ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಶೆ ಕಾರು ಅಪಘಾತ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ MH ಮುಖ್ಯಮಂತ್ರಿ ಸೂಚನೆ

Published 21 ಮೇ 2024, 12:49 IST
Last Updated 21 ಮೇ 2024, 12:49 IST
ಅಕ್ಷರ ಗಾತ್ರ

ಪುಣೆ: ಪೋಶೆ ಕಾರನ್ನು ಅತಿ ವೇಗದಲ್ಲಿ ಚಾಲನೆ ಮಾಡಿದ 17 ವರ್ಷದ ಬಾಲಕನೊಬ್ಬ ಇಬ್ಬರ ಸಾವಿನ ಆರೋಪ ಹೊತ್ತಿದ್ದಾನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡನವಿಸ್‌ ಸೂಚನೆ ನೀಡಿದ್ದಾರೆ ಎಂದು ಪುಣೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

'ಪುಣೆಯ ಕಲ್ಯಾಣಿ ನಗರ ಪ್ರದೇಶದಲ್ಲಿ ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದ ಬಾಲಕ ಪಾನಮತ್ತನಾಗಿದ್ದ. ಎರಡು ಬೈಕ್‌ಗಳಿಗೆ ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಬಾಲಕನ ತಂದೆಯನ್ನು ವಶಕ್ಕೆ ಪಡೆಯಲಾಗಿದೆ. ಇವರು ರಿಯಲ್‌ ಎಸ್ಟೇಟ್ ಉದ್ಯಮಿಯಾಗಿದ್ದಾರೆ. ಜತೆಗೆ ಬಾಲಕನಿಗೆ ಮದ್ಯ ಪೂರೈಕೆ ಮಾಡಿದ ಆರೋಪದಡಿ ಹೊಟೇಲಿನ ಮೂವರು ಸಿಬ್ಬಂದಿಯನ್ನೂ ವಶಕ್ಕೆ ಪಡೆಯಲಾಗಿದೆ‘ ಎಂದು ಪೊಲೀಸರು ಹೇಳಿದ್ದಾರೆ.

'ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಪುಣೆಯ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಅಜಿತ್ ಪವಾರ್‌ ಅವರು ಪೊಲೀಸರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದು, ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ’ ಎಂದು ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಜತೆಗೆ ಇಂಥ ಹೀನ ಕೃತ್ಯದಲ್ಲಿ ಆರೋಪಿಯಾಗಿರುವ ಬಾಲಕನನ್ನು ವಯಸ್ಕ ಎಂದು ಪರಿಗಣಿಸುವಂತೆ ನ್ಯಾಯಾಲಯವನ್ನು ಕೋರಲಾಗಿದೆ. ಆದರೆ ನ್ಯಾಯಾಲಯ ಪೊಲೀಸರ ಅರ್ಜಿಯನ್ನು ತಿರಸ್ಕರಿಸಿದೆ. ಹೀಗಾಗಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅಲ್ಲಿನ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಹೊಟೇಲಿನಲ್ಲಿ ಮದ್ಯ ಸೇವಿಸಿದ್ದು ಮತ್ತು ಹಣ ಪಾವತಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದ್ದಾರೆ.

ಸ್ನೇಹಿತರ ಗುಂಪೊಂದು ಬೈಕ್‌ನಲ್ಲಿ ಕಲ್ಯಾಣಿ ನಗರದಲ್ಲಿ ತೆರಳುವಾಗ ಮಧ್ಯಾಹ್ನ 3.15ಕ್ಕೆ ಅಪಘಾತ ಸಂಭವಿಸಿತ್ತು. ಪೋಶೆ ಕಾರು ಡಿಕ್ಕಿ ರಭಸಕ್ಕೆ 24 ವರ್ಷ ವಯಸ್ಸಿನ ಅನಿಸ್ ಅವಾಧಿಯ, ಅಶ್ವಿನಿ ಕಾಸ್ಟಾ ಮೃತಪಟ್ಟಿದ್ದರು. ಈ ಇಬ್ಬರು ಮಧ್ಯಪ್ರದೇಶವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT