ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರುಗಳ ಬಗ್ಗೆ ಪುರಾವೆ ಒದಗಿಸಿ: ವಿಪಕ್ಷಗಳಿಗೆ CEC ರಾಜೀವ್ ಕುಮಾರ್ ಸವಾಲು

Published 3 ಜೂನ್ 2024, 16:32 IST
Last Updated 3 ಜೂನ್ 2024, 16:32 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವ ಪ್ರಯತ್ನಗಳು ನಡೆದಿವೆ ಎಂದು ವಿರೋಧ ಪಕ್ಷಗಳು ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ದೂರುಗಳಿಗೆ ಸಂಬಂಧಿಸಿದಂತೆ ಪುರಾವೆಗಳಿದ್ದರೆ ಒದಗಿಸುವಂತೆ ಸವಾಲು ಹಾಕಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾಧಿಕಾರಿಗಳ ಮೇಲೆ ಪ್ರಭಾವ ಬೀರಲಾಗಿದೆ ಎಂದು ಆರೋಪಿಸುತ್ತಿರುವವರು, ಆ ಜಿಲ್ಲಾಧಿಕಾರಿಗಳ ಹೆಸರನ್ನು ಹೇಳಿದರೆ ನಮಗೆ ಶಿಕ್ಷಿಸಲು ಸಾಧ್ಯವಾಗುತ್ತದೆ. ಮತ ಎಣಿಕೆ ಪ್ರಕ್ರಿಯೆ ಆರಂಭವಾಗುವ ಮುನ್ನ ನಮ್ಮ ಜತೆ ಮಾಹಿತಿ ಹಂಚಿಕೊಳ್ಳಬೇಕು. ವದಂತಿಯನ್ನು ಹರಡಿ ಎಲ್ಲರನ್ನೂ ಅನುಮಾನದಿಂದ ನೋಡುವ ಹಾಗೆ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.

ಗೃಹ ಸಚಿವ ಅಮಿತ್ ಶಾ ಅವರು ಚುನಾವಣಾಧಿಕಾರಿಯೂ ಆಗಿರುವ 150 ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಮಾಡಿದ ಆರೋಪವನ್ನು ಉಲ್ಲೇಖಿಸಿದ ಅವರು, ‘ನಿರ್ದಿಷ್ಟ ದೂರುಗಳ ಮೇಲೆ ಕ್ರಮ ಕೈಗೊಳ್ಳಲು ಪುರಾವೆಗಳನ್ನು ಒದಗಿಸಿ’ ಎಂದರು.

ಚುನಾವಣೆ ಅವಧಿಯಲ್ಲಿ ಮತದಾರರ ಪಟ್ಟಿ, ಇವಿಎಂಗಳಿಗೆ ಸಂಬಂಧಿಸಿದಂತೆ ಹರಡಿದ ‘ಸುಳ್ಳು ನಿರೂಪಣೆ’ಗಳನ್ನು ಸಮರ್ಥವಾಗಿ ಎದುರಿಸಲು ಆಯೋಗಕ್ಕೆ ಸಾಧ್ಯವಾಗಲಿಲ್ಲ ಎಂಬುದನ್ನು ಅವರು ಒಪ್ಪಿಕೊಂಡರು.

‘ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ವಿದೇಶದಿಂದ ನಡೆಸುವ ಯಾವುದೇ ರೀತಿಯ ಪ್ರಯತ್ನಗಳನ್ನು ಎದುರಿಸಲು ಆಯೋಗವು ಎಲ್ಲ ಸಿದ್ಧತೆಗಳನ್ನು ಮಾಡಿತ್ತು. ಆದರೆ ನಮಗೆ ದೇಶದ ಒಳಗಿನಿಂದಲೇ ಆರೋಪಗಳನ್ನು ಕೇಳಬೇಕಾಗಿ ಬಂತು. ಇದನ್ನು ಎದುರಿಸಲು (ಸುಳ್ಳು ನಿರೂಪಣೆ) ನಾವು ಇನ್ನಷ್ಟು ಸಿದ್ಧರಿರಬೇಕು’ ಎಂದರು.

ಮತ ಎಣಿಕೆಗೆ ಸಂಬಂಧಿಸಿದಂತೆ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಮುಂದಿಟ್ಟಿರುವ ಎಲ್ಲ ಬೇಡಿಕೆಗಳನ್ನು ಸ್ವೀಕರಿಸಿದ್ದೇವೆ ಎಂದು ತಿಳಿಸಿದರು. ಚುನಾವಣಾ ಆಯುಕ್ತರಾದ ಜ್ಞಾನೇಶ್‌ ಕುಮಾರ್‌ ಮತ್ತು ಎಸ್‌.ಎಸ್‌.ಸಂಧು ಅವರೂ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT