ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ತಡೆಹಿಡಿಯಲು ಸರ್ಕಾರಕ್ಕೆ ಸಿಐಸಿ ಅನುಮತಿ

ಆಪರೇಷನ್‌ ಬ್ಲೂಸ್ಟಾರ್‌: ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯಿಸಿದ ಆಯೋಗ
Last Updated 6 ನವೆಂಬರ್ 2020, 10:55 IST
ಅಕ್ಷರ ಗಾತ್ರ

ನವದೆಹಲಿ: ಉಗ್ರಗಾಮಿಗಳನ್ನು ತೆರವುಗೊಳಿಸಲು ಪಂಜಾಬ್‌ನ ಅಮೃತ್‌ಸರದ ‘ಸ್ವರ್ಣ ಮಂದಿರ’ದ ಮೇಲೆ 1984ರಲ್ಲಿ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳು ವಶಪಡಿಸಿಕೊಂಡಿದ್ದ ಅಮೂಲ್ಯವಾದ ಪರಿಕರಗಳು ಮತ್ತು ದಾಖಲೆಗಳ ಪಟ್ಟಿಯನ್ನು ತಡೆ ಹಿಡಿಯಲು ಕೇಂದ್ರ ಮಾಹಿತಿ ಆಯೋಗ, ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡಿದೆ.

‘ಆಪರೇಷನ್‌ ಬ್ಲೂಸ್ಟಾರ್‌’ ಹೆಸರಿನಲ್ಲಿ ನಡೆದ ಕಾರ್ಯಾಚರಣೆ ವೇಳೆ ಕೆಲವು ಸೇನಾ ಸಿಬ್ಬಂದಿ ಸೇರಿ 576 ಮಂದಿ ಮೃತಪಟ್ಟಿದ್ದರು.

ಕಾರ್ಯಾಚರಣೆ ವೇಳೆ ಸ್ವಾಧೀನಕ್ಕೆ ಪಡೆದ ವಸ್ತುಗಳ ಪಟ್ಟಿ, ಈಗ ಅವು ಯಾವಸ್ಥಿತಿಯಲ್ಲಿವೆ, ಕಾರ್ಯಾಚರಣೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಕಾರ್ಯಾಚರಣೆ ವೇಳೆ ಮೃತಪಟ್ಟ ವ್ಯಕ್ತಿಗಳ ಪಟ್ಟಿಯನ್ನು ನೀಡುವಂತೆ ಆರ್‌ಟಿಐ ಕಾರ್ಯಕರ್ತ ಗುರ್ವೀಂದರ್ ಸಿಂಗ್‌ ಛಡ್ಡಾ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗೆ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವಾಲಯವು, ಕಾರ್ಯಾಚರಣೆಯ ನಿರ್ದಿಷ್ಟ ವಿವರಗಳನ್ನು ತಿಳಿಸಿರಲಿಲ್ಲ. ಆದರೆ, ‘ಸುಮಾರು 4000 ದಾಖಲೆಗಳು/ ಪುಸ್ತಕಗಳು/ ಕಡತಗಳು, ಚಿನ್ನಾಭರಣಗಳು, ಅಮೂಲ್ಯ ಹರಳುಗಳು, ನೋಟು, ನಾಣ್ಯಗಳು ಮುಂತಾದ ವಸ್ತುಗಳನ್ನು ವಶಪಡಿಸಿಕೊಂಡಿತ್ತು. ಈ ವಸ್ತು ಮತ್ತು ದಾಖಲೆಗಳನ್ನು ಒಂದೊ ಪಂಜಾಬ್‌ ಸರ್ಕಾರ ಇಲ್ಲವೇ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಗೆ (ಎಸ್‌ಜಿಪಿಸಿ) ಹಸ್ತಾಂತರಿಸಲಾಗಿತ್ತು’ ಎಂದು ಮಾಹಿತಿ ನೀಡಿತ್ತು.

1984ರ ಜೂನ್‌ನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ 493 ಭಯೋತ್ಪಾದಕರು ಮತ್ತು 83 ಮಂದಿ ಸೇನಾ ಸಿಬ್ಬಂದಿ ಮೃತಪಟ್ಟಿದ್ದರು ಎಂದು ಮಾಹಿತಿ ಕೊಟ್ಟಿತ್ತು.

ವಶಪಡಿಸಿಕೊಂಡ ವಸ್ತುಗಳ ನಿಖರ ಮಾಹಿತಿ ಸಿಗದೇ ಅಸಮಾಧಾನಗೊಂಡ ಛಡ್ಡಾ ಅವರು, ಸಚಿವಾಲಯದ ಹಿರಿಯ ಅಧಿಕಾರಿಗೆ ಮರುಮನವಿ ಸಲ್ಲಿಸಿದ್ದರು.

‘ದೇಶದ ಭದ್ರತೆ, ಸಾರ್ವಭೌಮತ್ವ ಮತ್ತು ಸಮಗ್ರತೆ, ಕಾರ್ಯತಂತ್ರ‘ ದೃಷ್ಟಿಯಿಂದ ನಿರ್ದಿಷ್ಟ ಮಾಹಿತಿ ನೀಡಲು ಸಚಿವಾಲಯ ನಿರಾಕರಿಸಿತ್ತು. ಆರ್‌ಟಿಐ ಕಾಯ್ದೆಯ ಸೆಕ್ಷನ್ 81 (ಎ)ಯನ್ನು ಉಲ್ಲೇಖಿಸಿತ್ತು. ಈ ಕಲಮು ಸರ್ಕಾರಕ್ಕೆ ಮಾಹಿತಿ ತಡೆಹಿಡಿಯಲು ಅವಕಾಶ ಒದಗಿಸುತ್ತದೆ.

ನಂತರ ಅರ್ಜಿದಾರರು ಕೇಂದ್ರ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿ, ‘ಕೇಂದ್ರ ಸಚಿವಾಲಯದ ಮಾಹಿತಿ ತೃಪ್ತಿದಾಯಕವಾಗಿಲ್ಲ‘ ಎಂದು ಉಲ್ಲೇಖಿಸಿದ್ದರು.

ಮಾಹಿತಿ ಆಯೋಗದ ಮುಂದೆ, ಗುರ್ವಿಂದರ್‌ ಸಿಂಗ್‌ ಛಡ್ಡಾ ಅವರಿಗೆ ಒದಗಿಸಿದ ಮಾಹಿತಿಯ ವಿವರ ನೀಡಿದ ಸಚಿವಾಲಯವು, ಕೆಲವು ವಿವರಗಳನ್ನು ದೇಶದ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ನೀಡುವಂತಿಲ್ಲ ಎಂದು ಹೇಳಿತ್ತು.

ಗುರ್ವೀಂದರ್ ಅರ್ಜಿಯನ್ನು ಪರಿಶೀಲಿಸಿದ ಆಯೋಗದ ಆಯುಕ್ತ ವೈ.ಕೆ.ಸಿನ್ಹಾ, ಸಚಿವಾಲಯ ತೆಗೆದುಕೊಂಡಿರುವ ನಿರ್ಧಾರವನ್ನು ಎತ್ತಿ ಹಿಡಿದಿದ್ದು ‘ಈ ವಿಷಯದಲ್ಲಿ ಆಯೋಗದ ಯಾವುದೇ ಹಸ್ತಕ್ಷೇಪದ ಅಗತ್ಯವಿಲ್ಲ‘ ಎಂದು ಸ್ಪಷ್ಟಪಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT