ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್: ಯಾವ ಪಕ್ಷಕ್ಕೆ ಯಾರು ಎಷ್ಟು ದೇಣಿಗೆ ಕೊಟ್ಟರು? ಮಾಹಿತಿ ಇಲ್ಲಿದೆ

Published 14 ಮಾರ್ಚ್ 2024, 16:22 IST
Last Updated 14 ಮಾರ್ಚ್ 2024, 16:22 IST
ಅಕ್ಷರ ಗಾತ್ರ

ನವದೆಹಲಿ: ವಿವಿಧ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ನೀಡಲಾದ ಚುನಾವಣಾ ಬಾಂಡ್ ವಿವರಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಎಸ್‌ಬಿಐ ಸಲ್ಲಿಸಿದ್ದು, ಇದನ್ನು ಸುಪ್ರೀಂ ಕೋರ್ಟ್‌ನ ಆದೇಶದಂತೆ ಆಯೋಗವು ತನ್ನ ಅಂತರ್ಜಾಲ ಪುಟದಲ್ಲಿ (www.eci.gov.in/disclosure-of-electoral-bonds) ಪ್ರಕಟಿಸಿದೆ. ಇದರಲ್ಲಿ ದೇಶದ ಅತಿ ದೊಡ್ಡ ರಾಜಕೀಯ ಪಕ್ಷ ಬಿಜೆಪಿಗೆ ಪ್ರಮುಖ ಕಂಪನಿಗಳು ಟ್ರಸ್ಟ್‌ ಮೂಲಕ ದೇಣಿಗೆ ಸಂದಾಯವಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಪ್ರೂಡೆಂಟ್ ಎಲೆಕ್ಟ್ರಾಲ್‌ ಟ್ರಸ್ಟ್‌ 2013ರಿಂದ ₹2,255 ಕೋಟಿಯಷ್ಟು ಮೊತ್ತವನ್ನು ಬಿಜೆಪಿಗೆ ನೀಡಿದೆ. ಇದರ ಪಾಲು ಶೇ 75ರಷ್ಟು. ಇದು ಕಾಂಗ್ರೆಸ್‌ಗೆ ಸಲ್ಲಿಕೆಯಾದ ₹167 ಕೋಟಿಗೆ ಹೋಲಿಸಿದರೆ ಹತ್ತು ಪಟ್ಟು ಹೆಚ್ಚು.

2013ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಚುನಾವಣಾ ಬಾಂಡ್ ಟ್ರಸ್ಟ್‌ ಪರಿಚಯಿಸಿ, ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗೆ ತೆರಿಗೆ ವಿನಾಯಿತಿ ಘೋಷಿಸಿತ್ತು. 2018ರಿಂದ 2023ರವರೆಗಿನ ಪಟ್ಟಿಯನ್ನು ಪರಿಷ್ಕರಿಸಿ ಬಹುದೊಡ್ಡ ಕಂಪನಿಗಳು ರಾಜಕೀಯ ಪಕ್ಷಗಳಿಗೆ ನೀಡಿರುವ ದೇಣಿಗೆಯ ಪ್ರಮಾಣದ ಪಟ್ಟಿ ಮಾಡಿರುವುದಾಗಿ ರಾಯಿಟರ್ಸ್ ಹೇಳಿದೆ.

ಭಾರ್ತಿ ಏರ್‌ಟೆಲ್‌ ಕಂಪನಿಯು 2022ರ ಜ. 13ರಂದು ₹25 ಕೋಟಿಯನ್ನು ಹಾಗೂ 2021ರ ಮಾರ್ಚ್ 25ರಂದು ₹15 ಕೋಟಿ ನೀಡಿದೆ. ಈ ಮೊತ್ತವನ್ನು ಬಿಜೆಪಿಗೆ ಚೆಕ್‌ ರೂಪದಲ್ಲಿ ಟ್ರಸ್ಟ್‌ ನೀಡಿದೆ.

ಕಳೆದು 2 ವರ್ಷಗಳಲ್ಲಿ ಡಿಎಲ್‌ಎಫ್‌ ಸಮೂಹ ₹20.1 ಕೋಟಿ, ಆರ್ಸಲ್‌ ಮಿತ್ತಲ್‌ ₹20 ಕೋಟಿ ಹಾಗೂ ಜಿಎಂಆರ್‌ ಸಮೂಹದಿಂದ ₹20 ಕೋಟಿ ಬಿಜೆಪಿಗೆ ಸಲ್ಲಿಕೆಯಾಗಿದೆ. ಹೀಗೆ ಒಟ್ಟು ಪ್ರೂಡೆಂಟ್‌ನಿಂದ ಈ ಅವಧಿಯಲ್ಲಿ ಬಿಜೆಪಿಗೆ ₹220 ಕೋಟಿ ಸಲ್ಲಿಕೆಯಾಗಿದೆ ಎಂದು ವರದಿಯಾಗಿದೆ.

ಉಕ್ಕು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಆರ್ಸಲ್ ಮಿತ್ತಲ್ ನಿಪ್ಪಾನ್ ಸ್ಟೀಲ್‌, ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್‌, ನಿರ್ಮಾಣ ಕಂಪನಿ ಜಿಎಂಆರ್‌ ಹಾಗೂ ಇಂಧನ ಉತ್ಪಾದನಾ ಕಂಪನಿ ಎಸ್ಸಾರ್‌ ಪಕ್ಷಕ್ಕೆ ನೇರವಾಗಿ ಹಣ ನೀಡಿಲ್ಲ. ಹೀಗಾಗಿ ಇವುಗಳ ಹೆಸರು ದಾನಿಗಳ ಪಟ್ಟಿಯಲ್ಲಿಲ್ಲ. ಆದರೆ ಈ ಕಂಪನಿಗಳು ನೀಡಿದ ದೇಣಿಗೆಯನ್ನು ಪ್ರೂಡೆಂಟ್‌ ಟ್ರಸ್ಟ್‌ ವಿತರಿಸಿದೆ. 

‘ಪ್ರೂಡೆಂಟ್ ಸಂಸ್ಥೆಯ ಮಾರ್ಗಸೂಚಿ ಅನ್ವಯ ನೀಡಿರುವ ದೇಣಿಗೆ ವಿತರಣೆಯಾಗಿದೆ. ಆದರೆ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ’ ಎಂದು ದೇಣಿಗೆ ನೀಡಿರುವ ಕುರಿತು ಜಿಎಂಆರ್‌ ಹೇಳಿರುವುದಾಗಿ ವರದಿಯಾಗಿದೆ.

ದೇಶದಲ್ಲಿರುವ ಪ್ರಮುಖ 18 ಎಲೆಕ್ಟ್ರಾಲ್‌ ಟ್ರಸ್ಟ್‌ಗಳಲ್ಲಿ ಪ್ರೂಡೆಂಟ್ ಕೂಡಾ ಒಂದು. ಹಾಗೆಯೇ ಒಂದಕ್ಕಿಂತ ಹೆಚ್ಚು ಕಾರ್ಪೊರೇಟ್ ಕಂಪನಿಗಳಿಂದ ದೇಣಿಗೆ ಪಡೆಯುವ ಹಕ್ಕು ಹೊಂದಿರುವ 4 ಪ್ರಮುಖ ಟ್ರಸ್ಟ್‌ಗಳಲ್ಲಿ ಪ್ರೂಡೆಂಟ್ ಕೂಡಾ ಒಂದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT