ನವದೆಹಲಿ: ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ತಯಾರಿ ನಡೆಸುತ್ತಿರುವ ಬಿಜೆಪಿಯು ಮುಂಬರಲಿರುವ ಚುನಾವಣೆಗೂ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟ ಪುನರ್‌ರಚನೆಯನ್ನೂ ಈ ತಿಂಗಳ ಅಂತ್ಯದಲ್ಲಿ ಮಾಡಲಿದೆ ಎಂಬ ಮಾತುಗಳೂ ಬಲವಾಗಿ ಕೇಳಿಬರುತ್ತಿವೆ.
ಸಚಿವರ ಕಾರ್ಯನಿರ್ವಹಣೆ ಸಾಮರ್ಥ್ಯದ ಆಧಾರದ ಮೇಲೆ ಸಂಪುಟ ಪುನರ್‌ರಚನೆ ನಡೆಯಲಿದೆ ಎನ್ನಲಾಗಿದೆ.
ಜನವರಿ 31ರಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದೆ. ಅಷ್ಟರ ಒಳಗೆ ಸಂಪುಟ ಪುನರ್‌ರಚನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ಗುಜರಾತ್ ವಿಧಾನಸಭೆ ಚುನಾವಣೆಯ ಭಾರಿ ಗೆಲುವು, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಸೋಲು, ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಸೋಲು ಮತ್ತು ಕರ್ನಾಟಕ ಸೇರಿ ಈ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗಳು ಈ ಬಾರಿಯ ಸಂಪುಟ ಪುನರ್‌ರಚನೆ ಮೇಲೆ ಪ್ರಭಾವ ಬೀರಲಿವೆ ಎಂದು ಅಂದಾಜಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿರುವ ಶಿವಸೇನಾದ (ಏಕನಾಥ ಶಿಂದೆ ಬಣ) ಸದಸ್ಯರಿಗೆ ಸಚಿವ ಸ್ಥಾನ ನೀಡುವ ನಿರೀಕ್ಷೆ ಇದೆ. ಎಲ್‌ಜೆಪಿ ಅಧ್ಯಕ್ಷ, ಪ್ರಮುಖ ದಲಿತ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರ ಮಗ ಚಿರಾಗ್ ಪಾಸ್ವಾನ್ ಅವರನ್ನೂ ಸಂಪುಟದಲ್ಲಿ ಸೇರಿಸಿಕೊಳ್ಳಲಾಗುವುದು ಎನ್ನಲಾಗಿದೆ.
ಬಿಜೆಪಿಯ ಸಂಘಟನೆಯಲ್ಲೂ ಬದಲಾವಣೆಗಳನ್ನು ತರಲಾಗುವುದು ಎಂಬ ನಿರೀಕ್ಷೆಗಳೂ ಇವೆ.