ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈದ್ಧಾಂತಿಕ ಭಿನ್ನಾಭಿಪ್ರಾಯ; ಕಲಾವಿದರಿಂದ ಬಹಿಷ್ಕಾರ

Published 21 ಮಾರ್ಚ್ 2024, 23:29 IST
Last Updated 21 ಮಾರ್ಚ್ 2024, 23:29 IST
ಅಕ್ಷರ ಗಾತ್ರ

ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಕಾರದ ಖ್ಯಾತ ಗಾಯಕ ಟಿ.ಎಂ. ಕೃಷ್ಣ ಅವರಿಗೆ ಮದ್ರಾಸ್‌ ಸಂಗೀತ ಅಕಾಡೆಮಿಯು ‘ಸಂಗೀತ ಕಲಾನಿಧಿ’ ಪ್ರಶಸ್ತಿಯನ್ನು ಘೋಷಿಸಿದೆ. ಈ ಬಳಿಕ ದೊಡ್ಡ ವಿವಾದವೇ ಎದ್ದಿದೆ. ‘ಸಾಮಾಜಿಕ ಸುಧಾರಣೆಗಾಗಿ ಕೃಷ್ಣ ಅವರು ಸಂಗೀತವನ್ನು ಸಾಧನವನ್ನಾಗಿ ಬಳಸಿಕೊಂಡಿದ್ದಾರೆ’ ಎಂದು ಅಭಿಪ್ರಾಯಪಟ್ಟ ಅಕಾಡೆಮಿಯು ಕೃಷ್ಣ ಅವರ ಆಯ್ಕೆಯ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿತ್ತು.

‘ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಹಾನಿ ಮಾಡಿದ್ದಾರೆ’ ಎಂದು ಆರೋಪಿಸಿ ಹಲವು ಖ್ಯಾತ ಸಂಗೀತಕಾರರು ಕೃಷ್ಣ ಅವರ ಆಯ್ಕೆಯನ್ನು ವಿರೋಧಿಸಿದ್ದಾರೆ. ಜೊತೆಗೆ, ಇದೇ ವರ್ಷಾಂತ್ಯಕ್ಕೆ ಅಕಾಡೆಮಿ ನಡೆಸುವ ಕಾರ್ಯಕ್ರಮಕ್ಕೆ ಬಹಿಷ್ಕಾರವನ್ನೂ ಹಾಕಿದ್ದಾರೆ. ಆದರೆ, ಮದ್ರಾಸ್‌ ಸಂಗೀತ ಅಕಾಡೆಮಿ ಮಾತ್ರ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದೆ

‘ಸಂಸ್ಥೆಯು ವ್ಯಕ್ತಿಗಳಿಂತಲೂ ದೊಡ್ಡದು’

ಬಹಿಷ್ಕಾರ ಹಾಕುವ ಸಂಗೀತಗಾರರ ಪಟ್ಟಿ ಎಷ್ಟೇ ಉದ್ದ ಬೆಳೆದರೂ ನಮ್ಮ ನಿರ್ಧಾರಕ್ಕೆ ನಾವು ಬದ್ಧ. ಈ ಸಂಸ್ಥೆಯು ವ್ಯಕ್ತಿಗಳಿಗಿಂತಲೂ ದೊಡ್ಡದು. ಬಹಿಷ್ಕಾರ ಹಾಕುತ್ತಿರುವ ಯಾರೂ ಕೃಷ್ಣ ಅವರ ಸಂಗೀತದ ಕುರಿತು ತಕರಾರು ಎತ್ತುತ್ತಿಲ್ಲ ಬದಲಿಗೆ ಬೇರೆಯದೇ ವಿಷಯಕ್ಕೆ ವಿರೋಧಿಸುತ್ತಿದ್ದಾರೆ

ಎನ್‌. ಮುರಳಿ, ಅಧ್ಯಕ್ಷ, ಮದ್ರಾಸ್‌ ಸಂಗೀತ ಅಕಾಡೆಮಿ

‘ಅನುಮಾನಕ್ಕೆ ಎಡೆಮಾಡಿದೆ’

ಹಿರಿಯ ಸಂಗೀತಕಾರನ ಕುರಿತು ವಿಷಕಾರಿ ಹಾಗೂ ನಿಂದನಾತ್ಮಕ ಮಾತುಗಳನ್ನು ಆಡಿದ್ದೀರಿ. ಇದರಿಂದ ನನಗೆ ಆಘಾತವಾಗಿದೆ. ಪ್ರಶಸ್ತಿಯ ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಲಾಗುತ್ತದೆ. ನಿಮ್ಮ ಪತ್ರಕ್ಕೆ ಉತ್ತರ ನೀಡುವ ಮೊದಲೇ, ನಿಮ್ಮ ಪತ್ರದಲ್ಲಿನ ಭಾಗಗಳನ್ನು ಜಾಲತಾಣಗಳಲ್ಲಿ ಹಾಕಿರುವುದರ ನಿಮ್ಮ ಉದ್ದೇಶವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ

(ರಂಜಿನಿ–ಗಾಯತ್ರಿ ಅವರ ಪತ್ರಕ್ಕೆ ಮುರಳಿ ಅವರು ನೀಡಿದ ಉತ್ತರದ ಆಯ್ದ ಭಾಗ)

ಸಂಗೀತವು ನನ್ನನ್ನು ಪ್ರಾಮಾಣಿಕವಾಗಿ ಇರುವಂತೆ ಮಾಡಿದೆ. ಒಂದು ರಾಗಕ್ಕೆ ನಿಮ್ಮದೆಲ್ಲವನ್ನೂ ಅರ್ಪಿಸಿಕೊಂಡಾಗ, ಆ ಇಡೀ ಅನುಭೂತಿಯು ನಿಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ಹೀಗೆ ಅನುಭೂತಿಯು ನಿಮ್ಮನ್ನು ಆವರಿಸಿಕೊಂಡಾಗ, ನಾನು–ನನ್ನದು, ನನ್ನಿಂದಲೇ ಎಲ್ಲ ಎನ್ನುವುದಕ್ಕೆಲ್ಲ ಜಾಗವೇ ಇರುವುದಿಲ್ಲ

ಟಿ.ಎಂ. ಕೃಷ್ಣ, ಗಾಯಕ (‘ಸಂಗೀತ ಕಲಾನಿಧಿ’ ಪ್ರಶಸ್ತಿ ಘೋಷಣೆಯಾದ ಬಳಿಕ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಪ್ರತಿಕ್ರಿಯೆ)

‘ಪೆರಿಯಾರ್‌ ವೈಭವ’

ಬ್ರಾಹ್ಮಣರ ಮಾರಣಹೋಮಕ್ಕೆ ಪೆರಿಯಾರ್‌ ಬಹಿರಂಗವಾಗಿಯೇ ಕರೆ ನೀಡಿದ್ದರು. ಬ್ರಾಹ್ಮಣ ಸಮುದಾಯದ ಹೆಣ್ಣುಮಕ್ಕಳ ಬಗ್ಗೆ ಪದೇ ಪದೇ ಅಶ್ಲೀಲ ಮಾತುಗಳನ್ನಾಡಿದ ಇವರನ್ನು ಕೃಷ್ಣ ಅವರು ವೈಭವೀಕರಿಸುತ್ತಾರೆ. ಕೃಷ್ಣ ಅವರು ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಪ್ರಜ್ಞಾಪೂರ್ವಕವಾಗಿಯೇ ಅಪಾರ ಹಾನಿ ಉಂಟು ಮಾಡಿದ್ದಾರೆ

ರಂಜನಿ–ಗಾಯತ್ರಿ ಸಹೋದರಿಯರು ಖ್ಯಾತ ಗಾಯಕಿಯರು

‘ಭಿನ್ನಾಭಿ‍ಪ್ರಾಯಗಳಿವೆ’

ಕೃಷ್ಣ ಅವರೊಂದಿಗೆ ನನಗೆ ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯಗಳಿವೆ. ಧರ್ಮದ ಕುರಿತು, ಅಯೋಧ್ಯೆ, ರಾಮನ ಕುರಿತು ಅವರು ನೀಡಿರುವ ಹೇಳಿಕೆಗಳಿಂದ ನನಗೆ ನೋವಾಗಿದೆ. ರಾಮಾನುಜ, ವೇದಾಂತ ದೇಶಿಕಾ ಮತ್ತು ಕಂಚಿ ಪರಮಾಚಾರ್ಯ ಅವರ ಬೋಧನೆಗಳಿಂದ ನನ್ನ ಜೀವನನ್ನು ರೂಪಿಸಿಕೊಂಡಿದ್ದೇನೆ. ಕೃಷ್ಣ ಅವರಿಗೆ ಪ್ರಶಸ್ತಿ ನೀಡಿದ ಮರುದಿನವೇ ನಾನು ಹಾಡುವುದು ಈ ಎಲ್ಲರಿಗೂ ಅಗೌರವ ಸೂಚಿಸಿದಂತಾಗುತ್ತದೆ

ದುಷ್ಯಂತ್‌ ಶ್ರೀಧರ್‌, ಹರಿಕಥಾ ಗಾಯಕ

‘ಯುವಕರನ್ನು ಮತಿಗೇಡಿ ಪ್ಯಾದೆಗಳನ್ನಾಗಿಸಿದ್ದಾರೆ’

ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಕ್ಷೇತ್ರಗಳಷ್ಟೇ ಅಲ್ಲದೆ, ಒಟ್ಟಾರೆಯಾಗಿ ಭಾರತವನ್ನೇ ಕೃಷ್ಣ ಅವರು ಜಾತಿ ಮತ್ತು ಕೋಮು ನೆಲೆಯಲ್ಲಿ ಧ್ರುವೀಕರಣ ಮಾಡಿದ್ದಾರೆ. ವೃತ್ತಿ ಬದುಕಿನ ಮಹತ್ವದ ಘಟ್ಟದಲ್ಲಿ ಉತ್ತಮ ಸಾಧನೆಗೈಯಬೇಕಿದ್ದ ಯುವಕರ ಮನಸ್ಸುಗಳನ್ನು ಅಲ್ಲಿಂದ ಬೇರೆಡೆಗೆ ಸೆಳೆದಿದ್ದಾರೆ. ಅವರನ್ನು ಕೆಲವು ಕಾರ್ಯಸೂಚಿಗಳ ಮೂಲಕ ಮತಿಗೇಡಿ ಪ್ಯಾದೆಗಳನ್ನಾಗಿ ಮಾಡಿದ್ದಾರೆ

ಚಿತ್ರವೀಣಾ ಎನ್‌. ರವಿಕಿರಣ್‌ ವಾದಕ, ಸಂಗೀತಕಾರ (ಪ್ರತಿಭಟನಾತ್ಮಕವಾಗಿ ‘ಸಂಗೀತ ಕಲಾನಿಧಿ’ ಪ್ರಶಸ್ತಿಯನ್ನು ವಾಪಸ್‌ ಮಾಡುವುದಾಗಿ ಹೇಳಿಕೊಂಡಿದ್ದಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT