ನವದೆಹಲಿ: ಭ್ರಷ್ಟಾಚಾರ ಹಗರಣದ ಆರೋಪದಡಿ ಸದ್ಯ ಜೈಲಿನಲ್ಲಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅನುಪಸ್ಥಿತಿಯಲ್ಲಿ ಸಚಿವೆ ಅತಿಶಿ ಧ್ವಜಾರೋಹಣ ನೆರವೇರಿಸಲು ಸಾಧ್ಯವಿಲ್ಲ ಎಂದು ಸಾಮಾನ್ಯ ಆಡಳಿತ ಇಲಾಖೆ (GAD) ಹೇಳಿದೆ. ಹೀಗಾಗಿ ಈಗ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಯಾರಿಗೆ ಈ ಅವಕಾಶ ದೊರೆಯಲಿದೆ ಎಂಬ ಕುತೂಹಲ ಮೂಡಿದೆ.
ಮುಖ್ಯಮಂತ್ರಿ ಅವರ ಆದೇಶದಂತೆ ಧ್ವಜಾರೋಹಣವನ್ನು ಅತಿಶಿ ನೆರವೇರಿಸಲಿದ್ದು, ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಎಡಿ ಮಂತ್ರಿ ಗೋಪಾಲ್ ರಾಯ್ ಅಧಿಕಾರಿಗಳಿಗೆ ನಿರ್ದೇಶಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವೀನ್ ಕುಮಾರ್ ಚೌಧರಿ, ‘ಇದು ಕಾನೂನಾತ್ಮಕವಾಗಿ ಅಮಾನ್ಯ ಹಾಗೂ ಅದನ್ನು ನೆರವೇರಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.
‘ದೆಹಲಿ ಸರ್ಕಾರವು ಸ್ವಾತಂತ್ರೋತ್ಸವ ಸಮಾರಂಭಕ್ಕೆ ಸಿದ್ಧತೆ ನಡೆಸಿದೆ. ಛತ್ರಾಸಾಲ್ ಕ್ರೀಡಾಂಗಣದಲ್ಲೇ ಈ ಬಾರಿ ಧ್ವಜಾರೋಹಣ ನೆರವೇರಲಿದೆ. ಮುಖ್ಯಮಂತ್ರಿ ಅವರು ನ್ಯಾಯಾಂಗ ಬಂಧನದಲ್ಲಿರುವುದರಿಂದ, ಧ್ವಜಾರೋಹಣಕ್ಕೆ ಅವರು ಅಲಭ್ಯ. ಈ ವಿಷಯವನ್ನು ಮೇಲಿನ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರಿಂದ ನಿರ್ದೇಶನವನ್ನು ನಿರೀಕ್ಷಿಸಲಾಗುತ್ತಿದೆ’ ಎಂದು ಚೌಧರಿ ಹೇಳಿದ್ದಾರೆ.
ಕೇಜ್ರಿವಾಲ್ ಅವರನ್ನು ಗೋಪಾಲ್ ರಾಯ್ ಅವರು ಜೈಲಿನಲ್ಲಿ ಭೇಟಿ ಮಾಡಿ ಈ ವಿಷಯ ಕುರಿತು ಚರ್ಚಿಸಿದ್ದರು. ದೆಹಲಿ ಸರ್ಕಾರದ ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ಸಚಿವೆ ಅತಿಶಿ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್‌ಗೆ ಕಳೆದ ವಾರ ಪತ್ರ ಬರೆದಿದ್ದರು. ಆದರೆ ಕೇಜ್ರಿವಾಲ್ ಅವರ ಪತ್ರ ಬಂದಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಹೇಳಿದೆ.
‘ದೆಹಲಿ ಲೆಫ್ಟಿನೆಂಟ್ ಗವರ್ನರ್‌ಗೆ ಪತ್ರ ಬರೆದಿದ್ದು ಸೌಲಭ್ಯಗಳ ದುರುಪಯೋಗವಾಗಿದ್ದು, ಇದಕ್ಕೆ ದೆಹಲಿ ಕಾರಾಗೃಹ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಈ ಪತ್ರವನ್ನು ಸಂಬಂಧಿಸಿದವರಿಗೆ ಕಳುಹಿಸಿಲ್ಲ’ ಎಂದು ಕಾರಾಗೃಹ ಅಧಿಕಾರಿಗಳು ಹೇಳಿದ್ದಾರೆ.