ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಲಂಗಾಣ ಲಾಂಛನದಿಂದ ಚಾರ್‌ಮಿನಾರ್, ಕಾಕತೀಯ ಕಮಾನು ಚಿತ್ರ ತೆಗೆಯುವುದಕ್ಕೆ ವಿರೋಧ

Published 30 ಮೇ 2024, 13:08 IST
Last Updated 30 ಮೇ 2024, 13:08 IST
ಅಕ್ಷರ ಗಾತ್ರ

ಹೈದರಾಬಾದ್: ತೆಲಂಗಾಣ ರಾಜ್ಯ ಲಾಂಛನದಿಂದ ಚಾರ್‌ಮಿನಾರ್ ಮತ್ತು ಕಾಕತೀಯ ಕಮಾನುಗಳನ್ನು ತೆಗೆದು ಹಾಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಅದರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಪ್ರತಿಪಕ್ಷ ಬಿಆರ್‌ಎಸ್ ಹೇಳಿದೆ.

ಬಿಆರ್‌ಎಸ್‌ನ ಕಾರ್ಯಾಧ್ಯಕ್ಷ ಕೆ.ಟಿ. ರಾಮ ರಾವ್ ಅವರು ಪಕ್ಷದ ಇತರೆ ನಾಯಕರ ಜೊತೆ ಗುರುವಾರ ಚಾರ್‌ಮಿನಾರ್ ಬಳಿಗೆ ಭೇಟಿ ನೀಡಿದ್ದು, ಚಾರ್‌ಮಿನಾರ್ ಹೈದರಾಬಾದ್‌ನ ಗುರುತು ಎಂದು ಹೇಳಿದ್ದಾರೆ.

ಕಳೆದ 10 ವರ್ಷಗಳಲ್ಲಿ ಬಿಆರ್‌ಎಸ್ ಸರ್ಕಾರ ಮಾಡಿರುವ ಉತ್ತಮ ಕೆಲಸಗಳಿಂದ ಕೆ. ಚಂದ್ರಶೇಖರ ರಾವ್ ಅವರಿಗೆ ಹೆಸರು ಬರುವುದು ಕಾಂಗ್ರೆಸ್‌ ಸರ್ಕಾರಕ್ಕೆ ಬೇಕಿಲ್ಲ ಎಂದು ಅವರು ಆರೋಪಿಸಿದರು.

ಬಿಆರ್‌ಎಸ್ ಸರ್ಕಾರದ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ನಿಕೃಷ್ಟ ಎಂಬಂತೆ ಬಿಂಬಿಸುವ ಯತ್ನ ನಡೆಯುತ್ತಿದೆ ಎಂದು ದೂರಿದ್ದಾರೆ.

‘ತೆಲಂಗಾಣದ ಅಧಿಕೃತ ಲಾಂಛನದಲ್ಲಿರುವ ಚಾರ್‌ಮಿನಾರ್ ಮತ್ತು ವಾರಂಗಲ್‌ನ ಪ್ರಸಿದ್ಧ ಕಾಕತೀಯ ಸಾಮ್ರಾಜ್ಯದ ಕಮಾನಿನ ಚಿತ್ರ ತೆಗೆಯಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತೇವೆ. ಈ ಕುರಿತಂತೆ ಬಿಆರ್‌ಎಸ್ ಪ್ರತಿಭಟನೆ ನಡೆಸಲಿದೆ’ ಎಂದು ಅವರು ಹೇಳಿದ್ದಾರೆ.

ಕೂಡಲೇ ರಾಜ್ಯ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ತೆಲಂಗಾಣದ ಸಂಘರ್ಷ ಮತ್ತು ಬಲಿದಾನಗಳನ್ನು ಪ್ರತಿಬಿಂಬಿಸುವ ಹೊಸ ರಾಜ್ಯ ಲಾಂಛನ, ಹೊಸ ನಾಡಗೀತೆ ತಯಾರಿಗೆ ರಾಜ್ಯ ಸರ್ಕಾರ ಮುಂದಾಗುತ್ತಿದ್ದಂತೆ ಬಿಆರ್‌ಎಸ್ ವಿರೋಧ ವ್ಯಕ್ತಪಡಿಸಿದೆ.

ತೆಲಂಗಾಣದ ನಾಡ ಗೀತೆ ‘ಜಯ ಜಯ ಹೇ ತೆಲಂಗಾಣ’ಕ್ಕೆ ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆ ಮಾಡುವ ಪ್ರಸ್ತಾಪಕ್ಕೂ ಬಿಆರ್‌ಎಸ್ ನಾಯಕರು ವಿರೋಧಿಸಿದ್ದಾರೆ.

‘ಟಾಲಿವುಡ್ ಮತ್ತು ತೆಲಂಗಾಣ ಚಳುವಳಿ ಬೇರೆ ಬೇರೆ. ಟಾಲಿವುಡ್ ಇರುವುದು ಮನರಂಜನೆಗೆ. ಆದರೆ, ತೆಲಂಗಾಣ ನಾಡಗೀತೆಯು ಪ್ರತ್ಯೇಕ ರಾಜ್ಯ ಹೋರಾಟದ ಸಂದರ್ಭದಲ್ಲಿ ರಾಜ್ಯದ ಎಲ್ಲ ಹೃದಯಗಳ ಭಾವನೆಗಳನ್ನು ಒಗ್ಗೂಡಿಸಿದ್ದಾಗಿದೆ’ ಎಂದು ಬಿಆರ್‌ಎಸ್ ಹೇಳಿದೆ.

.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT