ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರಿಯ IPS ಅಧಿಕಾರಿ ಸಿ. ವಿಜಯಕುಮಾರ್ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ

ತಮಿಳುನಾಡಿನ ಕೊಯಮತ್ತೂರು ವಲಯದ ಡೆಪ್ಯೂಟಿ ಐಜಿಪಿಯಾಗಿದ್ದ ವಿಜಯಕುಮಾರ್
Published 7 ಜುಲೈ 2023, 10:01 IST
Last Updated 7 ಜುಲೈ 2023, 10:01 IST
ಅಕ್ಷರ ಗಾತ್ರ

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ವಲಯದ ಡೆಪ್ಯೂಟಿ ಐಜಿಪಿ ಹಾಗೂ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದ ಸಿ. ವಿಜಯಕುಮಾರ್ ಅವರು ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 45 ವರ್ಷ ವಯಸ್ಸಾಗಿತ್ತು.

ಶುಕ್ರವಾರ ಬೆಳಿಗ್ಗೆ 6.45 ರ ಸುಮಾರು ವಾಯು ವಿಹಾರ ಮುಗಿಸಿ ಬಂದ ನಂತರ ನೇರವಾಗಿ ತಮ್ಮ ಗೃಹ ಕಚೇರಿಯ ಒಳಗೆ ಹೋಗಿ ಸರ್ವಿಸ್ ರಿವಾಲ್ವರ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗುರುವಾರ ಸಂಜೆ ಅವರು ತಮ್ಮ ಕುಟುಂಬದ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು.

ಘಟನಾ ಸ್ಥಳಕ್ಕೆ ತಮಿಳುನಾಡು ಡಿಜಿಪಿ ಶಂಕರ್ ಜೈವಾಲ್, ಕೊಯಮತ್ತೂರು ಐಜಿಪಿ ಆರ್ ಸುಧಾಕರ್ ಭೇಟಿ ನೀಡಿದ್ದರು. ವಿಜಯಕುಮಾರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅವರು ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಜೈವಾಲ್ ತಿಳಿಸಿದ್ದಾರೆ.

ನಿದ್ರಾಹೀನತೆಯಿಂದ ಬಳಲುತ್ತಿದ್ದ ವಿಜಯಕುಮಾರ್ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಅವರ ಆತ್ಮಹತ್ಯೆಗೆ ಕೆಲಸದ ಒತ್ತಡವೂ ಕಾರಣ ಇದೆ ಎಂದು ಹೇಳಲಾಗುತ್ತಿದೆ.

2009 ರ ಬ್ಯಾಚ್‌ನ ತಮಿಳುನಾಡು ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದ ವಿಜಯಕುಮಾರ್ ಅವರು ಕಡಲೂರು, ಕಾಂಚಿಪುರಂ, ತಿರುವರೂರು, ನಾಗಪಟ್ಟಿಣಂ ಜಿಲ್ಲೆಗಳ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದರು.

ಕೊಯಮತ್ತೂರು ವಲಯಕ್ಕೆ ಡೆಪ್ಯೂಟಿ ಐಜಿಪಿಯಾಗಿ ಬರುವ ಮೊದಲು ಚೆನ್ನೈನ ಅಣ್ಣಾ ನಗರ್ ಡಿಸಿಪಿಯಾಗಿದ್ದರು. ಅವರ ದುರಂತ ಸಾವಿಗೆ ಸಿಎಂ ಎಂಕೆ ಸ್ಟಾಲಿನ್ ಅವರು ಆಘಾತ ವ್ಯಕ್ತಪಡಿಸಿದ್ದು, ತಮಿಳುನಾಡು ಪೊಲೀಸ್ ಇಲಾಖೆಗೆ ದೊಡ್ಡ ನಷ್ಟ ಎಂದು ಹೇಳಿದ್ದಾರೆ.

ಇನ್ನು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಈ ಕುರಿತು ಪ್ರತಿಕ್ರಿಯಿಸಿ, ‘ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ವಿಜಯಕುಮಾರ್ ಅವರಿಂದ ನಾನು ಸಾಕಷ್ಟು ಕಲಿತಿದ್ದೆ. ಅವರ ಈ ನಿರ್ಧಾರ ನನಗೆ ತೀವ್ರ ಆಘಾತವನ್ನುಂಟುಮಾಡಿದೆ. ನಾವು ಈ ಘಟನೆಯನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಅವರ ಸಾವಿನ ಬಗ್ಗೆ ರಾಜ್ಯ ಸರ್ಕಾರ ಉನ್ನತ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT