ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆಗೂ ಮುನ್ನವೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ: ಅಮಿತ್ ಶಾ

Published 10 ಫೆಬ್ರುವರಿ 2024, 9:21 IST
Last Updated 10 ಫೆಬ್ರುವರಿ 2024, 9:21 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನವೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೊಳಿಸಲಾಗುತ್ತಿದ್ದು, ಈ ಸಂಬಂಧ ಶೀಘ್ರ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರಕಟಿಸಿದರು.

‘ಸಿಎಎ ಜಾರಿಗೆ ಅಗತ್ಯವಿರುವ ನಿಯಮಗಳನ್ನು ಲೋಕಸಭೆ ಚುನಾವಣೆಗೆ ಮುನ್ನವೇ ಹೊರಡಿಸಲಾಗುವುದು. ಫಲಾನುಭವಿಗಳಿಗೆ ಭಾರತದ ಪೌರತ್ವ ನೀಡುವ ಪ್ರಕ್ರಿಯೆ ಇನ್ನೇನು ಪ್ರಾರಂಭವಾಗಲಿದೆ. ಇದೊಂದು ದೇಶದ ಕಾಯ್ದೆಯಾಗಿದ್ದು, ಇದರ ಜಾರಿಯ ವಿಷಯವಾಗಿ ಯಾರಿಗೂ ಗೊಂದಲ ಬೇಡ’ ಎಂದು ಶನಿವಾರ ಇಲ್ಲಿ ‘ಇ.ಟಿ ನೌ ಜಾಗತಿಕ ವ್ಯಾಪಾರ ಶೃಂಗ’ದಲ್ಲಿ ಹೇಳಿದರು.

ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ 2014ರ ಡಿಸೆಂಬರ್‌ 31ಕ್ಕೂ ಮುನ್ನ ಭಾರತಕ್ಕೆ ಬಂದ ಹಿಂದೂ, ಸಿಖ್‌, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತ ಧರ್ಮೀಯರಿಗೆ ಭಾರತದ ಪೌರತ್ವ ನೀಡುವ ಕಾಯ್ದೆ ಇದಾಗಿದೆ. ಈ ಕಾಯ್ದೆಯಿಂದ ಮುಸ್ಲಿಮರನ್ನು ಹೊರಗಿಡಲಾಗಿದೆ.

‘ಸಿಎಎ ವಿಚಾರದಲ್ಲಿ ನಮ್ಮ ಮುಸ್ಲಿಂ ಸಹೋದರರನ್ನು ದಾರಿತಪ್ಪಿಸಲಾಗುತ್ತಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಿರುಕುಳ ಅನುಭವಿಸಿ ಭಾರತಕ್ಕೆ ಬಂದವರಿಗೆ ಪೌರತ್ವ ನೀಡುವುದಷ್ಟೇ ಈ ಕಾಯ್ದೆಯ ಉದ್ದೇಶ. ಆದ್ದರಿಂದ ಈ ಕಾಯ್ದೆಯನ್ನು ಯಾರೂ ವಿರೋಧಿಸಬಾರದು’ ಎಂದು ಶಾ ಮನವಿ ಮಾಡಿದರು. 

ಸಿಎಎಗೆ 2019ರ ಡಿಸೆಂಬರ್‌ನಲ್ಲಿ ಲೋಕಸಭೆಯ ಅಂಗೀಕಾರ ಹಾಗೂ ರಾಷ್ಟ್ರಪತಿಯ ಅನುಮೋದನೆ ದೊರೆತಿತ್ತು. ಇದರ ಜಾರಿಗೆ ವಿರೋಧ ವ್ಯಕ್ತಪಡಿಸಿ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. 

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಬಗ್ಗೆ ಮಾತನಾಡಿದ ಶಾ, ‘ಯುಸಿಸಿಯು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಇತರರು ಸಹಿ ಮಾಡಿದ ಸಾಂವಿಧಾನಿಕ ಕಾರ್ಯಸೂಚಿಯಾಗಿದೆ’ ಎಂದು ಹೇಳಿದರು. 

‘ಆದರೆ, ಕಾಂಗ್ರೆಸ್‌ ಪಕ್ಷವು ಓಲೈಕೆ ರಾಜಕಾರಣದ ಭಾಗವಾಗಿ ಯುಸಿಸಿಯನ್ನು ನಿರ್ಲಕ್ಷಿಸಿತ್ತು. ಉತ್ತರಾಖಂಡದಲ್ಲಿ ಯುಸಿಸಿ ಜಾರಿಯು ಸಾಮಾಜಿಕ ಬದಲಾವಣೆಗೆ ನಾಂದಿಯಾಗಲಿದೆ. ಜಾತ್ಯತೀತ ರಾಷ್ಟ್ರವೊಂದು ಧರ್ಮ ಆಧಾರಿತ ನಾಗರಿಕ ಸಂಹಿತೆಯನ್ನು ಹೊಂದಲು ಸಾಧ್ಯವಿಲ್ಲ’ ಎಂದರು.

ನಿಯಮಗಳು ಸಿದ್ಧ

ಸಿಎಎ ಜಾರಿಗೆ ಅಗತ್ಯವಿರುವ ನಿಯಮಗಳನ್ನು ರೂಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪೌರತ್ವ ನೀಡುವ ಇಡೀ ಪ್ರಕ್ರಿಯೆ ಆನ್‌ಲೈನ್‌ ಮೂಲಕವೇ ನಡೆಯಲಿದೆ. ಪೌರತ್ವ ಕೋರಿ ಅರ್ಜಿ ಸಲ್ಲಿಸುವವರು ತಾವು ಭಾರತಕ್ಕೆ ಬಂದ ವರ್ಷವನ್ನು ನಮೂದಿಸಬೇಕು. ಪ್ರಯಾಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಿಲ್ಲ ಎಂದು ನಿಯಮದಲ್ಲಿ ಹೇಳಲಾಗಿದೆ.

‘ಒಬಿಸಿ ಪಟ್ಟಿಗೆ ಸೇರಿಸಿದ್ದು ಕಾಂಗ್ರೆಸ್‌’

ಪ್ರಧಾನಿ ನರೇಂದ್ರ ಮೋದಿ ಅವರ ಜಾತಿಯ ಬಗ್ಗೆ ಚರ್ಚೆ ನಡೆಯುತ್ತಿರುವುದು ತೀರಾ ದುರದೃಷ್ಟಕರ ಎಂದ ಅಮಿತ್‌ ಶಾ ‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸುಳ್ಳು ಹೇಳುವುದನ್ನೇ ಚಟವಾಗಿಸಿಕೊಂಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು. ‘ಗುಜರಾತ್‌ನಲ್ಲಿ ಕಾಂಗ್ರೆಸ್‌ 1994ರಲ್ಲಿ ಅಧಿಕಾರದಲ್ಲಿದ್ದಾಗ ಮೋದಿ ಅವರ ಜಾತಿಯನ್ನು ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರಿಸಿತ್ತು. ಕೇಂದ್ರ ಸರ್ಕಾರವು 2000ನೇ ಇಸವಿಯಲ್ಲಿ ಒಬಿಸಿ ಪಟ್ಟಿಗೆ ಸೇರಿಸಿತ್ತು’ ಎಂದು ತಿಳಿಸಿದರು. ‘ಒಬಿಸಿ ಕುಟುಂಬದಲ್ಲಿ ಜನಿಸದ ಪ್ರಧಾನಿ ಮೋದಿ ಅವರು ತಮ್ಮನ್ನು ತಾವು ಒಬಿಸಿ ಎಂದು ಗುರುತಿಸಿಕೊಂಡು ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ರಾಹುಲ್‌ ಈಚೆಗೆ ಆರೋಪ ಮಾಡಿದ್ದರು.

ಸಿಎಎ ಯಾರದ್ದೇ ಪೌರತ್ವ ಕಸಿದುಕೊಳ್ಳುವ ಕಾಯ್ದೆ ಅಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಸಿಎಎ ವಿಚಾರದಲ್ಲಿ ನಮ್ಮ ಮುಸ್ಲಿಂ ಸಹೋದರರನ್ನು ಪ್ರಚೋದಿಸಲಾಗುತ್ತಿದೆ.
–ಅಮಿತ್‌ ಶಾ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT