ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ತಮಿಳುನಾಡಿಗೆ ನೀರು ಹರಿಸಲಾಗದು: ಕರ್ನಾಟಕ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ನಿರಾಕರಣೆ
Last Updated 27 ಸೆಪ್ಟೆಂಬರ್ 2021, 16:41 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದಾಗಿ ರಾಜ್ಯದ ಜಲಾಶಯಗಳಲ್ಲಿ ನೀರಿನ ಸಮರ್ಪಕ ಸಂಗ್ರಹವಿಲ್ಲದ್ದರಿಂದ, ತಮಿಳುನಾಡಿಗೆ ನೀರನ್ನು ಹರಿಸುವುದು ಅಸಾಧ್ಯ ಎಂದು ಕರ್ನಾಟಕ ಸ್ಪಷ್ಟಪಡಿಸಿದೆ.

ಸೋಮವಾರ ಇಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ ಪ್ರತಿನಿಧಿಗಳು, ಬಾಕಿ ಇರುವ ತಮಿಳುನಾಡಿನ ಪಾಲಿನ ನೀರನ್ನು ಹರಿಸಲಾಗದು ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ ತೀರ್ಪಿನ ಅನ್ವಯ ಹಂಚಿಕೆ ಮಾಡಲಾದ ಜುಲೈ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳ ಪಾಲಿನ ನೀರನ್ನು ಕೂಡಲೇ ಹರಿಸಬೇಕು ಎಂದು ತಮಿಳುನಾಡಿನ ಪ್ರತಿನಿಧಿಗಳು ಪಟ್ಟು ಹಿಡಿದರಾದರೂ, ಕರ್ನಾಟಕ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತು.

ರಾಜ್ಯದ ರೈತರ ಬೆಳೆಗಳಿಗೆ ಈಗ ನೀರಿನ ಅಗತ್ಯವಿದೆ. ಜನತೆಗೆ ಕುಡಿಯುವ ನೀರು ಪೂರೈಸಲೂ ಆದ್ಯತೆ ನೀಡಬೇಕಿದೆ. ಸಂಗ್ರಹವಾಗಿರುವ ಅತ್ಯಲ್ಪ ಪ್ರಮಾಣದ ನೀರನ್ನು ತಮಿಳುನಾಡಿಗೆ ಹರಿಸಿದರೆ ರಾಜ್ಯದಲ್ಲಿನ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ಸಂಕಷ್ಟಕ್ಕೆ ಈಡಾಗಲಿದ್ದಾರೆ ಎಂದು ತಿಳಿಸಲಾಯಿತು.

ಜಲಾಶಯಗಳಲ್ಲಿನ ನೀರಿನ ಸಂಗ್ರಹ, ಇದುವರೆಗೆ ಸುರಿದ ಮಳೆಯ ಪ್ರಮಾಣ, ಕುಡಿಯಲು ಮತ್ತು ಕೃಷಿಗೆ ಇರುವ ನೀರಿನ ಅಗತ್ಯ ಕುರಿತ ಸಮಗ್ರ ವರದಿಯನ್ನು ಸಲ್ಲಿಸುವಂತೆ ಕರ್ನಾಟಕಕ್ಕೆ ಸೂಚಿಸಲಾಯಿತು.

ಮೇಕೆದಾಟು ಯೋಜನೆಗೆ ತಮಿಳುನಾಡು ಮತ್ತು ಪುದುಚೇರಿ ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ಕರ್ನಾಟಕವು ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಎಷ್ಟು ಪ್ರಮಾಣದ ನೀರು ಹರಿಸಬೇಕು ಎಂಬ ವಿಷಯದ ಕುರಿತು ಚರ್ಚೆ ನಡೆಸಿದ್ದರಿಂದ ಮೇಕೆದಾಟು ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಲಾಗಿಲ್ಲ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ. ಹಾಲ್ದಾರ್ ಸಭೆಯ ನಂತರ ಹೇಳಿದರು.

ಕರ್ನಾಟಕವು ನೀರಿನ ಸಂಗ್ರಹ ಮತ್ತು ಅಗತ್ಯತೆ ಕುರಿತ ವರದಿ ಸಲ್ಲಿಸಿದ ನಂತರ ಅಕ್ಟೋಬರ್‌ 7ರೊಳಗೆ ಪ್ರಾಧಿಕಾರದ ಮುಂದಿನ ಸಭೆಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ತಮಿಳುನಾಡಿಗೆ ಎಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕು ಎಂಬುದನ್ನು ಸಭೆಯಲ್ಲಿ ಸೂಚಿಸಲಾಗುತ್ತದೆ ಎಂದು ಅವರು ವಿವರಿಸಿದರು.

ನೀರು ಹಂಚಿಕೆ ಮಾಡಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಜೂನ್‌ನಿಂದ ಆಗಸ್ಟ್‌ ಅಂತ್ಯದವರೆಗೆ ಕರ್ನಾಟಕವು 86.83 ಟಿಎಂಸಿ ಅಡಿ ನೀರನ್ನು ತಮಿಳುನಾಡಿನತ್ತ ಹರಿಸಬೇಕಿತ್ತು. ಮಳೆಯ ಕೊರತೆಯಿಂದಾಗಿ ಈ ವರ್ಷ 57.04 ಟಿಎಂಸಿ ಅಡಿ ನೀರನ್ನು ಮಾತ್ರ ಹರಿಸಲಾಗಿದೆ. ಉತ್ತಮ ಮಳೆ ಸುರಿದಲ್ಲಿ ನೀರು ಹರಿಸಲಾಗುವುದು ಎಂದು ಸೆಪ್ಟೆಂಬರ್‌ ಮೊದಲ ವಾರ ನಡೆದಿದ್ದ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕ ತಿಳಿಸಿತ್ತು.

ಆದರೆ, ಸೆಪ್ಟೆಂಬರ್‌ನಲ್ಲೂ ನಿರೀಕ್ಷಿತ ಮಳೆ ಸುರಿಯದ್ದರಿಂದ ನೀರಿನ ಸಂಗ್ರಹ ಕಡಿಮೆಯಾಗಿದೆ ಎಂದು ಸೋಮವಾರದ ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT