ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ | ಗವರ್ನರ್ vs ಸಿಎಂ: 9 ಕುಲಪತಿಗಳು ಸದ್ಯಕ್ಕೆ ನಿರಾಳ

ಆಯ್ಕೆಯಲ್ಲಿ ಅಕ್ರಮ: ರಾಜೀನಾಮೆಗೆ ಸೂಚಿಸಿದ್ದ ಕೇರಳ ರಾಜ್ಯಪಾಲ
Last Updated 24 ಅಕ್ಟೋಬರ್ 2022, 21:00 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದ ರಾಜ್ಯಪಾಲರು ಅಂತಿಮ ನಿರ್ಧಾರ ತೆಗೆದುಕೊಳ್ಳುವ ತನಕ ಕುಲಪತಿಗಳು ಅಧಿಕಾರದಲ್ಲಿ ಮುಂದುವರಿಯಬಹುದು ಎಂದು ಕೇರಳ ಹೈಕೋರ್ಟ್‌ ಸೋಮವಾರ ತಿಳಿಸಿದೆ. ಇದರಿಂದ ಕೇರಳದ ಒಂಬತ್ತು ವಿಶ್ವವಿದ್ಯಾಲಯಗಳ ಕುಲಪತಿಗಳು ಸ್ವಲ್ಪ ನಿರಾಳರಾದಂತಾಗಿದೆ.

ಕುಲಪತಿಗಳ ಆಯ್ಕೆಯಲ್ಲಿನ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವೆ ನಡೆಯುತ್ತಿದ್ದ ಆರೋಪ- ಪ್ರತ್ಯಾರೋಪಗಳು ಸೋಮವಾರ ತಾರಕಕ್ಕೇರಿ, ಪ್ರಕರಣ ಹೈಕೋರ್ಟ್‌ ಮೆಟ್ಟಿಲು ಹತ್ತಿತ್ತು.

ನೇಮಕಾತಿಯಲ್ಲಿ ಯುಜಿಸಿ ನಿಯಮಾವಳಿ ಉಲ್ಲಂಘನೆಯಾಗಿರುವ ಕಾರಣ ರಾಜ್ಯದ 9 ವಿಶ್ವವಿದ್ಯಾಲಯಗಳ ಕುಲಪತಿಗಳು ಸೋಮವಾರ ಬೆಳಿಗ್ಗೆ 11.30ರೊಳಗೆ ರಾಜೀನಾಮೆ ನೀಡಬೇಕು ಎಂದು ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರು ಭಾನುವಾರ ನಿರ್ದೇಶಿಸಿದ್ದರು. ಆದರೆ ರಾಜೀನಾಮೆ ನೀಡಲು ಕುಲಪತಿಗಳು ನಿರಾಕರಿಸಿದ ಕಾರಣ, ಈ ಎಲ್ಲ ಕುಲಪತಿಗಳಿಗೆ ರಾಜ್ಯಪಾಲರು ಸೋಮವಾರ ಷೋಕಾಸ್‌ ನೋಟಿಸ್‌ ಜಾರಿಗೊಳಿಸಿದರು.

ಇತ್ತೀಚೆಗೆ ಸುಪ್ರೀಂ ಕೋರ್ಟ್, ಕೇರಳದ ‘ಎಪಿಜೆ ಅಬ್ದುಲ್‌ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ’ ಕುಲಪತಿ ಎಂ.ಎಸ್‌.ರಾಜಶ್ರೀ ಅವರ ನೇಮಕಾತಿಯಲ್ಲಿ ಯುಜಿಸಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅವರ ನೇಮಕವನ್ನು ರದ್ದುಪಡಿಸಿತ್ತು. ಇದೇ ಆದೇಶವನ್ನು ಉಲ್ಲೇಖಿಸಿ ರಾಜ್ಯಪಾಲರು, ಈ ರೀತಿ ನೇಮಕವಾಗಿದ್ದ ಕುಲಪತಿಗಳಿಗೆ ರಾಜೀನಾಮೆ ಸಲ್ಲಿಸುವಂತೆ ನಿರ್ದೇಶಿಸಿದ್ದರು.

ಮುಖ್ಯಮಂತ್ರಿ ವಿರೋಧ:
‘ರಾಜ್ಯಪಾಲರ ನಿರ್ದೇಶನ ಕಾನೂನುಬಾಹಿರವಾಗಿದ್ದು, ಮೂಲಭೂತ ನೈಸರ್ಗಿಕ ನ್ಯಾಯವನ್ನು ನಿರಾಕರಿಸಿದಂತಾಗಿದೆ. ಹೀಗಾಗಿ ಅದನ್ನು ಅನುರಿಸುವ ಅಗತ್ಯವಿಲ್ಲ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ವಿರೋಧ ವ್ಯಕ್ತಪಡಿಸಿದರು.

‘ರಾಜ್ಯಪಾಲರು ಹಿಂದುತ್ವದ ಸಿದ್ಧಾಂತಗಳನ್ನು ಜಾರಿಗೊಳಿಸಲು ಹೀಗೆಲ್ಲ ನಡೆದುಕೊಳ್ಳುತ್ತಿದ್ದಾರೆ. ಅವರ ಈ ರೀತಿಯ ಕ್ರಮಗಳಿಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತದೆ’ ಎಂದು ಅವರು ಹೇಳಿದರು.

ಇದೇ ವೇಳೆ ರಾಜ್ಯಪಾಲರ ನಿರ್ದೇಶನವನ್ನು ಪ್ರಶ್ನಿಸಿ ಕುಲಪತಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ ನಡೆಸುವುದಾಗಿ ಹೈಕೋರ್ಟ್‌ ತಿಳಿಸಿತು.

ರಾಜ್ಯಪಾಲರಿಂದ ಷೋಕಾಸ್‌ ನೋಟಿಸ್‌:
ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ರಾಜ್ಯಪಾಲರು, ‘ರಾಜೀನಾಮೆ ನೀಡದ ಕುಲಪತಿಗಳಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಿದ್ದು, ನ.3ರಂದು ಸಂಜೆ 5ಗಂಟೆಯವರೆಗೆ ಸಮಯ ನೀಡಲಾಗಿದೆ. ಕುಲಪತಿಗಳು ನೀಡುವ ಉತ್ತರವನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

‘ರಾಜೀನಾಮೆ ನೀಡುವ ಮೂಲಕ ಗೌರವಯುತ ನಿರ್ಗಮನಕ್ಕೆ ಕುಲಪತಿಗಳಿಗೆ ಅವಕಾಶ ನೀಡಲಾಗಿತ್ತೇ ಹೊರತು ಅವರನ್ನು ವಜಾಗೊಳಿಸಿರಲಿಲ್ಲ. ಹೀಗಾಗಿ ನೈಸರ್ಗಿಕ ನ್ಯಾಯ ನಿರಾಕರಣೆಯಾಗಿಲ್ಲ’ ಎಂದು ಖಾನ್‌ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಇದೇ ವೇಳೆ ಅರ್ಜಿದಾರರ ಮನವಿ ಆಲಿಸಿದ ಹೈಕೋರ್ಟ್‌, ರಾಜ್ಯಪಾಲರು ಈಗಾಗಲೇ ಷೋಕಾಸ್‌ ನೋಟಿಸ್‌ ನೀಡಿದ್ದಾರೆ. ಅದಕ್ಕೆ ನೀಡುವ ಉತ್ತರದ ಆಧಾರದ ಮೇಲೆ ರಾಜ್ಯಪಾಲರು ನಿರ್ಧಾರ ತೆಗೆದುಕೊಳ್ಳುವವರೆಗೆ ಕುಲಪತಿಗಳು ಅಧಿಕಾರದಲ್ಲಿ ಮುಂದುವರಿಯಬಹುದು ಎಂದು ತಿಳಿಸಿತು.

ಕುಲಪತಿಗಳ ರಾಜೀನಾಮೆ ಕೇಳುವ ಮೊದಲು ಅವರಿಗೆ ಸಮರ್ಥಿಸಿಕೊಳ್ಳಲು ಅವಕಾಶ ನೀಡದಿರುವ ಕುರಿತು ಹೈಕೋರ್ಟ್‌ನಿಂದ ಟೀಕೆಗಳು ಎದುರಾಗಬಹುದು ಎಂಬುದನ್ನು ಅರಿತ ರಾಜ್ಯಪಾಲರು, ಕೂಡಲೇ 9 ಕುಲಪತಿಗಳಿಗೆ ಷೋಕಾಸ್‌ ನೋಟಿಸ್‌ ನೀಡಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.

ಕೆಲ ಮಾಧ್ಯಮಗಳಿಗೆ ನಿರಾಕರಣೆ:
ರಾಜ್ಯಪಾಲರು ಸೋಮವಾರ ನಡೆಸಿದ ಸುದ್ದಿಗೋಷ್ಠಿಗೆ ಬರಲು ‘ಕೈರಳಿ’, ‘ರಿಪೋರ್ಟರ್’, ‘ಮೀಡಿಯಾ ಒನ್’, ‘ಜೈ ಹಿಂದ್’ ಸುದ್ದಿ ವಾಹಿನಿಗಳಿಗೆ ಅವಕಾಶ ನೀಡಲಿಲ್ಲ. ಇದನ್ನು ವಿರೋಧಿಸಿರುವ ಕೇರಳದ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ‘ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಅತಿಕ್ರಮಣ’ ಎಂದು ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT