ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಗಳ ಮೇಲೆ ರಾಜಕಾರಣಿಗಳ ಒಡೆತನ ನಿಯಂತ್ರಣಕ್ಕೆ ಕಾನೂನು ರೂಪಿಸಿ: ಶಶಿ ತರೂರ್

Published 9 ಜನವರಿ 2024, 4:46 IST
Last Updated 9 ಜನವರಿ 2024, 4:46 IST
ಅಕ್ಷರ ಗಾತ್ರ

ತಿರುವನಂತಪುರಂ: ದೇಶದಲ್ಲಿ ಮುಕ್ತ ಹಾಗೂ ಜವಾಬ್ದಾರಿಯುತ ಪತ್ರಿಕೋದ್ಯಮವನ್ನು ಖಾತ್ರಿಪಡಿಸುವ ಸಲುವಾಗಿ, ಸುದ್ದಿ ಸಂಸ್ಥೆಗಳ ಮೇಲೆ ರಾಜಕಾರಣಿಗಳು ಅಥವಾ ಉದ್ಯಮಿಗಳು ಹೊಂದಿರುವ ಮಾಲೀಕತ್ವವನ್ನು ನಿಯಂತ್ರಿಸುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕು ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಸಲಹೆ ನೀಡಿದ್ದಾರೆ.

ಎನ್‌.ರಾಮಚಂದ್ರನ್‌ ಫೌಂಡೇಷನ್‌ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ತರೂರ್, ಖಾಸಗಿ ವ್ಯಕ್ತಿಗಳು ಮಾಧ್ಯಮಗಳ ಮೇಲೆ ಹೊಂದಿರುವ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ನಿಬಂಧನೆಗಳು ಇಲ್ಲದ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದಿದ್ದಾರೆ.

ತಿರುವನಂತಪುರಂ ಕ್ಷೇತ್ರದ ಸಂಸದರೂ ಆಗಿರುವ ತರೂರ್‌, 'ಒಬ್ಬನೇ ಉದ್ಯಮಿ ಅಥವಾ ರಾಜಕಾರಣಿ ಹಲವು ಸುದ್ದಿ ಸಂಸ್ಥೆಗಳ ಮಾಲೀಕತ್ವ ಹೊಂದುವುದರ ಮೇಲೆ ಸರ್ಕಾರವು ಕಾನೂನು ಮತ್ತು ನಿಬಂಧನೆಗಳನ್ನು ಜಾರಿಗೊಳಿಸಬೇಕು. ಆ ಮೂಲಕ, ದೇಶದಲ್ಲಿ ಸಮರ್ಥ ಮತ್ತು ಮುಕ್ತ ಪತ್ರಿಕೋದ್ಯಮಕ್ಕೆ ಅವಕಾಶ ಮಾಡಿಕೊಡಬೇಕು' ಎಂದು ಪ್ರತಿಪಾದಿಸಿದ್ದಾರೆ.

ದೇಶದಲ್ಲಿನ ಮಾಧ್ಯಮಗಳಲ್ಲಿ, ಸತ್ಯದ ಬಗ್ಗೆ ತಿರಸ್ಕಾರ ಹಾಗೂ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇಚ್ಛಿಸದ ಧೋರಣೆಗಳು ಹೆಚ್ಚಾಗಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳಲ್ಲಿ ಪ್ರಕಟವಾಗುವ ಸುಳ್ಳು ವರದಿಗಳ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದರೂ, ನ್ಯಾಯಾಲಯಗಳಲ್ಲಿ ವಿಚಾರಣೆಗೆ ದಿನಾಂಕ ನಿಗದಿಯಾಗುವುದರೊಳಗೆ ಚಾರಿತ್ರ್ಯ ಹರಣವಾಗಿರುತ್ತದೆ ಎಂದು ಕಳವಳ ವ್ಯಕ್ತಪಡಿಸಿರುವ ತರೂರ್‌, ಮಾಧ್ಯಮಗಳ ಮೇಲಿನ ವಿಶ್ವಾಸ ಕುಸಿಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಪ್ರಜಾಪ್ರಭುತ್ವದ ಉಳಿವಿಗೆ ಮುಕ್ತ ಮಾಧ್ಯಮ ವ್ಯವಸ್ಥೆಯೇ ಆಧಾರವಾಗಿದೆ. ಹಾಗಾಗಿ, ಇದರ ಸುಧಾರಣೆಯಾಗಬೇಕಿದೆ ಎಂದಿರುವ ಅವರು, 'ಸತ್ಯ, ಅಭಿಪ್ರಾಯ ಮತ್ತು ಊಹಾಪೋಹದ ನಡುವೆ ಇರುವ ವ್ಯತ್ಯಾಸಗಳು ಅಪ್ರಸ್ತುತವಾಗಲು ಬಿಡಬಾರದು. ಇದನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದು ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT