ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಬ್‌ ಬೆದರಿಕೆ: ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ

Published 22 ಆಗಸ್ಟ್ 2024, 15:33 IST
Last Updated 22 ಆಗಸ್ಟ್ 2024, 15:33 IST
ಅಕ್ಷರ ಗಾತ್ರ

ತಿರುವನಂತಪುರ: ಮುಂಬೈನಿಂದ ಬಂದ, 135 ಮಂದಿ ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಬೆದರಿಕೆ ಸಂದೇಶ ಕಂಡುಬಂದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ತಿರುವನಂತಪುರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿತ್ತು. ತುರ್ತು ಪರಿಸ್ಥಿತಿಯ ಸಂದೇಶ ಹಿಂಪಡೆಯುವ ಮೊದಲು, ಬಾಂಬ್‌ ಬೆದರಿಕೆಗೆ ಗುರಿಯಾಗಿದ್ದ ವಿಮಾನವನ್ನು ವ್ಯಾಪಕ ಭದ್ರತಾ ತಪಾಸಣೆಗೆ ಒಳಪಡಿಸಲಾಯಿತು.

ತುರ್ತು ಪರಿಸ್ಥಿತಿಯನ್ನು ಮಧ್ಯಾಹ್ನ 12.10ರ ಸುಮಾರಿಗೆ ಹಿಂತೆಗೆದುಕೊಳ್ಳಲಾಯಿತು. ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಪ್ರಸ್ತುತ ಸಹಜ ಸ್ಥಿತಿಗೆ ಮರಳಿವೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಆದರೆ, ಇದೊಂದು ಹುಸಿ ಬಾಂಬ್‌ ಬೆದರಿಕೆಯೇ ಎನ್ನುವುದನ್ನು ಖಚಿತಪಡಿಸಲು ಮೂಲಗಳು ನಿರಾಕರಿಸಿದವು.

ಘಟನೆಯ ಕುರಿತು ತನಿಖೆ ನಡೆಸಲು ವಲಿಯತ್ತುರಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ದೌಡಾಯಿಸಿದ್ದರು.

‘ವಿಮಾನದ ವಾಶ್‌ರೂಮ್‌ನಲ್ಲಿ ಟಿಶ್ಯೂ ಪೇಪರ್‌ ಮೇಲೆ ಬರೆದಿದ್ದ ‘ಬಾಂಬ್ ಇನ್ ಫ್ಲೈಟ್’ ಸಂದೇಶ ನಸುಕಿನ ವೇಳೆ ಕಂಡುಬಂದ ನಂತರ ವಿಮಾನದ ಪೈಲಟ್ ಎಟಿಸಿಗೆ ಬೆಳಿಗ್ಗೆ 7.30ಕ್ಕೆ ಮಾಹಿತಿ ನೀಡಿದರು. ಆಗ ವಿಮಾನವು ತಿರುವನಂತಪುರಂ ವಿಮಾನ ನಿಲ್ದಾಣವನ್ನು ಸಮೀಪಿಸಿತ್ತು. ತದನಂತರ, ಬೆಳಿಗ್ಗೆ 7.36ಕ್ಕೆ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಯಿತು’ ಎಂದು ಮೂಲಗಳು ಹೇಳಿವೆ.

‘ಏರ್‌ ಇಂಡಿಯಾ ವಿಮಾನವನ್ನು ಬೆಳಿಗ್ಗೆ 8 ಗಂಟೆ ಸುಮಾರಿಗೆ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿ, ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಬೆಳಿಗ್ಗೆ 8.44ರ ಸುಮಾರಿಗೆ ಪ್ರಯಾಣಿಕರನ್ನು ವಿಮಾನದಿಂದ ಸ್ಥಳಾಂತರಿಸಲಾಯಿತು. ಬಾಂಬ್ ಪತ್ತೆ ದಳ ಸೇರಿ ವಿವಿಧ ಭದ್ರತಾ ಏಜೆನ್ಸಿಗಳು ವಿಮಾನವನ್ನು ಪರಿಶೀಲನೆಗೆ ಒಳಪಡಿಸಿದವು’ ಎಂದು ಮೂಲಗಳು ತಿಳಿಸಿವೆ.

‘ಮುಂಬೈನಿಂದ ತಿರುವನಂತಪುರಕ್ಕೆ ಪ್ರಯಾಣಿಸುತ್ತಿದ್ದ ಎಐ 657 ವಿಮಾನದ ಸುರಕ್ಷತೆಗೆ ಸಂಬಂಧಿಸಿ ಎಚ್ಚರಿಕೆ ವಹಿಸಬೇಕಾದ ಸಂದೇಶ ಬಂದಿತ್ತು. ವಿಮಾನದ ಸಿಬ್ಬಂದಿ ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ, ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡರು’ ಎಂದು ಏರ್‌ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.  

ಏರ್ ಇಂಡಿಯಾ ತನ್ನ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಮುಂಬೈನಿಂದ ತಿರುವನಂತಪುರಕ್ಕೆ ಬಂದ ವಿಮಾನದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ಇಳಿದಿದ್ದಾರೆ ಎಂದು ಏರ್‌ ಇಂಡಿಯಾ ವಕ್ತಾರರು ಕೂಡ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT