ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ಅಗತ್ಯವಿಲ್ಲ: ಸಚಿವ ಭೂಪೇಂದ್ರ

ಕಾಡುಹಂದಿಯನ್ನು ‘ಉಪದ್ರವಿ’ ಎಂದು ಘೋಷಿಸಲು ಸಿಡಬ್ಲ್ಯುಡಬ್ಲ್ಯುಗಳಿಗೆ ಅಧಿಕಾರವಿದೆ
Published 22 ಫೆಬ್ರುವರಿ 2024, 13:53 IST
Last Updated 22 ಫೆಬ್ರುವರಿ 2024, 13:53 IST
ಅಕ್ಷರ ಗಾತ್ರ

ವಯನಾಡು: ವನ್ಯಜೀವಿ ಸಂರಕ್ಷಣಾ ಕಾಯ್ದೆ– 1972ರ ಸೆಕ್ಷನ್ 11ರ ಅಡಿ ಕಾಡುಹಂದಿಗಳನ್ನು ‘ಉಪದ್ರವಿ’ ಪ್ರಾಣಿ ಎಂದು ಘೋಷಿಸಲು ಮುಖ್ಯ ವನ್ಯಜೀವಿ ರಕ್ಷಕರಿಗೆ (ಸಿಡಬ್ಲ್ಯುಡಬ್ಲ್ಯು) ಅಧಿಕಾರವಿದೆ. ಅದಕ್ಕಾಗಿ ಕಾಯ್ದೆಯಲ್ಲಿ ತಿದ್ದುಪಡಿ ತರುವ ಅಗತ್ಯವಿಲ್ಲ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ವಾಯುಗುಣ ಬದಲಾವಣೆ ಸಚಿವ ಭೂಪೇಂದ್ರ ಯಾದವ್‌ ಅವರು ಗುರುವಾರ ಹೇಳಿದರು.

ಕೇರಳದಲ್ಲಿ ಜನರ ಮೇಲೆ ವನ್ಯಜೀವಿಗಳು ದಾಳಿ ನಡೆಸಿದ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಯಾದವ್‌ ಅವರು ಬುಧವಾರ ವಯನಾಡಿಗೆ ಭೇಟಿ ನೀಡಿದರು. ಅಲ್ಲಿಯ ಸ್ಥಳೀಯ ಆಡಳಿತ ಮತ್ತು ಅರಣ್ಯಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮಗಳ ಎದುರು ಹೀಗೆ ಹೇಳಿದರು.

ಮಾನವ ಮತ್ತು ವನ್ಯಜೀವಿ ನಡುವಿನ ಸಂಘರ್ಷ ತಡೆಯುವ ಸಲುವಾಗಿ ವನ್ಯಜೀವಿ ಸಂರಕ್ಷಣೆ ಕಾಯ್ದೆಗೆ ತಿದ್ದುಪಡಿ ತರುವಂತೆ ಕೇರಳ ವಿಧಾನಸಭೆಯು ಈಚೆಗಷ್ಟೇ ನಿರ್ಣಯ ಕೈಗೊಂಡಿದೆ. ಕಾಡಿನಿಂದ ಹೊರಬಂದು ಮಾನವ ವಸತಿ ಪ್ರದೇಶಗಳಲ್ಲಿ ತಮ್ಮ ಸಂತತಿ ಹೆಚ್ಚಿಸಿಕೊಳ್ಳುತ್ತಿರುವ ಕಾಡುಹಂದಿಗಳನ್ನು ‘ಉಪದ್ರವಿ’ (ಬೆಳೆ, ಮಾನವ ಮತ್ತು ಸಾಕು ಪ್ರಾಣಿಗಳಿಗೆ ಅಪಾಯ ತಂದೊಡ್ಡುವ ಪ್ರಾಣಿಗಳು) ಜೀವಿಗಳು ಎಂದು ಘೋಷಿಸುವಂತೆಯೂ ನಿರ್ಣಯದಲ್ಲಿ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವರ ಹೇಳಿಕೆ ಮಹತ್ವ ಪಡೆದಿದೆ. 

‘ಸಮಸ್ಯೆ ಉಂಟುಮಾಡುವ ಪ್ರಾಣಿಗಳನ್ನು ಬಲೆಗೆ ಬೀಳಿಸಲು, ಸೆರೆಹಿಡಿಯಲು ಮತ್ತು ಕೊಲ್ಲಲು ಸಿಡಬ್ಲ್ಯುಡಬ್ಲ್ಯುಗೆ ಅಧಿಕಾರವಿದೆ. ಆದರೆ, ಈ ಕೆಲಸವನ್ನು ಜಾಗರೂಕವಾಗಿ ನಿರ್ವಹಿಸಿ, ಕೃಷಿ ಸಮುದಾಯ ಮತ್ತು ಅವರ ಬೆಳೆಗಳನ್ನು ರಕ್ಷಿಸುವಂತೆ ನಾನು ಕೇರಳ ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದರು.

‘ವನ್ಯಜೀವಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ನೀಡುವ ಪರಿಹಾರವನ್ನು ₹5 ಲಕ್ಷದಿಂದ ₹10 ಲಕ್ಷಕ್ಕೆ ಏರಿಸಲಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ರಾಜ್ಯ ಸರ್ಕಾರವು ಕೂಡಲೇ ಪರಿಹಾರ ಮೊತ್ತ ನೀಡಬೇಕು ಮತ್ತು ಇದು ಪಾರದರ್ಶಕವಾಗಿ ನಡೆಯಬೇಕು. ರಾಜ್ಯ ಸರ್ಕಾರವು ವಾರ್ಷಿಕ ಕಾರ್ಯಾಚರಣೆ ಯೋಜನೆಯನ್ನು (ಎಪಿಒ) ಕೇಂದ್ರ ಸರ್ಕಾರದ ಮುಂದಿಟ್ಟಾಗಲೆಲ್ಲಾ ನಾವು ಹಣ ಬಿಡುಗಡೆ ಮಾಡಿದ್ದೇವೆ. 2023–24ರ ಆರ್ಥಿಕ ಸಾಲಿನಲ್ಲಿ ಹಲವಾರು ಯೋಜನೆಗಳ ಅಡಿ ಕೇರಳಕ್ಕೆ ಕೇಂದ್ರವು ₹15.82 ಕೋಟಿ ಹಣ ನೀಡಿದೆ’ ಎಂದರು. 

ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಆನೆಗಳ ಓಡಾಟಕ್ಕೆ ಅನುಕೂಲವಾಗುವಂಥ ಕಾರಿಡಾರ್‌ ನಿರ್ವಹಣಾ ಯೋಜನೆಗೆ ಭಾರತೀಯ ವನ್ಯಜೀವಿ ಸಂಸ್ಥೆಯು (ಡಬ್ಲ್ಯುಐಐ) ಸಹಕಾರ ನೀಡಲಿದೆ ಎಂದರು.

ಬಳಿಕ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ವನ್ಯಜೀವಿಗಳ ದಾಳಿಗೆ ಜನರು ಪ್ರಾಣ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ. ಜನರ ಜೀವ ಉಳಿಸುವಂಥ ಮತ್ತು ವನ್ಯಜೀವಿಗಳಿಗೂ ಸಮಸ್ಯೆಯಾಗದಂಥ ಕ್ರಮಗಳನ್ನು ಕೈಗೊಳ್ಳಲು ನಾವು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ’ ಎಂದು ಬರೆದಿದ್ದಾರೆ.

ಪ್ರತ್ಯೇಕ ಪ್ರಕರಣಗಳಲ್ಲಿ ಆನೆ ದಾಳಿಯಿಂದ ಮೃತಪಟ್ಟ ಅಜೀಶ್‌ ಮತ್ತು ಪೌಲ್‌ ಹಾಗೂ ಕಳೆದ ವರ್ಷ ಡಿಸೆಂಬರ್‌ನಲ್ಲಿ ಹುಲಿ ದಾಳಿಯಿಂದ ಮೃತಪಟ್ಟ ಪ್ರಜೀಶ್‌ ಅವರ ಕುಟುಂಬಗಳಿಗೆ ಭೇಟಿ ನೀಡಿ ಅವರು ಸಾಂತ್ವನ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT