ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಅಧಿಸೂಚನೆ ಪ್ರಕಟ: ದೆಹಲಿ, ಅಸ್ಸಾಂನ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ

Published 11 ಮಾರ್ಚ್ 2024, 14:32 IST
Last Updated 11 ಮಾರ್ಚ್ 2024, 14:32 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಅಧಿಸೂಚನೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತೆ ಜಾರಿಗೊಳಿಸಲಾಗಿದೆ.

ಶಾಹೀನ್‌ ಭಾಗ್, ಜಾಮಿಯಾ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್‌ ಮತ್ತು ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಎ ಜಾರಿ ವಿಷಯವಾಗಿ 2020ರಲ್ಲಿ ದೆಹಲಿ ಸಮುದಾಯಗಳ ಘರ್ಷಣೆಗೆ ಸಾಕ್ಷಿಯಾಗಿತ್ತು. ಹೀಗಾಗಿ ದೆಹಲಿಯ ಪ್ರತಿಯೊಬ್ಬ ವ್ಯಕ್ತಿಯ ಜೀವವೂ ನಮಗೆ ಮುಖ್ಯ ಎಂದು ಈಶಾನ್ಯ ದೆಹಲಿಯ ಡಿಸಿಪಿ  ಜಾಯ್‌ ಟಿರ್ಕಿ ಪಿಟಿಐಗೆ ತಿಳಿಸಿದ್ದಾರೆ.

ಬಿಗಿ ಪೊಲೀಸ್‌ ಬಂದೋಬಸ್ತ್‌

ಅಸ್ಸಾಂ: ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆ 2019 (ಸಿಎಎ) ಜಾರಿ ಘೋಷಣೆಯ ಬೆನ್ನಲ್ಲೇ ಅಸ್ಸಾಂನಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಸೋಮವಾರ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. 

ಎಲ್ಲ ಪೊಲೀಸ್ ಠಾಣೆಗಳನ್ನು ಸನ್ನದ್ಧವಾಗಿಡಲಾಗಿದ್ದು, ಗುವಾಹಟಿ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ನಗರ–ಪಟ್ಟಣಗಳ ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಎ ಅಧಿಸೂಚನೆ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ವಿರೋಧ ಪಕ್ಷಗಳು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಗಸ್ತನ್ನು ತೀವ್ರಗೊಳಿಸಿದ್ದಾರೆ.

ಸಿಎಎ ಪ್ರತಿಗಳನ್ನು ಸುಟ್ಟು ಪ್ರತಿಭಟನೆ ನಡೆಸುವುದರ ಜತೆಗೆ ಸತ್ಯಾಗ್ರಹ ಆರಂಭಿಸುವುದಾಗಿ ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (ಎಎಎಸ್‌ಯು) ಘೋಷಿಸಿದೆ.           

ಅಸ್ಸಾಂನಲ್ಲಿ 2019ರ ಡಿಸೆಂಬರ್‌ನಲ್ಲಿ ಸಿಎಎ ವಿರುದ್ಧದ ಪ್ರತಿಭಟನೆಗಳು ಆರಂಭವಾಗಿದ್ದವು. ಎಎಎಸ್‌ಯು ಮತ್ತು ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿ (ಕೆಎಂಎಸ್‌ಎಸ್‌) ಪ್ರತಿಭಟನೆಗಳ ನೇತೃತ್ವ ವಹಿಸಿದ್ದವು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸರ ಗುಂಡಿಗೆ ಐವರು ಬಲಿಯಾಗಿದ್ದರು. ಅದರ ಬೆನ್ನಲ್ಲೇ ಅಸ್ಸಾಂ ಜಾತೀಯ ಪರಿಷತ್ (ಎಜೆಪಿ) ಮತ್ತು ಎಎಎಸ್‌ಯು ಎಂಬ ಎರಡು ರಾಜಕೀಯ ಪಕ್ಷಗಳು ಸ್ಥಾಪನೆಯಾಗಿದ್ದವು.

ಅಧಿಸೂಚನೆ ಪ್ರಕಟ

ನೆರೆ ರಾಷ್ಟ್ರಗಳ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡುವ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸಲು ಕೇಂದ್ರ ಸರ್ಕಾರ ಇಂದು (ಸೋಮವಾರ) ಸಂಜೆ ಅಧಿಸೂಚನೆ ಹೊರಡಿಸಿದೆ.

ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರದಿಂದ ಈ ಅಧಿಸೂಚನೆ ಹೊರಬಿದ್ದಿದೆ. 

ಸಿಎಎ ನಿಯಮಗಳ ಅಧಿಸೂಚನೆ ಹೊರಡಿಸಿದ ಬಳಿಕ ಕೇಂದ್ರದ ಮೋದಿ ಸರ್ಕಾರವು 2014ರ ಡಿ.31ರ ವರೆಗೆ ಭಾರತಕ್ಕೆ ವಲಸೆ ಬಂದ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನದ ಹಿಂದೂ, ಸಿಖ್, ಜೈನ, ಬುದ್ಧ, ಪಾರ್ಸಿ ಹಾಗೂ ಕ್ರೈಸ್ತರಿಗೆ ದೇಶದ ಪೌರತ್ವ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT