ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರು ಅಪಘಾತ ಮಾಡಿ ಇಬ್ಬರ ಸಾವಿಗೆ ಕಾರಣನಾದ ಬಾಲಕನಿಗೆ ಪ್ರಬಂಧ ಬರೆಯುವ ಶಿಕ್ಷೆ

Published 20 ಮೇ 2024, 16:23 IST
Last Updated 20 ಮೇ 2024, 16:23 IST
ಅಕ್ಷರ ಗಾತ್ರ

ಪುಣೆ : ವಿಲಾಸಿ ಕಾರು ‘ಪೋಶೆ’ ಚಾಲನೆ ಮಾಡಿ ಇಬ್ಬರ ಸಾವಿಗೆ ಕಾರಣವಾಗಿದ್ದ ಬಾಲಕನಿಗೆ, ರಸ್ತೆ ಸುರಕ್ಷತೆ ಮತ್ತು ಪರಿಹಾರ ಕುರಿತು 300 ಪದಗಳ ಪ್ರಬಂಧ ಬರೆಯಬೇಕು ಎಂಬ ಆದೇಶಿಸಿ, ಬಾಲನ್ಯಾಯ ಮಂಡಳಿಯು ಜಾಮೀನು ನೀಡಿದೆ.

ಈ ಪ್ರಕರಣದಲ್ಲಿ ಬಾಲಕನ ತಂದೆ, ರಿಯಲ್‌ ಎಸ್ಟೇಟ್‌ ಉದ್ಯಮಿ ವಿರುದ್ಧವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಾಲಕನನ್ನು ವಯಸ್ಕನಾಗಿಯೇ ಪರಿಗಣಿಸಿ ವಿಚಾರಣೆಗೆ ಒಳಪಡಿಸಲು ಕೋರ್ಟ್‌ನ ಅನುಮತಿ ಕೋರುವುದಾಗಿ ತಿಳಿಸಿದ್ದಾರೆ.

ಭಾನುವಾರ ಇಲ್ಲಿನ ಕಲ್ಯಾಣಿ ನಗರದಲ್ಲಿ ಪೋಶೆ ಕಾರನ್ನು 17 ವರ್ಷ ವಯಸ್ಸಿನ ಬಾಲಕ ಚಾಲನೆ ಮಾಡುತ್ತಿದ್ದ. ಒಂದು ಹಂತದಲ್ಲಿ ಚಾಲಕನ ನಿಯಂತ್ರಣದ ತಪ್ಪಿದ ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಮೃತಪಟ್ಟಿದ್ದರು.

ಪೊಲೀಸರ ಪ್ರಕಾರ, ಅಪಘಾತ ನಡೆದ ಸಂದರ್ಭದಲ್ಲಿ ಬಾಲಕನು ಮದ್ಯ ಸೇವಿಸಿದ್ದ. ನ್ಯಾಯಮಂಡಳಿಯು ಬಾಲಕನನ್ನು ಮದ್ಯವ್ಯಸನ ನಿರ್ಮೂಲನಾ ಕೇಂದ್ರಕ್ಕೆ ಸಮಾಲೋಚನೆಗಾಗಿ ಕಳುಹಿಸಬೇಕು ಎಂದು ಸೂಚಿಸಿತು.

‍‍‍ಅಪಘಾತದ ಹಿಂದೆಯೇ ಪೊಲೀಸರು ಬಾಲಕನನ್ನು ಬಾಲ ನ್ಯಾಯಮಂಡಳಿ ಎದುರು ಹಾಜರುಪಡಿಸಿದ್ದರು. ಅಲ್ಲಿ ಗಂಟೆಯೊಳಗೆ ಜಾಮೀನು ದೊರೆತಿತ್ತು. ಜಾಮೀನು ನೀಡಿದ ನ್ಯಾಯಮಂಡಳಿಯು, ‘ಕಾನೂನು ಸಂಘರ್ಷವನ್ನು ಎದುರಿಸುತ್ತಿರುವ ಬಾಲಕನು ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿ ರಸ್ತೆ ಸಂಚಾರ ನಿಯಮಗಳನ್ನು ಅರಿಯಬೇಕು ಹಾಗೂ ‘ರಸ್ತೆ ಸುರಕ್ಷತೆ ಹಾಗೂ ಅದರ ಪರಿಹಾರೋಪಾಯಗಳು’ ಕುರಿತು 15 ದಿನದಲ್ಲಿ 300 ಪದಗಳ ಪ್ರಬಂಧ ಸಲ್ಲಿಸಬೇಕು’ ಎಂದು ಆದೇಶಿಸಿತ್ತು.

ಈ ಮಧ್ಯೆ ಪೊಲೀಸರು ಬಾಲಕನರ ವಿರುದ್ಧ ಐಪಿಸಿ ಸೆಕ್ಷನ್‌ 304 ಹಾಗೂ ಮೋಟಾರು ವಾಹನ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ. 

ಸ್ನೇಹಿತರ ಗುಂಪೊಂದು ಬೈಕ್‌ನಲ್ಲಿ ಕಲ್ಯಾಣಿ ನಗರದಲ್ಲಿ ತೆರಳುವಾಗ ಮಧ್ಯಾಹ್ನ 3.15ಕ್ಕೆ ಅಪಘಾತ ಸಂಭವಿಸಿತ್ತು. ಪೋಶೆ ಕಾರು ಡಿಕ್ಕಿ ರಭಸಕ್ಕೆ 24 ವರ್ಷ ವಯಸ್ಸಿನ ಅನಿಸ್ ಅವಾಧಿಯ, ಅಶ್ವಿನಿ ಕಾಸ್ಟಾ ಮೃತಪಟ್ಟಿದ್ದರು. ಇಬ್ಬರು ಮಧ್ಯಪ್ರದೇಶವರು.

ಅಪಘಾತದ ಗಂಭೀರತೆ ಹಿನ್ನೆಲೆಯಲ್ಲಿ ಬಾಲಕನನ್ನು ವಯಸ್ಕನೆಂದೇ ಪರಿಗಣಿಸಿ ವಿಚಾರಣೆಗೆ ಒಳಪಡಿಸಲು ಅನುಮತಿ ಕೋರಿ ಭಾನುವಾರವೇ ಮನವಿ ಸಲ್ಲಿಸಿದ್ದೆವು. ಆದರೆ, ಅದು ತಿರಸ್ಕೃತಗೊಂಡಿತು. ಈಗ ಸೆಷನ್ಸ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರು ತಿಳಿಸಿದರು.

ಬಾಲಕನ ರಕ್ತ ಪರೀಕ್ಷೆಯ ವರದಿ ಇನ್ನೂ ಬರಬೇಕಿದೆ. ಸ್ಥಳದ ಬಳಿ ಪಡೆಯಲಾದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳ ಪ್ರಕಾರ, ಅಪಘಾತದ ಸಂದರ್ಭದಲ್ಲಿ ಬಾಲಕ ಮದ್ಯ ಸೇವಿಸಿದ್ದ ಎಂಬುದು ಸ್ಪಷ್ಟವಾಗಿತ್ತು. ಪೂರಕವಾದ ಎಲ್ಲ ಅಂಶಗಳನ್ನು ನಾವು ಕೋರ್ಟ್‌ಗೆ ಹಾಜರುಪಡಿಸಲಿದ್ದೇವೆ ಎಂದು ಕಮಿಷನರ್ ತಿಳಿಸಿದರು.

ಬಾಲನ್ಯಾಯ ಕಾಯ್ದೆಯ ಸೆಕ್ಷನ್‌ 75 ಮತ್ತು 77ರ ಅನ್ವಯ ಬಾಲಕನ ತಂದೆಯ ವಿರುದ್ಧ ಮೊಕದ್ದಮೆ ದಾಖಲು ಮಾಡಿಕೊಂಡಿದ್ದು, ಈ ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ವರ್ಗಾಹಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT