ಮುಂಬೈ: ದಕ್ಷಿಣ ಮುಂಬೈನ ಮರೈನ್ ಡ್ರೈವ್ ಪ್ರದೇಶದ ಸಾವಿತ್ರಿಭಾಯಿ ಫುಲೆ ಸರ್ಕಾರಿ ಮಹಿಳಾ ಹಾಸ್ಟೆಲ್‌ನಲ್ಲಿ 18 ವರ್ಷದ ಯುವತಿಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಭೀಕರವಾಗಿ ಕೊಲೆಗೈದಿದ್ದ ಘಟನೆ ಕಳೆದ ಮಂಗಳವಾರ ನಡೆದಿತ್ತು.
ಈ ಘಟನೆ ಬಗ್ಗೆ ಮೃತ ಯುವತಿಯ ಹಾಸ್ಟೆಲ್ ಸಹಪಾಠಿಯೊಬ್ಬರು ಮಹಾರಾಷ್ಟ್ರ ಸರ್ಕಾರದ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆದು ಸರ್ಕಾರಿ ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ಬೆಳಕು ಚೆಲ್ಲಿದ್ದಾರೆ.
‘ಕೊಲೆ ಆರೋಪಿ ಸೇರಿದಂತೆ ಕೆಲವು ಪುರುಷ ಸಿಬ್ಬಂದಿ ಹಾಸ್ಟೆಲ್ ಆವರಣದಲ್ಲಿಯೇ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದರು. ಇದರ ಬಗ್ಗೆ ಗೊತ್ತಿದ್ದರೂ ಸಂಬಂಧಿಸಿದವರು ಏನೂ ಕ್ರಮ ಕೈಗೊಂಡಿರಲಿಲ್ಲ. ಏಪ್ರಿಲ್ 30ರಂದೇ ಹಾಸ್ಟೆಲ್ ಅಡುಗೆ ಕೋಣೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಊಟ, ತಿಂಡಿಗಾಗಿ ರಾತ್ರಿಯೂ ಹೊರಗಡೆ ಹೋಗಬೇಕಿತ್ತು’ ಎಂದು ಆರೋಪಿಸಿದ್ದಾರೆ.
ಹಾಸ್ಟೆಲ್‌ನ ಕೋಣೆಗಳು ಶಿಥಿಲಾವಸ್ಥೆಯಲ್ಲಿದ್ದರೂ ಸಂಬಂಧಿಸಿದವರು ನಿರ್ಲಕ್ಷ್ಯವಹಿಸಿದ್ದರು. ಪುರುಷ ಸಿಬ್ಬಂದಿಗಳನ್ನು ಮಹಿಳೆಯರ ಕೊಠಡಿಗೆ ಅನುಮತಿಯಿಲ್ಲದೇ ಬಿಡಲಾಗುತ್ತಿತ್ತು ಎಂದು ಯುವತಿ ಪತ್ರದಲ್ಲಿ ಆರೋಪಿಸಿರುವುದಾಗಿ ನ್ಯೂಸ್ 18 ವೆಬ್‌ಸೈಟ್ ವರದಿ ಮಾಡಿದೆ. ಈ ಘಟನೆ ನಂತರ ಮಹಿಳಾ ಹಾಸ್ಟೆಲ್ ಸುರಕ್ಷತೆಯ ಪ್ರಶ್ನೆ ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಎದ್ದಿದೆ.
ಹಾಸ್ಟೆಲ್‌ನ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಉತ್ತರಪ್ರದೇಶ ಪ್ರತಾಪ್‌ಗಢ ಮೂಲದ ಓಂ ಪ್ರಕಾಶ್ ಕನೋಜಿಯಾ (32) ಅತ್ಯಾಚಾರ, ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು ಆತ ಘಟನೆ ನಂತರ ಚಾರ್ನಿ ರೋಡ್ ನಿಲ್ದಾಣದ ಬಳಿ ರೈಲು ಬರುವಾಗ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.
ಸೋಮವಾರ ರಾತ್ರಿ ಯುವತಿ ತಂಗಿದ್ದ ಹಾಸ್ಟೆಲ್‌ನ 4ನೇ ಮಹಡಿಯ ಕೋಣೆಗೆ ಹಾಸ್ಟೆಲ್‌ನ ಹಿಂಬದಿಯ ಪೈಪ್‌ಗಳನ್ನು ಏರಿ ಓಂ ಪ್ರಕಾಶ್ ಹೋಗಿದ್ದ. ಯುವತಿಯನ್ನು ಅತ್ಯಾಚಾರ ಮಾಡಿ ಬಳಿಕ ಕೊಲೆ ಮಾಡಿ ಪರಾರಿಯಾಗಿದ್ದ. ಕೋಣೆಯಲ್ಲಿ ಯುವತಿಯ ಮೃತದೇಹ ರಕ್ತಸಿಕ್ತವಾಗಿ, ನಗ್ನವಾಗಿ ಬಿದ್ದಿತ್ತು ಎಂದು ಮುಂಬೈ ಪೊಲೀಸರು ಮಂಗಳವಾರ ತಿಳಿಸಿದ್ದರು
ಕೊಲೆಯಾದ ಯುವತಿ ಮಹಾರಾಷ್ಟ್ರದ ಅಕೊಲಾ ಮೂಲದವರಾಗಿದ್ದರು. ಖಾಸಗಿ ಕಾಲೇಜಿನಲ್ಲಿ ಪಾಲಿಟೆಕ್ನಿಕ್ ಕೋರ್ಸ್ ಓದುತ್ತಾ ಅರೆಕಾಲಿಕ ಕೆಲಸ ಮಾಡುತ್ತಿದ್ದರು.
ಈ ಯುವತಿ ಪಾಲಕರಿಗೆ ಏಕೈಕ ಪುತ್ರಿಯಾಗಿದ್ದರು. ಸುದ್ದಿ ತಿಳಿದು ಹಾಸ್ಟೆಲ್ ಬಳಿ ಬಂದು ಕಣ್ಣೀರು ಹಾಕಿದ್ದ ಅವರು, ಹಾಸ್ಟೆಲ್ ಸಿಬ್ಬಂದಿ ನಮ್ಮ ಮಗಳನ್ನು 4ನೇ ಮಹಡಿಯ ಕೋಣೆಯಲ್ಲಿ ಏಕಾಂಗಿಯಾಗಿ ಇಟ್ಟಿದ್ದು ಏಕೆ? ಹಾಸ್ಟೆಲ್‌ನವರು ಕಿರುಕುಳ ಕೊಟ್ಟಿದ್ದಾರೆ, ಅವರನ್ನು ಬಂಧಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ಕುರಿತು ಆಘಾತ ವ್ಯಕ್ತಪಡಿಸಿರುವ ಸಿಎಂ ಏಕನಾಥ ಶಿಂದೆ ಅವರು, ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದು, ಹಾಸ್ಟೆಲ್ ಸಿಬ್ಬಂದಿ ಕೈವಾಡ ಏನಾದರೂ ಇದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ವಿರೋಧ ಪಕ್ಷಗಳು ಮುಂಬೈನಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ರಕ್ಷಣೆ ಕೊಡಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.