬರ್ 30ರಂದು ನಿವೃತ್ತರಾಗಬೇಕಿತ್ತು. ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸಿ, ತೀರ್ಪು ನೀಡುವ ಉದ್ದೇಶದಿಂದ ಯಾದವ್ ಅವರ ನಿವೃತ್ತಿಯನ್ನು ಸುಪ್ರೀಂ ಕೋರ್ಟ್‌ ಒಂದು ವರ್ಷ ಮುಂದೂಡಿತ್ತು.

ಯಾದವ್ ಅವರು 1990ರಲ್ಲಿ ಫೈಜಾಬಾದ್‌ನ (ಈಗ ಅಯೋಧ್ಯೆ ಜಿಲ್ಲೆ) ಹೆಚ್ಚುವರಿ ಮುನ್ಸಿಫ್ ಆಗಿ ಸೇವೆ ಆರಂಭಿಸಿದ್ದರು. 2005ರಿಂದ 2009ರವರೆಗೆ ಅವರು ಫೈಜಾಬಾದ್‌ನ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. 2015ರಿಂದ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. 2017ರಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದ ನಂತರ ಪ್ರತಿದಿನ ವಿಚಾರಣೆ ನಡೆಸುತ್ತಿದ್ದರು. ಇದೇ ಸೆಪ್ಟೆಂಬರ್ 1ಕ್ಕೆ ವಿಚಾರಣೆ ಪೂರ್ಣಗೊಂಡಿತ್ತು. ಯಾದವ್ ಅವರು ತೀರ್ಪನ್ನು ಕಾಯ್ದಿರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT